ಮಂಗಳೂರು/ ಉಡುಪಿ: ಚಂದ್ರಗ್ರಹಣ ಪ್ರಯುಕ್ತ ಆ. 7ರಂದು ಕರಾವಳಿಯ ಪ್ರಮುಖ ಮಠ, ಮಂದಿರಗಳ ಪೂಜೆ, ಪ್ರಸಾದ ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಭಕ್ತರು ಗಮನಿಸುವಂತೆ ಸೂಚಿಸಲಾಗಿದೆ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾತ್ರಿಯ ಮಹಾಪೂಜೆ ಸಂಜೆ 6 ಗಂಟೆಗೆ ನಡೆಯಲಿದೆ. 6.30ರಿಂದ ದೇಗುಲದಲ್ಲಿ ಭಕ್ತರಿಗೆ ದೇವರ ದರ್ಶನ ಸಹಿತ ರಾತ್ರಿಯ ಭೋಜನ ಪ್ರಸಾದ ಇರುವುದಿಲ್ಲ. ಬೆಳಗ್ಗಿನ ಮತ್ತು ಮಧ್ಯಾಹ್ನದ ನಿತ್ಯ ಸೇವೆಗಳು ಎಂದಿನಂತೆಯೇ ನಡೆಯಲಿವೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಉಡುಪಿ ಶ್ರೀಕೃಷ್ಣ ಮಠ: ಉಡುಪಿ ಶ್ರೀಕೃಷ್ಣಮಠದಲ್ಲಿ ಪೂಜೆಗಳು ಎಂದಿನಂತೆಯೇ ನಡೆಯಲಿವೆ. ಮಧ್ಯಾಹ್ನದ ಭೋಜನ ಪ್ರಸಾದ 12 ಗಂಟೆಯಿಂದ 1.30ರೊಳಗೆ ಮುಗಿಯಲಿದೆ.ರಾತ್ರಿ ಭೋಜನ ಇರುವುದಿಲ್ಲ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ ಮುಗಿಯುತ್ತದೆ. ರಾತ್ರಿ ಪೂಜೆ ಅಪರಾಹ್ನ 3 ಗಂಟೆಗೆ ನಡೆಯಲಿದೆ. ರಾತ್ರಿ ಊಟದ ವ್ಯವಸ್ಥೆ ಇರುವುದಿಲ್ಲ. ಸಂಜೆ ಆದ್ಯತೆ ಮೇರೆಗೆ ಫಲಾಹಾರ ವ್ಯವಸ್ಥೆ ಇದೆ. ರಾತ್ರಿ ಗ್ರಹಣದ ಅವಧಿಯಲ್ಲಿ ಶ್ರೀ ದೇವಿಗೆ ಸೀಯಾಳ ಅಭಿಷೇಕ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಧರ್ಮಸ್ಥಳ: ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಣ್ಣ ಮಟ್ಟಿನ ಬದಲಾವಣೆಯಷ್ಟೇ ಮಾಡಲಾಗಿದೆ. ಹಗಲು ದೇವರ ದರ್ಶನ, ಪೂಜೆ, ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಾತ್ರಿ ವೇಳೆ 8.30ರ ಬದಲಿಗೆ 8 ಗಂಟೆಗೆದೇವರ ದರ್ಶನದ ಸರತಿ ಸಾಲು ನಿಲ್ಲಿಸಲಾಗುವುದು. ಅನಂತರ ದೇವರ ದರ್ಶನ, ಸೇವೆಗೆ ಅವಕಾಶ ಇಲ್ಲ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.