ಗುಂಡ್ಲುಪೇಟೆ(ಚಾಮರಾಜನಗರ): ಜಮೀನಿನಲ್ಲಿ ಬೆಳೆದಿದ್ದ ಟೊಮೆಟೋ ಗಿಡಗಳನ್ನು ಬುಡ ಸಮೇತ ಕತ್ತರಿಸಿ, ಕಿಡಿಗೇಡಿಗಳು ಫಸಲು ನಾಶ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಕೆಬ್ಬೇಪುರ ಗ್ರಾಮದ ಮಂಜು ಎಂಬವರು ಸುಮಾರು 1.5 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದು, ನಿನ್ನೆ ಮೊದಲ ಫಸಲನ್ನು ಕೊಯ್ದು ಮಾರುಕಟ್ಟೆಗೆ ಕೊಟ್ಟು ಸಂತಸದಿಂದ ಇದ್ದರು.
ಆದರೆ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಟೊಮೆಟೋ ಬೆಳೆಗೆ ದಾಳಿ ಮಾಡಿ ಗಿಡಗಳನ್ನು ನೆಲದ ಸಮಕ್ಕೆ ಕತ್ತರಿಸಿ ಹಾಳು ಮಾಡಿದ್ದಾರೆ. ಕೆಲವು ಗಿಡಗಳಿಗೆ ಕಟ್ಟಿದ್ದ ತಂತಿಯನ್ನು ಕಿತ್ತುಹಾಕಿ ನೆಲಸಮ ಮಾಡಿ ಬೆಳೆ ನಾಶಗೊಳಿಸಿದ್ದಾರೆ.
ಜಮೀನು ಮಾಲೀಕ ಮಂಜು 1.5 ಎಕರೆ ಜಮೀನಿನಲ್ಲಿ ಟೊಮೆಟೋ ಗಿಡ ಹಾಕಲು ಸುಮಾರು 1 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದರು. ಆದರೆ ಫಸಲಿಗೆ ಬಂದಿದ್ದ ಟೊಮೊಟೋ ಬೆಳೆಗಳ ನಾಶವಾಗಿರುವುದರಿಂದ ಅಂದಾಜು 10 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗುತ್ತಿದೆ. ಇನ್ನೂ ಕೋಯ್ಲಿಗೆ ಬಂದಿದ್ದ ಟೊಮೆಟೋ ಬೆಳೆ ನಾಶವಾಗಿರುವುದರಿಂದ ರೈತ ಮಂಜು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಬೇಗೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.