Advertisement

ಗಗನಕ್ಕೇರಿದ ಟೊಮೇಟೊ ಬೆಲೆ…ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

10:58 PM Jun 29, 2023 | Team Udayavani |

ದೇಶದಲ್ಲಿ ಟೊಮೇಟೊ ಬೆಲೆ ಏರಲು ಮುಖ್ಯವಾಗಿ ಮಳೆ ಕಾರಣ. ಜತೆಗೆ ಎಪ್ರಿಲ್‌-ಮೇ ತಿಂಗಳುಗಳಲ್ಲಿ ದಿಢೀರನೆ ಇಳಿಕೆಯಾದ ಟೊಮೇಟೊ ಬೆಲೆ ಕಳೆದ ಕೆಲವು ತಿಂಗಳುಗಳಲ್ಲಿ ಕಂಡುಬಂದ ಅತೀಯಾದ ತಾಪಮಾನ ಟೊಮೇಟೊ ಉತ್ಪಾದನೆ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಭಾರತದಲ್ಲಿ ಟೊಮೇಟೊವನ್ನು ಎರಡು ಋತುಗಳಲ್ಲಿ ಬೆಳೆಯಲಾಗುತ್ತದೆ. ರಬಿ ಹಾಗೂ ಖಾರಿಫ್ ಬೆಳೆ. ರಬಿ ಬೆಳೆಯನ್ನು ಮಹಾರಾಷ್ಟ್ರದ ಜುನಾರ್‌ ತಾಲೂಕು ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್‌ ಹಾಗೂ ಛತ್ತೀಸ್‌ಗಢದ ಕೆಲವು ಭಾಗಗಳಲ್ಲಿ ಬೆಳೆಯಲಾಗುತ್ತದೆ. ಅಂದಾಜು 5 ಲಕ್ಷ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಟೊಮೇಟೊ ಬೆಳೆಯಲಾಗುತ್ತದೆ.

Advertisement

ಹೀಗೆ ಬೆಳೆಯಲಾದ ಟೊಮೇಟೊ ಮಾರ್ಚ್‌ ಮತ್ತು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬರುತ್ತವೆ. ಆಗಸ್ಟ್‌ನ ಬಳಿಕ ಉತ್ತರ ಪ್ರದೇಶ, ಮಹಾರಾಷ್ಟ್ರದ ನಾಸಿಕ್‌ನಿಂದ ಬರುವ ಖಾರಿಫ್ ಬೆಳೆಯ ಟೊಮೇಟೊ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಖಾರಿಫ್ ಋತುವಿನಲ್ಲಿ ಅಂದಾಜು 8-9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೇಟೊವನ್ನು ಬೆಳೆಯಲಾಗುತ್ತದೆ.

ಬೆಲೆ ಹೆಚ್ಚಳಕ್ಕೆ ಕಾರಣಗಳೇನು?
ಸಾಮಾನ್ಯವಾಗಿ ಟೊಮೇಟೊ ಬೆಳೆ ಮೂರು ತಿಂಗಳಲ್ಲಿ ಸಿದ್ಧವಾಗುತ್ತದೆ. ಮೊದಲ ಹಂತದ ಬೆಳೆ ಎಪ್ರಿಲ್‌ನ ವರೆಗೆ ಹಾಗೂ ಎರಡನೇ ಹಂತದ ಬೆಳೆ ಆಗಸ್ಟ್‌ನ ವರೆಗೆ ಮಾರುಕಟೆಯಲ್ಲಿರುತ್ತವೆ. ರಬಿ ಟೊಮೇಟೊ ಉತ್ಪಾದನ ವೆಚ್ಚವು ಸರಾಸರಿ ಕೆ.ಜಿ.ಗೆ 12 ರೂ., ಖಾರಿಫ್ ಬೆಳೆಯು ಕೆ.ಜಿ.ಗೆ 10 ರೂ. ವೆಚ್ಚ ತಗಲುತ್ತದೆ. ಆದರೆ ಈ ಬಾರಿ ಮಾರ್ಚ್‌-ಎಪ್ರಿಲ್‌ನಲ್ಲಿ ಮಾರುಕಟ್ಟೆ ಬೆಲೆಯು ಕೆ.ಜಿ.ಗೆ 5-10 ರೂ., ಎಪ್ರಿಲ್‌ನಲ್ಲಿ 5-15 ರೂ.ನಷ್ಟಿತ್ತು.

ಇದರಿಂದ ರೈತರು ಟೊಮೇಟೊ ಬೆಳೆಯಿಂದ ನಷ್ಟ ಅನುಭವಿಸುವಂತಾಗಿತ್ತು. ಅಲ್ಲದೇ ಈ ಬಾರಿಯ ಬೇಸಗೆಯಲ್ಲಿ ಹುಳುಗಳ ಬಾಧೆಯಿಂದ ಟೊಮೇಟೊ ಬೆಳೆ ಹಾಳಾಗಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಮಾರ್ಚ್‌ – ಎಪ್ರಿಲ್‌ನಲ್ಲಿ ಟೊಮೆಟೋ ಬೆಳೆಯು ಉತ್ತಮ ಗುಣಮಟ್ಟದ್ದಾಗಿರಲಿಲ್ಲ, ಹಾಗಾಗಿ ಬೆಲೆಯೂ ತೀರಾ ಕುಸಿದಿತ್ತು. ಅದರಲ್ಲೂ ದಕ್ಷಿಣ ಭಾರತದಲ್ಲಿ ತೀವ್ರವಾದ ಬಿಸಿಲಿನಿಂದ ಟೊಮೇಟೊ ಬೆಳೆಗೆ ಎಲೆ ಸುರುಳಿ ರೋಗ ಕಾಡಿತ್ತು. ಇದರಿಂದಾಗಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗಿಲ್ಲ. ಇವೆಲ್ಲದರ ಪರಿಣಾಮ ದೇಶದ ಬಹುತೇಕ ಎಲ್ಲೆಡೆ ಟೊಮೇಟೊ ಧಾರಣೆ 100 ರೂ.ಗಳ ಆಸುಪಾಸಿನಲ್ಲಿಯೇ ಇದೆ.

ದೇಶದಲ್ಲಿ ದಿಢೀರನೆ
ಹೆಚ್ಚಿದ ಅಗತ್ಯ ವಸ್ತುಗಳು ಹಾಗೂ ತರಕಾರಿಗಳು ಬೆಲೆಯು ಜನರನ್ನು ಚಿಂತೆಗೀಡು ಮಾಡಿದೆ. ಒಂದು ಕಡೆ ಸರಿಯಾಗಿ ಸುರಿಯದ ಮುಂಗಾರು ರೈತಾಪಿ ವರ್ಗವನ್ನು ಮುಂದೇನು ಎಂದು ಆಲೋಚಿಸುವಂತೆ ಮಾಡಿದ್ದರೆ, ಅದರೊಂದಿಗೆ ಗಗನಕ್ಕೇರಿದ ಬೆಲೆಯೂ ಜನರನ್ನು ಅತಂತ್ರವಾಗಿಸಿದೆ. ಅದರಲ್ಲೂ ವಾರಗಳ ಹಿಂದೆ ಕೆ.ಜಿ.ಗೆ 30 ರೂ. ಇದ್ದ ಟೊಮೇಟೊ ಬೆಲೆಯು ಇಂದು ಕೆ.ಜಿ.ಗೆ 100 ರೂ.ಗಳನ್ನು ದಾಟಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಜನತೆಯ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ಈ ಮಧ್ಯೆ ಸರಕಾರ ಬೆಲೆ ಹೆಚ್ಚಳ ತಾತ್ಕಾಲಿಕವಾಗಿದ್ದು ಮುಂದಿನ ಕೆಲವೇ ದಿನಗಳಲ್ಲಿ ಇಳಿ ಮುಖವಾಗಲಿದೆ ಎಂದು ಹೇಳಿದ್ದರೂ, ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿದಾಗ ಟೊಮೇಟೊ ಬೆಲೆ ಶೀಘ್ರದಲ್ಲಿ ಕಡಿಮೆ ಯಾಗುವುದು ಕಷ್ಟವೇ. ಹಾಗಾದರೆ ಟೊಮೇಟೊ ಬೆಲೆ ಹೆಚ್ಚಾಗಲು ಕಾರಣಗಳೇನು?, ಸದ್ಯದಲ್ಲಿ ಇಳಿಕೆ ಯಾದೀತೇ? ಎಂಬುದರ ಮಾಹಿತಿ ಇಲ್ಲಿದೆ.

Advertisement

ಖಾರಿಫ್ ಬೆಳೆ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಇಳಿಕೆ ಸಾಧ್ಯತೆ
ಟೊಮೇಟೊವನ್ನು ದೀರ್ಘ‌ ಕಾಲ ಸಂರಕ್ಷಿಸಿಡಲು ಸಾಧ್ಯವಿಲ್ಲದ ಕಾರಣ ಸದ್ಯ ದೇಶದ ಬಹುತೇಕ ಎಲ್ಲೆಡೆ ಬೇಡಿಕೆಯಷ್ಟು ಟೊಮೇಟೊ ಲಭ್ಯವಾಗುತ್ತಿಲ್ಲ. ಸದ್ಯ ದಾಸ್ತಾನಿರುವ ಟೊಮೇಟೊ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಖಾರಿಫ್ ಬೆಳೆ ಮಾರುಕಟ್ಟೆ ಪ್ರವೇಶಿಸಿದ ಬಳಿಕವಷ್ಟೇ ಬೆಲೆಯಲ್ಲಿ ಒಂದಿಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಆದರೆ ಮುಂಗಾರು ತಡವಾದ ಕಾರಣ ಬೆಳೆಗಳ ನಾಟಿ ಇನ್ನಷ್ಟೇ ಆಗಬೇಕಾಗಿದೆ. ಆಗಸ್ಟ್‌ನ ಬಳಿಕವೇ ಬೆಲೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆ ವೇಳೆಗೆ ಹಬ್ಬಗಳ ಸರಣಿ ಆರಂಭಗೊಳ್ಳಲಿರುವುದರಿಂದ ಮತ್ತು ಮಳೆಯ ಸ್ಥಿತಿಗತಿಯನ್ನು ಅವಲಂಬಿಸಿ ಟೊಮೇಟೊ ಉತ್ಪಾದನೆಯಲ್ಲಿ ಏರಿಳಿಕೆಯಾಗುವ ಸಾಧ್ಯತೆಗಳಿರುವುದರಿಂದ ಬೆಲೆಯಲ್ಲೂ ಕೂಡ ಏರಿಳಿತಗಳಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ರಾಷ್ಟ್ರೀಯ ತೋಟಗಾರಿಕ ಮಂಡಳಿಯ ಅಂಕಿಅಂಶಗಳ ಪ್ರಕಾರ 2022ರಲ್ಲಿ ದೇಶದಲ್ಲಿ 2 ಕೋಟಿ ಟನ್‌ ಟೊಮೇಟೊ ಉತ್ಪಾದನೆಯಾಗಿತ್ತು. ಅದರಲ್ಲೂ ಟೊಮೇಟೊ ಉತ್ಪಾದನೆಯಲ್ಲಿ ಗುರುತಿಸಿ ಕೊಂಡಿರುವ ಪ್ರಮುಖ ಹತ್ತು ರಾಜ್ಯಗಳೇ 1.6 ಕೋಟಿ ಟನ್‌ ಟೊಮೇಟೊ ಉತ್ಪಾದನೆ ಮಾಡಿದ್ದವು.

ಗಡಿ ದಾಟಿದ ಟೊಮೇಟೊ

ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೇಟೊ 100 ರೂ. ಗಳ ಗಡಿಯನ್ನು ದಾಟಿದೆ. ಉತ್ತರ ಪ್ರದೇಶದಲ್ಲಂತೂ ಟೊಮೇಟೊ ಸರಾಸರಿ ಕೆ.ಜಿ.ಗೆ 120 ರೂ.ಗಳಲ್ಲಿ ಮಾರಾಟವಾಗು ತ್ತಿದೆ. ಇನ್ನು ಕೆಲವೊಂದೆಡೆ ಟೊಮೇಟೊ ಕೆ.ಜಿ.ಗೆ 90-100 ರೂ.ಗಳ ಗಡಿಯಲ್ಲಿದೆ. ಟೊಮೇಟೊ ಶ್ರೀಮಂತರಿಂದ ಹಿಡಿದು ಜನಸಾಮಾನ್ಯನ ವರೆಗೆ ಎಲ್ಲ ವರ್ಗದ ಜನರೂ ತಮ್ಮ ಆಹಾರದಲ್ಲಿ ಬಳಸುವ ತರಕಾರಿಯಾಗಿರುವುದರಿಂದ ಸಹಜವಾಗಿಯೇ ಈ ದಿಢೀರ್‌ ಬೆಲೆ ಏರಿಕೆ ಶ್ರೀಸಾಮಾನ್ಯನಿಗೆ ಭಾರೀ ಹೊರೆಯಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next