Advertisement

Church; ಕರಾವಳಿ ಕೆಥೋಲಿಕರಿಗೆ ನಾಳೆ ಮೊಂತಿ ಹಬ್ಬದ ಸಂಭ್ರಮ

12:09 AM Sep 07, 2024 | Team Udayavani |

ಮಂಗಳೂರು: ಕರಾವಳಿ ಕೆಥೋಲಿಕರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕನ್ಯಾ ಮೇರಿ ಜನ್ಮ ದಿನವಾದ ಮೊಂತಿ ಹಬ್ಬವನ್ನು ಸೆ. 8ರಂದು ಸಂಭ್ರಮದಿಂದ ಆಚರಿಸಲಿದ್ದಾರೆ. ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ದಿನವಾದ ಈ ದಿನ ಕುಟುಂಬದ ಹಬ್ಬವೆಂದೇ ಮಹತ್ವ ಪಡೆದಿದೆ. ಈ ಹಬ್ಬವನ್ನು ಚರ್ಚ್‌ನಲ್ಲಿ ಬಲಿಪೂಜೆ, ಪ್ರಾರ್ಥನೆಯ ಬಳಿಕ ಮನೆಯಲ್ಲಿ ಸಹಭೋಜನ ಸೇವಿಸುವ ಮೂಲಕ ಆಚರಿಸಲಾಗುತ್ತದೆ.

Advertisement

ಹಬ್ಬದ ದಿನ ಬೆಳಗ್ಗೆ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಜರಗುತ್ತದೆ. ನವದಿನಗಳ ನೊವೆನಾದ ಜತೆಗೆ ಹಬ್ಬದಂದು ಮಕ್ಕಳು ಬಾಲ ಮಾತೆಗೆ ಹೂಗಳನ್ನು ಅರ್ಪಿಸುತ್ತಾರೆ. ತೆನೆ ಆಶೀರ್ವಚನ ನಡೆಸಿ ಬಲಿಪೂಜೆಯ ಅಂತ್ಯಕ್ಕೆ ಹಂಚಲಾಗುತ್ತದೆ. ಇದರೊಂದಿಗೆ ಸಿಹಿತಿಂಡಿ, ಕಬ್ಬು ವಿತರಿಸಲಾಗುತ್ತದೆ.

ಬಿಷಪ್‌ ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ರವಿವಾರ ಬೆಳಗ್ಗೆ 8 ಗಂಟೆಗೆ ರೊಸಾರಿಯೋ ಕೆಥಡ್ರಲ್‌ನಲ್ಲಿ ನಡೆಯುವ ಬಲಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಬ್ಬದ ಹಿನ್ನೆಲೆ
ಸೆಪ್ಟಂಬರ್‌ ಮಳೆಗಾಲದ ಕೊನೆಯ ತಿಂಗಳಾಗಿದ್ದು, ಈ ಸಂದರ್ಭ ಪ್ರಕೃತಿಯ ಎಲ್ಲೆಡೆ ಹಸುರುಮಯ ವಾತಾವರಣ ಇರುತ್ತದೆ. ಬೆಳೆ ಹುಲುಸಾಗಿ ಬೆಳೆದು, ನಳ ನಳಿಸಿ, ಕೊಯ್ಲಿಗೆ ಸಿದ್ಧವಾಗಿರುತ್ತವೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ವಿವಿಧ ಆಚರಣೆಗಳು ನಡೆಯುತ್ತವೆ. ಕೊಂಕಣಿ ಕೆಥೋಲಿಕರು ಇದನ್ನು “ಮೊಂತಿ ಫೆಸ್ತ್’ ಆಗಿ ಆಚರಿಸಿ ಸಂಭ್ರಮಿಸುತ್ತಾರೆ. ಮೇರಿ ಮಾತೆಯ ಜಯಂತಿಯ ಜತೆಗೆ ಕೌಟುಂಬಿಕ ಸಮ್ಮಿಲನ, ಹೊಸ ಬೆಳೆಯ ಹಬ್ಬ, ಹೆಣ್ಣು ಮಕ್ಕಳ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. ಕರಾವಳಿಯಿಂದ ಆರಂಭವಾದ ಈ ಹಬ್ಬ ಇಂದು ವಿವಿಧೆಡೆ ಸಂಭ್ರಮಿಸಲಾಗುತ್ತಿದೆ.

ಪ್ರತಿಯೊಬ್ಬ ಹೆಣ್ಣು ಮಗಳಲ್ಲಿ ಮಾತೆ ಮರಿಯಳನ್ನು ಕಾಣೋಣ
ಓರ್ವ ಹೆಣ್ಣು ಮಗಳ ಜನನ ಕುಟುಂಬದಲ್ಲಿ ಹರ್ಷ ಹಾಗೂ ಭರವಸೆ ಮೂಡಿಸುತ್ತದೆ. ದೇವರ ಯೋಜನೆ ಹಾಗೂ ಮನಕು‌ಲವನ್ನು ಮುನ್ನಡೆಸುವಲ್ಲಿ ಆಕೆಯ ಪಾತ್ರ ಮಹತ್ವದ್ದಾಗಿದೆ. ಸೃಷ್ಟಿಯ ಕಾರ್ಯದಲ್ಲಿ ದೇವರು ಆಕೆಗೆ ವಿಶೇಷ ಸ್ಥಾನ ಕಲ್ಪಿಸಿದ್ದಾರೆ. ಸಂತ ಜೊಕಿಂ ಹಾಗೂ ಸಂತ ಅನ್ನಾ ಅವರ ಏಕೈಕ ಮಗಳಾಗಿ ಜನಿಸಿದ ಮೇರಿ ಮನುಕುಲಕ್ಕೆ ಹೊಸ ನಿರೀಕ್ಷೆ ತಂದಿಟ್ಟರು. ಇಂದು ನಮ್ಮ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಬಲಾತ್ಕಾರ, ಕೊಲೆ ಇತ್ಯಾದಿಗಳನ್ನು ಗಮನಿಸಿದಾಗ ಮಹಿಳೆಯ ಮೂಲ ಹಕ್ಕುಗಳು ಅಪಾಯದಲ್ಲಿದಂತೆ ತೋರುತ್ತವೆ. ಇಂತಹ ಘಟನೆಗಳು ಕಂಡಾಗ ನಾಗರಿಕ ಸಮಾಜ ಸ್ತ್ರೀಯರಿಗೆ ಗೌರವ ನೀಡುವಲ್ಲಿ ಸೋತಿದೆ ಎಂದು ಭಾಸವಾಗುತ್ತಿದೆ. ಮಹಿಳೆಗೆ ಮಾಡುತ್ತಿರುವ ದೌರ್ಜನ್ಯ ಮಾತೆ ಮರಿಯಳಿಗೆ ಮಾಡುವ ಅವಮಾನ. ಇದು ದೇವರು ಮೆಚ್ಚುವ ಕಾರ್ಯವಲ್ಲ. ಪ್ರತಿಯೊಬ್ಬ ಮಹಿಳೆಯು ದೇವ ಮಾತೆಯ ಪ್ರತೀಕ. ಅವರಲ್ಲಿ ಮಾತೆಯ ಪ್ರತಿರೂಪ ಕಂಡುಕೊಳ್ಳಲು ಮಾತೆ ಮರಿಯ ಕರೆ ನೀಡುತ್ತಾರೆ. ಮರಿಯಳ ಜನನದ ಹಬ್ಬವು ಪ್ರತಿಯೊಬ್ಬ ಮಹಿಳೆಗೆ ಗೌರವದಿಂದ ಕಾಣಲು ಒಂದು ಸುಸಂದರ್ಭವಾಗಲಿ. ನಿಮಗೆಲ್ಲರಿಗೂ ಮಾತೆ ಮರಿಯಳ ಜನುಮ ದಿನದ ಶುಭಾಶಯಗಳು.
ಅ|ವಂ|ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ, ಮಂಗಳೂರು ಬಿಷಪ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next