Advertisement

Tomato price; ಹೆಚ್ಚಿದ ಟೊಮಾಟೋ ಆವಕ: ಬೆಲೆ ಇಳಿಮುಖ

05:42 PM Aug 07, 2023 | Team Udayavani |

ಕೋಲಾರ:  ಕೇವಲ ಮೂರೇ ದಿನಗಳ ಅಂತರದಲ್ಲಿ ಟೊಮಾಟೋ ತನ್ನ ಗರಿಷ್ಠ ಬೆಲೆಯನ್ನು ಒಂದು ಸಾವಿರ ರೂಗಳಷ್ಟು ಇಳಿಸಿಕೊಂಡು ಗಮನ ಸೆಳೆದಿದೆ.

Advertisement

ಕಳೆದ ಒಂದು ತಿಂಗಳಿನಿಂದಲೂ ದಿನದಿಂದ ದಿನಕ್ಕೆ ಧಾರಣೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದ್ದ ಟೊಮಾಟೋ 3 ದಿನಗಳ ಹಿಂದಷ್ಟೇ ಕೋಲಾರ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್‌ಗೆ 2700 ರೂ ದಾಖಲಿಸಿತ್ತು.

ಕೋಲಾರ ಟೊಮಾಟೋ ಇತಿಹಾಸದಲ್ಲಿಯೇ ಪ್ರತಿ 15 ಕೆಜಿ ಬಾಕ್ಸ್‌ 2700 ರೂಗಳಿಗೆ ಹರಾಜಾಗಿದ್ದು, ಮಂಡ್ಯದ ರೈತ ಗಿರೀಶ್‌ ಸುಮಾರು 73 ಬಾಕ್ಸ್‌ಗಳಿಗೆ ಇದೇ ಧಾರಣೆಯಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ಆದಾಯ ಗಳಿಸಿದ್ದರು. ಅದೇ ದಿನ ಆಂಧ್ರಪ್ರದೇಶದ ಚಿತ್ತೂರಿನ ರೈತ ಮಂಜುನಾಥ್‌ 2500 ರೂಗಳ ಧಾರಣೆ ಪಡೆದುಕೊಂಡಿದ್ದರು.

ಕೋಲಾರ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿರುವ ಹಿನ್ನೆಲೆಯಲ್ಲಿ ದೂರದ ಊರುಗಳಿಂ ದಲೂ ಟೊಮಾಟೋ ಆವಕವಾಗುತ್ತಿದ್ದು, ಮೂರು ದಿನಗಳಲ್ಲಿ ಪ್ರತಿ ಬಾಕ್ಸ್‌ ಟೊಮೆಟೋ ಧಾರಣೆ ಒಂದು ಸಾವಿರ ರೂ. ಕಡಿಮೆಯಾಗುವಂತಾಗಿದೆ.

ದೂರ ದೂರಿನ ಟೊಮಾಟೋ : ಕೋಲಾರ ಮಾರುಕಟ್ಟೆಗೆ ಸದ್ಯ ಕೋಲಾರ ತಾಲೂಕು ಹಾಗೂ ಸುತ್ತಮುತ್ತಲ ರೈತರ ಟೊಮಾಟೋ ಆವಕವಾಗುತ್ತಿರುವುದು ತೀರಾ ಕಡಿಮೆಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ರೈತರು ಈ ಬಂಪರ್‌ ಟೊಮಾಟೋ ಸೀಸನ್‌ನಲ್ಲಿ ಲಾಭ ಮಾಡಿಕೊಂಡಿದ್ದಾರೆ. ಉಳಿದಂತೆ ಐದು ತಾಲೂಕುಗಳ ಬೆಳೆ ಬಾರದೆ ರೈತರು ಲಾಭದ ರುಚಿ ಸವಿಯಲಾಗಲಿಲ್ಲ.

Advertisement

ಶ್ರೀನಿವಾಸಪುರ ಜೊತೆಗೆ ಚಿತ್ರದುರ್ಗದ ಚಳ್ಳಕೆರೆ, ಆಂಧ್ರಪ್ರದೇಶ ಚಿತ್ತೂರಿನ ಮಲಕಲಚೆರೆವು, ಬೀರಂಗಿ ಕೊತ್ತಕೋಟ, ಅನಂತಪುರ ಸಮೀಪದ ಕಲ್ಯಾಣದುರ್ಗ, ತುಮಕೂರು, ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹೆಚ್ಚು ಟೊಮಾಟೋ ಆವಕವಾಗುತ್ತಿದೆ. ಕೋಲಾರ ಮಾರುಕಟ್ಟೆಯ ಬಹುತೇಕ ಲಾಭಾಂಶ ಈ ಭಾಗದ ರೈತರಿಗೆ ದಕ್ಕುತ್ತಿದೆ.

ಟೊಮಾಟೋಗೆ ರೋಗಬಾಧೆ: ಕೋಲಾರ ಜಿಲ್ಲೆ  ಯಲ್ಲಿ ಸತತವಾಗಿ ಟೊಮೆಟೋ ಬೆಳೆ ತೆಗೆದು ಫಲವತ್ತತೆ ಕಳೆದುಕೊಂಡ ಭೂಮಿ, ಬಿಳಿ ನೊಣಗಳ ಹಾವಳಿ, ಮುದುರು ರೋಗ, ಅಕಾಲಿಕ ಮಳೆ ಮತ್ತಿತರ ಸಮಸ್ಯೆಗಳಿಂದ ಟೊಮಾಟೋ ಶೇ.30 ರಷ್ಟು ಫಸಲು ಕೈಗೆ ಸಿಗುತ್ತಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಟೊಮೆಟೋ ಬೆಳೆದು ಕೈಸುಟ್ಟುಕೊಂಡವರೇ ಹೆಚ್ಚಾಗಿದ್ದರಿಂದ ಬಹುತೇಕರೈತರು ಟೊಮಾಟೋ ಬೆಳೆಯುದನ್ನು ನಿಲ್ಲಿಸಿಬಿಟ್ಟಿದ್ದರು. ಇದರಿಂದಾಗಿ ಸುಭಿಕ್ಷ ಕಾಲದಲ್ಲಿ ಕೋಲಾರ ರೈತರು ಲಾಭಾಂಶ ನೋಡದಂತಾಗಿದೆ.

ಬದಲೀ ಬಳಕೆ, ಬೇಡಿಕೆ ಕಡಿಮೆ:  ಟೊಮೇಟೋ ಧಾರಣೆ ಗಗನಕ್ಕೇರುತ್ತಿರುವಂತೆಯೇ ಸಾಮೂಹಿಕವಾಗಿ ಅಡುಗೆ ಮಾಡುವ ಸ್ಥಳಗಳಾದ ಕ್ಯಾಟರಿಂಗ್‌, ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಹಾಸ್ಟೆಲ್‌ ಮತ್ತಿತರೆಡೆಗಳಲ್ಲಿ ಟೊಮಾಟೋ ಬದಲಿಗೆ ಹುಣಿಸೆ, ನಿಂಬೆ ಮತ್ತು ಪರ್ಯಾಯ ಹುಳಿ ಪುಡಿ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ.  ಸಾಮಾನ್ಯವಾಗಿ 1 ಅಥವಾ 2 ಕೆಜೆ ಟೊಮಾಟೋ ಖರೀದಿ ಮಾಡುತ್ತಿದ್ದ ಮನೆಗಳವರು ಈಗ ಅಗತ್ಯಕ್ಕೆ ತಕ್ಕಂತೆ 100-200 ಗ್ರಾಂ ಟೊಮಾಟೋ ಮಾತ್ರವೇ ಖರೀದಿಸುತ್ತಿದ್ದಾರೆ. ಬದಲೀ ಬಳಕೆಯಿಂದಾಗಿ ಟೊಮಾಟೋ ಬೇಡಿಕೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಿಂದಿನಂತೆ ಕಂಡು ಬರುತ್ತಿಲ್ಲ. ತೀರಾ ಅಗತ್ಯವಿರುವೆಡೆ ಮಾತ್ರವೇ ಟೊಮಾಟೋವನ್ನು ಬಳಕೆ ಮಾಡಲಾಗುತ್ತಿದೆ.

ಆಕ್ಟೋಬರ್‌ ವೇಳೆಗೆ ಕೋಲಾರ ರೈತರ ಫಸಲು: ಕೋಲಾರ ರೈತರು ಮತ್ತೇ ಟೊಮಾಟೋ ನಾಟಿ ಮಾಡುತ್ತಿದ್ದು, ಸುಮಾರು ಎರಡೂವರೆತಿಂಗಳ ನಂತರ ಅಂದರೆ ಅಕ್ಟೋಬರ್‌ ಮೊದಲವಾರದ ನಂತರ ಕೋಲಾರ ರೈತರ ಟೊಮೆಟೋ ಮಾರುಕಟ್ಟೆಗೆ ಆವಕವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಟೊಮಾಟೋ ಧಾರಣೆ ಇನ್ನೂ ಒಂದು ತಿಂಗಳ ಕಾಲವಾದರೂ ಉಚ್ಛಾರ್ಯ ಸ್ಥಿತಿಯಲ್ಲಿರುತ್ತದೆ ಎಂಬ ನಿರೀಕ್ಷೆ ಸುಳ್ಳಾಗುವಂತೆ ಕೇವಲ ಎರಡು ಮೂರು ದಿನಗಳಲ್ಲಿಯೇ ಧಾರಣೆ ಒಂದು ಸಾವಿರ ರೂಗಳಷ್ಟು ಕುಸಿದಿರುವುದು ಮಾರುಕಟ್ಟೆ ಧಾರಣೆಯ ಏರಿಳಿತ ಸೂಚಿಸುತ್ತಿದೆ.

ಐತಿಹಾಸಿಕ ದಾಖಲೆ: ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಟೊಮಾಟೋ ತವರೆನಿಸಿಕೊಂಡಿರುವ ಹಾಗೂ ಏಷ್ಯಾದ ಅತಿ ದೊಡ್ಡ ಎರಡನೇ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಕೋಲಾರ ಟೊಮಾಟೋ ಮಾರುಕಟ್ಟೆಯು ಧಾರಣೆಯಲ್ಲಿ ಹಿಂದಿನ ಐತಿಹಾಸಿಕ ಎನ್ನಲಾಗಿದ್ದ 1800 ರೂ. ದಾಖಲೆಯನ್ನು ಅಳಿಸಿ ಹೊಸದಾಗಿ 2000ರೂ, 2200 ರೂ, 2500, 2700 ರೂವರೆಗೂ ಬೆಲೆ ದೊರೆತಿದ್ದು, ಈಗಿನ ಆವಕ ಮತ್ತು ಟೊಮಾಟೋ ನಾಟಿ ಪ್ರಮಾಣವನ್ನು ನೋಡಿದರೆ ಸದ್ಯಕ್ಕೆ ಟೊಮಾಟೋ ಮತ್ತೇ 2700 ದಾಖಲೆ ಮುರಿಯುವುದು ಕಷ್ಟವೇ ಎನಿಸುತ್ತಿದೆ.

ರೈತರಿಗೆ ನಷ್ಟವೇನಿಲ್ಲ :

ಒಂದು ಸಾವಿರ ರೂಗಳಷ್ಟು ಒಂದು ಬಾಕ್ಸ್‌ ಮೇಲೆ ಧಾರಣೆ ಕಡಿಮೆಯಾದರೂ ಗುಣಮಟ್ಟದ ಟೊಮಾ ಟೋ ತಂದಿರುವ ರೈತರಿಗೆ ನಷ್ಟವೇನಿಲ್ಲ ಎನ್ನಲಾಗುತ್ತಿದೆ. ಅದು ಸಾವಿರಕ್ಕಿಂತಲೂ ಕಡಿಮೆ ಕುಸಿದಾಗ ಮಾತ್ರವೇ ದೂರದೂರಿನಿಂದ ಟೊಮೆಟೋ ಸಾಗಿಸಿಕೊಂಡು ಬರುವ ರೈತರಸಾಗಾಣಿಕೆ ವೆತ್ಛವೂ ಸಿಗದಂತಾಗುತ್ತದೆ. ಆದ್ದರಿಂದ ಧಾರಣೆ 1500 ರೂ.ವರೆಗೂ ದೂರದ ಊರುಗಳ ಟೊಮೆಟೋ ಆವಕ ನಿರೀಕ್ಷಿಸಬಹುದು.

ಕೆ.ಸಿ. ವ್ಯಾಲಿ ನೀರು ಹಾಗೂ ರೋಗ ಬಾಧೆಯಿಂದಾಗಿ ಕೋಲಾರ ಜಿಲ್ಲೆ ಯಲ್ಲಿ ಟೊಮಾಟೋ ಫಸಲುಕಡಿಮೆಯಾಗಿ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಸಿಗದೆ ಜುಲೈ ತಿಂಗಳಿನಲ್ಲಿ ಧಾರಣೆ 2700 ರೂವರೆಗೂ ತಲುಪುವಂತಾಗಿತ್ತು. ಇದೀಗ ದೂರದ ಊರುಗಳಿಂದ ಟೊಮೆಟೋ ಆವಕವಾಗುತ್ತಿದ್ದು ಧಾರಣೆ ಕಡಿಮೆಯಾಗುವಂತಾಗಿದೆ.-ಸಿಎಂಆರ್‌ ಶ್ರೀನಾಥ್‌, ಟೊಮಾಟೋ ಮಂಡಿ ಮಾಲೀಕರು.

ಟೊಮಾಟೋ ಆವಕ ಜುಲೈ ತಿಂಗಳಿನಲ್ಲಿ ನಿತ್ಯವೂ ಸರಾಸರಿ 7 ರಿಂದ 8 ಸಾವಿರ ಕ್ವಿಂಟಾಲ್‌ ಮಾತ್ರವೇ ಇರುತ್ತಿತ್ತು. ಶುಕ್ರವಾರ 10,600ಕ್ವಿಂಟಲ್‌ ಆವಕವಾಗಿದೆ. ಆದ್ದರಿಂದ ಧಾರಣೆ ಕುಸಿಯುತ್ತಿದ್ದು ,ಕೋಲಾರ ಮಾರುಕಟ್ಟೆಯಲ್ಲಿ 400-1500 ರೂಗಳವರೆಗೆ ಮಾತ್ರವೇ ಧಾರಣೆ ಸಿಕ್ಕಿದೆ. -ವಿಜಯಲಕ್ಷ್ಮಿ, ಕಾರ್ಯದರ್ಶಿ, ಕೋಲಾರ ಎಪಿಎಂಸಿ ಮಾರುಕಟ್ಟೆ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next