ನವದೆಹಲಿ: ತರಕಾರಿ ಬೆಳೆಗಳ ದರ ಏರಿಕೆಯ ನಡುವೆಯೇ ಶುಂಠಿ, ಹಸಿಮೆಣಸು ಬೆಲೆಗಳು ಏರಿದ್ದು, ಮತ್ತೊಂದೆಡೆ ಅಗ್ಗವೆಂದೇ ಪರಿಗಣಿಸಲ್ಪಟ್ಟಿರುವ ಟೊಮ್ಯಾಟೊ ಬೆಲೆ ಉತ್ತರಾಖಂಡ್ ನ ಗಂಗೋತ್ರಿ ಧಾಮ್ ನಲ್ಲಿ ಪ್ರತಿ ಕೆಜಿಗೆ 250 ರೂಪಾಯಿಯಾಗಿದ್ದು, ಉತ್ತರಕಾಶಿ ಜಿಲ್ಲೆಯಲ್ಲಿ 180ರಿಂದ 200 ರೂಪಾಯಿಗೆ ಮಾರಾಟವಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ.
ಇದನ್ನೂ ಓದಿ:ಇಂದು ರಿಷಬ್ ಶೆಟ್ಟಿ ಬರ್ತ್‌ಡೇ: ಅಭಿಮಾನಿಗಳ ಜೊತೆ ಅದ್ಧೂರಿ ಆಚರಣೆ
ಈ ಪ್ರದೇಶದಲ್ಲಿ ಟೊಮ್ಯಾಟೊ ಬೆಲೆ ದಿಢೀರನೆ ಹೆಚ್ಚಳವಾಗಿದೆ ಎಂದು ಉತ್ತರಾಖಂಡ್ ನ ತರಕಾರಿ ಮಾರಾಟಗಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಉತ್ತರಕಾಶಿಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ಜನರು ಕಂಗೆಡುವಂತಾಗಿದೆ. ಟೊಮ್ಯಾಟೋ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಗಂಗೋತ್ರಿ, ಯಮುನೋತ್ರಿಯಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕೆಜಿಗೆ 250 ರೂಪಾಯಿಗೆ ಏರಿಕೆಯಾಗಿದೆ ಎಂದು ತರಕಾರಿ ಮಾರಾಟಗಾರರು ಎಎನ್ ಐಗೆ ತಿಳಿಸಿದ್ದಾರೆ.
ಟೊಮ್ಯಾಟೊ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಬಿಸಿಲ ತಾಪ ಹಾಗೂ ಕೆಲವೆಡೆ ಭಾರೀ ಮಳೆಯ ಪರಿಣಾಮ ಟೊಮ್ಯಾಟೋ ಸರಬರಾಜು ಮಾಡಲು ತೊಂದರೆಯುಂಟಾಗಿದ್ದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವರದಿ ವಿವರಿಸಿದೆ.
ಕರ್ನಾಟಕದಲ್ಲಿಯೂ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು, ಚೆನ್ನೈನಲ್ಲಿ ಟೊಮ್ಯಾಟೋ ಪ್ರತಿ ಕೆಜಿಗೆ 130 ರೂಪಾಯಿಯಾಗಿದ್ದು, ಇಲ್ಲಿ ತಮಿಳುನಾಡು ಸರ್ಕಾರ ರೇಷನ್ ಅಂಗಡಿಗಳಲ್ಲಿ ಟೊಮ್ಯಾಟೋವನ್ನು ಸಬ್ಸಿಡಿ ದರದಲ್ಲಿ ಪ್ರತಿ ಕೆಜಿಗೆ 60 ರೂಪಾಯಿಯಂತೆ ಮಾರಾಟ ಮಾಡುತ್ತಿದೆ.