Advertisement

ಟೊಮೆಟೋ ಬೆಲೆ ದಿಢೀರ್‌ ಏರಿಕೆ

12:30 AM Jan 11, 2019 | Team Udayavani |

ಬೆಂಗಳೂರು: ಕೆಲವೇ ದಿನಗಳ ಹಿಂದಿನ ಮಾತು, ಟೊಮೆಟೋ ಕೇಳ್ಳೋರಿಲ್ಲ ಎಂಬ ಕಾರಣಕ್ಕೆ ರೈತರು ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದ್ದರು. ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆದರೆ, ಟೊಮೆಟೋ ಸಿಗುತ್ತಿಲ್ಲ!

Advertisement

ಕಳೆದ ಆರು ತಿಂಗಳಿಂದ ಟೊಮೆಟೋ ಬೆಲೆ ಕೆಜಿಗೆ 20 ರೂ. ಕೂಡ ದಾಟಿರಲಿಲ್ಲ. ಇದೇ ಕಾರಣಕ್ಕೆ ರೈತರು ಪ್ರತಿಭಟನೆ ಕೂಡ ನಡೆಸಿದರು. ಆದರೆ, ಕಳೆದ ಮೂರ್‍ನಾಲ್ಕು ದಿನಗಳಿಂದ ಏಕಾಏಕಿ ಪೂರೈಕೆಯಲ್ಲಿ ಖೋತಾ ಆಗಿದೆ.  ನಿತ್ಯ ಬೆಂಗಳೂರಿಗೇ 200 ಲೋಡ್‌ ಬರುತ್ತಿದ್ದ ಟೊಮೆಟೋ ಕಳೆದ ಒಂದು ವಾರದಿಂದ ಅಬ್ಬಬ್ಟಾ ಎಂದರೆ 30ರಿಂದ 40 ಲೋಡ್‌ ಬರುತ್ತಿದೆ. ಇದರ ಪರಿಣಾಮ ಬೇಡಿಕೆ ಹೆಚ್ಚಿದ್ದು, ಸಹಜವಾಗಿ ಬೆಲೆ ಗಗನಕ್ಕೇರಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೆಟೊಗೆ ಬೇಡಿಕೆ ಬರುತ್ತಿದ್ದಂತೆ ನಾಸಿಕ್‌ ಸೇರಿದಂತೆ ಹೊರ ರಾಜ್ಯಗಳಿಂದ ಇಲ್ಲಿಗೆ ಪೂರೈಕೆ ಆಗುತ್ತಿದೆ. ಪ್ರತಿ ದಿನ ಕಲಾಸಿಪಾಳ್ಯ ಸಗಟು ಮಾರುಕಟ್ಟೆಗೆ ಸರಿಸುಮಾರು 15-20 ಲೋಡ್‌ ಬರುತ್ತಿದೆ. ಹೀಗೆ ಹೊರಗಡೆಯಿಂದ ಬರುವುದರಿಂದ ಬೆಲೆ ಏರಿಕೆಯಾಗಿದ್ದು, ಸಗಟು ಕೆಜಿಗೆ 50ರಿಂದ 60 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 70 ರೂ. ತಲುಪಿದೆ. ಇನ್ನೂ 10-15 ದಿನಗಳು ಇದೇ ಸ್ಥಿತಿ ಇರಲಿದೆ ಎಂದು ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಆರ್‌. ಮಂಜುನಾಥ್‌ ಅಭಿಪ್ರಾಯಪಡುತ್ತಾರೆ.

ನಗರಕ್ಕೆ ಕೋಲಾರ, ಹೊಸಕೋಟೆ, ಚನ್ನಪಟ್ಟಣ, ಚನ್ನರಾಯಪಟ್ಟಣ, ಕನಕಪುರ, ಆನೇಕಲ್‌ ಸೇರಿದಂತೆ ಸುತ್ತಲಿನ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿತ್ತು. ವಾರದಿಂದ ಎಂದಿಗಿಂತ ಶೇ. 20ರಷ್ಟೂ ಬರುತ್ತಿಲ್ಲ ಎಂದೂ ಅವರು ಹೇಳುತ್ತಾರೆ.

ಉತ್ಪಾದನೆ ಕಡಿಮೆ
ಸಾಮಾನ್ಯವಾಗಿ ಚಳಿಗಾಲದಲ್ಲಿ ಟೊಮೆಟೊ ಉತ್ಪಾದನೆ ಕಡಿಮೆ ಇರುತ್ತದೆ. ಇಡೀ ವರ್ಷದಲ್ಲಿ ಮುಂಗಾರಿಗೆ ಶೇ. 45ರಷ್ಟು ಹಾಗೂ ಹಿಂಗಾರಿನಲ್ಲಿ ಶೇ. 35 ಮತ್ತು ಬೇಸಿಗೆಯಲ್ಲಿ ಶೇ. 10ರಷ್ಟು ಟೊಮೆಟೊ ಉತ್ಪಾದನೆಯಾಗುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬೆಲೆ ಕುಸಿತ ಕಂಡಿತ್ತು. ಈ ರೀತಿಯ “ಟ್ರೆಂಡ್‌’ ಇತ್ತೀಚಿನ ವರ್ಷಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದೇ ಕಾರಣಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಪಯಾರ್ಯ ಬೆಳೆಗಳ ಕಡೆಗೂ ಮುಖಮಾಡುತ್ತಿದ್ದಾರೆ. ಇದು ಕೂಡ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಯ ಪ್ರಧಾನ ವಿಜ್ಞಾನಿ ಟಿ.ಎಂ. ಗಜಾನನ ಅಭಿಪ್ರಾಯಪಡುತ್ತಾರೆ.

Advertisement

ಕೋಲಾರದಲ್ಲೂ ದುಬಾರಿ
ಟೊಮೆಟೋ ದರದಲ್ಲಿ ಹೆಚ್ಚಳವಾಗಿರುವುದು ಕೋಲಾರ ರೈತರಲ್ಲಿ ಹರ್ಷ ತಂದಿದೆ. ಪ್ರಸಕ್ತ ವರ್ಷದ ಆರಂಭದಲ್ಲೇ ಟೊಮೆಟೋ  ಬಾಕ್ಸ್‌ಗೆ 700 ರೂ. ದೊರೆಯುತ್ತಿರುವುದು ರೈತರ ಪಾಲಿಗೆ ಸಂಕ್ರಾಂತಿ ಸುಗ್ಗಿಯಾಗಿದೆ. ಆದರೆ, ಖರೀದಿ ಮಾಡುವ ಗ್ರಾಹಕನಿಗೆ ಕಣ್ಣೀರು ಬರಿಸುತ್ತಿದೆ. ಕಿಲೋ ಟೊಮೆಟೋಗೆ ಬರೋಬರಿ 70 ರೂ ನೀಡಿ ಇಂದು ಗ್ರಾಹಕ ಖರೀದಿಸುವಂತಾಗಿದೆ. ಟೊಮೇಟೊ ಬೆಲೆಯಲ್ಲಿ ದಿಢೀರ್‌ ಬೆಲೆ ಏರಿಕೆ ಕಾಣಲು ಅಗತ್ಯವಿರುವಷ್ಟು ಪೂರೈಕೆ ಇಲ್ಲವಾಗಿರುವುದು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next