Advertisement

ಟೊಮ್ಯಾಟೋ ಜ್ವರ ಎಚ್ಚರಿಕೆ: ಜಿಲ್ಲಾಧಿಕಾರಿ

11:15 PM May 13, 2022 | Team Udayavani |

ಉಡುಪಿ: ಕೇರಳ- ತಮಿಳುನಾಡು ಗಡಿಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಅಧಿಕ ಮಕ್ಕಳಲ್ಲಿ ಟೊಮ್ಯಾಟೋ ಜ್ವರ ಕಂಡು ಬಂದಿದ್ದು, ಉಡುಪಿಯಲ್ಲಿ ಈ ರೋಗ ಲಕ್ಷಣ ಪತ್ತೆಯಾಗಿಲ್ಲ. ಆದರೂ ಗಡಿ ಜಿಲ್ಲೆಗಳಲ್ಲಿ ಈ ಕುರಿತು ನಿಗಾ ಅಗತ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ತಿಳಿಸಿದ್ದಾರೆ.

Advertisement

ಜ್ವರ ಕಾಣಿಸಿಕೊಳ್ಳುವ ಮಕ್ಕಳ ದೇಹದಲ್ಲಿ ಟೊಮ್ಯಾಟೋ ಆಕಾರದ ಗುಳ್ಳೆಗಳು ಏಳುವುದರಿಂದ ಇದಕ್ಕೆ ಟೊಮ್ಯಾಟೋ ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರವು ವೈರಸ್‌ನಿಂದ ಹರಡುತ್ತಿದ್ದು ಕೊರೊನಾ ಮತ್ತು ಈ ಜ್ವರಕ್ಕೆ ಸಂಬಂಧವಿಲ್ಲ. ಇದು ಚಿಕನ್‌ಗುನ್ಯಾದ ಲಕ್ಷಣವನ್ನು ಹೋಲುತ್ತಿದ್ದು ಜ್ವರ ಹಾಗೂ ಗುಳ್ಳೆಯ ಜತೆಗೆ ಕೆಮ್ಮು, ಶೀತ, ನಿರ್ಜಲೀಕರಣ ಉಂಟಾಗುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡು ವುದರಿಂದ ಸೋಂಕಿತ ಮಕ್ಕಳು ಕ್ವಾರಂಟೈನ್‌ ಆಗಬೇಕು ಮತ್ತು ಗುಳ್ಳೆಗಳನ್ನು ಉಜ್ಜಬಾರದು. ಈ ಬಗ್ಗೆ ಎಲ್ಲರೂ ಆದಷ್ಟು ಜಾಗೃತಿ ವಹಿಸಬೇಕು ಎಂದು ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಪರೀಕ್ಷೆ ನಡೆಸಲು ಸೂಚನೆ
ಜಿಲ್ಲೆಯಾದ್ಯಂತ ಯಾರಲ್ಲಾದರೂ ಇಂತಹ ರೋಗ ಲಕ್ಷಣ ಕಂಡುಬಂದಲ್ಲಿ ವೈದ್ಯಾಧಿಕಾರಿಗಳು, ಆರೋಗ್ಯ ಸಿಬಂದಿ ವರ್ಗ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇರಳದಿಂದ ಬರುವ ವ್ಯಕ್ತಿಗಳು, ಯಾತ್ರಿಕರು, ಮಕ್ಕಳ ಬಗ್ಗೆ ತೀವ್ರ ನಿಗಾ ವಹಿಸ ಬೇಕು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸಹಿತ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಲ್ಲಿಯೂ ಈ ರೋಗ ಲಕ್ಷಣ ಹೊಂದಿರುವ ಪ್ರಕರಣಗಳ ಕುರಿತು ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

ವೈದ್ಯರು ಮಾಹಿತಿ ನೀಡಬೇಕು
ಖಾಸಗಿ ಆಸ್ಪತ್ರೆಗಳು ಮತ್ತು ಎಲ್ಲ ಮಕ್ಕಳ ತಜ್ಞರು ಈ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ನಡೆಸಿ, ಮಾಹಿತಿ ನೀಡಬೇಕು. ಸಾರ್ವಜನಿಕರು ಭೀತಿಗೊಳ್ಳದೆ ಟೊಮ್ಯಾಟೋ ಜ್ವರದ ಲಕ್ಷಣಗಳ ಬಗ್ಗೆ ಅರಿತು, ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಮಕ್ಕಳಲ್ಲಿ ನಿರ್ಜಲೀಕರಣವಾಗದಂತೆ ಹೆಚ್ಚಿನ ಗಮನ ಹರಿಸಿ, ಶುದ್ಧ ನೀರು ಸೇವಿಸುವಂತೆ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next