Advertisement

ಕರೇಗುಡ್ಡದಲ್ಲಿ ನಾಳೆ ಸಿಎಂ ಗ್ರಾಮ ವಾಸ್ತವ್ಯ

10:46 PM Jun 24, 2019 | Team Udayavani |

ರಾಯಚೂರು: ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೂ.26ರಂದು ಗ್ರಾಮವಾಸ್ತವ್ಯ ಹೂಡಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಧಿಕಾರಿ ಶರತ್‌ ಬಿ. ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.25ರಂದು ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸುವ ಸಿಎಂ, 26ರಂದು ಬೆಳಗ್ಗೆ ನಗರಕ್ಕೆ ಆಗಮಿಸುವರು. ಅಲ್ಲಿಂದ ನೇರವಾಗಿ ಯರಮರಸ್‌ ಅತಿಥಿಗೃಹಕ್ಕೆ ತೆರಳಿ ಬಳಿಕ ಅಧಿ ಕಾರಿಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಕರೇಗುಡ್ಡ ಗ್ರಾಮಕ್ಕೆ ತೆರಳುವರು. ಅಲ್ಲಿ ಸಾರ್ವಜನಿಕರಿಂದ ಅಹವಾಲು ಆಲಿಸುವರು. ಸಂಜೆ ಸಂಘಟನೆಗಳ ಮುಖಂಡರು, ಸಾರ್ವಜನಿಕರ ಜತೆ ಚರ್ಚಿಸಿ ರಾತ್ರಿ ಕರೇಗುಡ್ಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡುವರು ಎಂದು ತಿಳಿಸಿದರು.

14 ಕೌಂಟರ್‌ ಸ್ಥಾಪನೆ: ಸಿಎಂಗೆ ಅಹವಾಲು ಸಲ್ಲಿಸಲು ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿದ್ದು, 14 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಅರ್ಜಿ ಸಲ್ಲಿಸಲು ಬಂದವರು ಮೊದಲು ಹೆಸರು ನೋಂದಣಿ ಮಾಡಬೇಕು. ಸಿಎಂ ಕಚೇರಿಯಿಂದ ನೀಡಲಾದ ಅರ್ಜಿ ನಮೂನೆ ಭರ್ತಿ ಮಾಡಬೇಕು. ಅದರಲ್ಲಿ ಸಮಸ್ಯೆ ದಾಖಲಿಸಬೇಕು. ಎಲ್ಲರಿಗೂ ಅಹವಾಲು ಸಲ್ಲಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಆದ್ಯತೆ ಆಧಾರದ ಮೇಲೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಂಗವಿಕಲರಿಗೆ ಮೊದಲಾದ್ಯತೆ ನೀಡಿದರೆ, ಮಹಿಳೆಯರು, ಮಕ್ಕಳಿಗೆ ನಂತರ ಅವಕಾಶ ನೀಡಲಾಗುವುದು. ಬಳಿಕ ಸಾರ್ವಜನಿಕರು, ಸಂಘಟನೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಸೂಕ್ತ ಬಂದೋಬಸ್ತ್: ಕರೇಗುಡ್ಡ ಗ್ರಾಮಕ್ಕೆ ತೆರಳಲು ಇರುವ ದಾರಿ ಚಿಕ್ಕದಾಗಿರುವ ಕಾರಣ ಸುಮಾರು 1ಕಿ.ಮೀ. ದೂರದಲ್ಲಿರುವ ಕ್ರಾಸ್‌ ಬಳಿಯೇ ವಾಹನಗಳಿಗೆ ನಿಷೇಧ ಹೇರಲಾಗಿದೆ. ಅಲ್ಲಿಂದ ಓಡಾಡಲು ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಂದಾಜು 15 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದರು.

Advertisement

ಮಳೆ ಬರುವ ಸಾಧ್ಯತೆ: ಜಿಲ್ಲೆಯಲ್ಲೂ ಜೂ.26ರಂದು ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಈಗ ಸಜ್ಜುಗೊಳಿಸುತ್ತಿರುವ ಜಮೀನನ್ನು ಮರಂನಿಂದ ಬಿಗಿ ಮಾಡಲಾಗಿದೆ. ವೇದಿಕೆ ಭಾಗದಲ್ಲೆಲ್ಲ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳ ಜತೆ ಸಮಾಲೋಚನೆ: ಶಾಸಕ ಶಿವನಗೌಡ ನಾಯಕರ ಜತೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರು ಭಾನುವಾರ ಸಭೆ ನಡೆಸಿದ್ದಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚಿಸಿದ್ದಾರೆ. ಅವರ ಕೆಲವು ಪ್ರಮುಖ ಬೇಡಿಕೆಗಳಿಗೆ ಸಂಪುಟದ ಒಪ್ಪಿಗೆ ಬೇಕಿದ್ದು, ಸಚಿವರು ಬೆಂಗಳೂರಿಗೆ ತೆರಳಿದ್ದಾರೆ. ಆದರೂ ಶಾಸಕರು ಪಾದಯಾತ್ರೆ ಆರಂಭಿಸಿದ ಮಾಹಿತಿ ಇದೆ. ಮುಂದೆ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ವೈಟಿಪಿಎಸ್‌ ಕಾರ್ಮಿಕರ ಬೈಕ್‌ ರ್ಯಾಲಿಗೆ ಪರವಾನಗಿ ನೀಡಿಲ್ಲ ಎಂದು ಡಿಸಿ ಶರತ್‌ ಬಿ. ತಿಳಿಸಿದರು.

ಮಾನ್ವಿ ಶಾಸಕರ 50 ಲಕ್ಷ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಅದರ ಜತೆಗೆ ಟಿಎಸ್‌ಪಿ, ಎಸ್‌ಸಿಪಿ ಯೋಜನೆಯಡಿ 1.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಸಾಲ ಮನ್ನಾ ಫಲಾನುಭವಿಗಳಿಗೆ ಋಣಮುಕ್ತ ಪತ್ರ ನೀಡಲಾಗುವುದು.
-ಶರತ್‌ ಬಿ., ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next