ಮುಳಗುಂದ: ಸ್ಥಳೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ಮೂರು ವಾರಗಳಿಂದ ದಿಢೀರ್ ಟೊಮ್ಯಾಟೊ ದರ ಕುಸಿತ ಕಂಡಿದ್ದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಫಸಲಿಗೆ ಬಂದ ಬೆಳೆ ತೀರಾ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಟ್ರೆ ಲೆಕ್ಕದಲ್ಲಿ ಮಾರುಕಟ್ಟೆಗೆ ಬರುವ ಬೆಳೆ ಕನಿಷ್ಠವೆಂದರೂ ಇತ್ತಪ್ಪು ಕೇಜಿ ತೂಕದ ಟ್ರೆಗೆ 200ರಿಂದ 300 ರೂ. ದರ ಸಿಗುತ್ತಿತ್ತು. ಆದರೆ ಇತ್ತೀಚೆಗೆ ದಿಢೀರ್ ಕುಸಿತ ಕಂಡಿದ್ದರಿಂದ ಟ್ರೆ ಒಂದಕ್ಕೆ 80 ರೂ.ಗೆ ಕುಸಿತ ಕಂಡಿದ್ದು, ರೈತರು ಮಾಡಿದ ಖರ್ಚು, ದೂರದ ಸಾಗಣಿಕೆ ವೆಚ್ಚದಿಂದ ಮತ್ತಷ್ಟು ಆರ್ಥಿಕ ಕುಸಿತದಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸದ್ಯ ಗದಗ ಗ್ರಾಮಾಂತರ ಭಾಗದಲ್ಲಿ ನೀರಾವರಿ ಪ್ರದೇಶ ಹೊಂದಿದ ರೈತರು ಬೇಸಿಗೆ ಫಸಲಾಗಿ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆದಿದ್ದು, ದರ ಕುಸಿತದಿಂದ ಮಾರುವುದೆ ಸಮಸ್ಯೆಯಾಗಿದೆ. ಕಟಾಗಿಗೆ ಬಂದ ಮಾಲನ್ನು ಪ್ರತಿನಿತ್ಯ ಹರಿದು ಮಾರುಕಟ್ಟೆಗೆ ಸಾಗಣೆ ಮಾಡಲೇ ಬೇಕು, ಇಲ್ಲವಾದರೆ ಕೊಳೆತು ನಾಶವಾಗುತ್ತದೆ. ಮಾರುಕಟ್ಟೆ ಬಂದರೆ ಕೇಳುವವರೆ ಗತಿ ಇಲ್ಲದಂತಾಗಿ ರಸ್ತೆ ಬದಿಯಲ್ಲಿ ಸ್ವತಃ ರೈತರೆ ವ್ಯಾಪಾರಿಗಳನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡಿ ಬರುವಂತಾಗಿದೆ. ಒಟ್ಟಾರೆ ರೈತರಿಗೆ ದರ ಕುಸಿತ, ಅತಿವೃಷ್ಟಿ, ಬರಗಾಲದಂಥ ಭೀಕರತೆಗಳು ಪದೇ ಪದೆ ಸಂಭವಿಸಿ ಪ್ರತಿ ಹಂಗಾಮಿನಲ್ಲಿ ನಷ್ಟ ಅನುಭವಹಿಸಿ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಬೇಸಿಗೆಯಲ್ಲಿ ಉತ್ತಮ ಬೆಳೆ ಸಿಗುತ್ತದೆ ಎಂಬ ಆಶಾಭಾವನೆಯಿಂದ ನಾಟಿ ಹಂತದಿಂದ ಕಟಾವಿನ ವರೆಗೂ ಸಾಕಷ್ಟು ಖರ್ಚು ಮಾಡಿ ಶ್ರಮವಹಿಸಿ ದುಡಿದರೂ ನಮ್ಮ ಮಾಲಿಗೆ ಬೆಲೆ ಇಲ್ಲ. ಹೀಗಾಗಿ ಇಂದು ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿಕೊಂಡು ಒತ್ತಾಯಪೂರ್ವಕವಾಗಿ ಮಾರಾಟ ಮಾಡುವಂತಾಗಿದೆ. ದರ ಕುಸಿತದಿಂದ ಮಾಡಿದ ಖರ್ಚು ಮೈಮೇಲೆ ಬಂದಿದೆ.-
ಶಿವಮೂರ್ತಿ ಕರಿಗೌಡ್ರ, ಸೊರಟೂರ ರೈತ