“ಟಾಮ್ ಆ್ಯಂಡ್ ಜೆರ್ರಿ’ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಟಿ.ವಿ ಯಲ್ಲಿ ಅತ್ಯಂತ ಜನಪ್ರಿಯವಾಗಿರುವ, ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಿನ ಶೋ ಎಂದೇ ಜನಪ್ರಿಯವಾಗಿರುವ “ಟಾಮ್ ಆ್ಯಂಡ್ ಜೆರ್ರಿ’ ಹೆಸರು ಈಗ ಸಿನಿಮಾವೊಂದರ ಟೈಟಲ್ ಆಗಿ ಬಿಗ್ ಸ್ಕ್ರೀನ್ ಮೇಲೆ ಬರುತ್ತಿದೆ. ಅಂದ ಹಾಗೆ, ಈ ಚಿತ್ರದ ಹೆಸರು “ಟಾಮ್ ಆ್ಯಂಡ್ ಜೆರ್ರಿ’ ಅಂತಿದ್ದರೂ, ಟಿ.ವಿ ಯಲ್ಲಿ ಬರುವ “ಟಾಮ್ ಆ್ಯಂಡ್ ಜೆರ್ರಿ’ ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಚಿತ್ರತಂಡ “ಟಾಮ್ ಆ್ಯಂಡ್ ಜೆರ್ರಿ’ ಹೆಸರನ್ನು ತಮ್ಮ ಚಿತ್ರಕ್ಕೆ ಇಟ್ಟುಕೊಂಡಿದೆಯಂತೆ. ಇದೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ “ಟಾಮ್ ಆ್ಯಂಡ್ ಜೆರ್ರಿ’ ಚಿತ್ರ ಸರಳವಾಗಿ ಮುಹೂರ್ತವನ್ನು ಆಚರಿಸಿಕೊಂಡು, ಚಿತ್ರೀಕರಣಕ್ಕೆ ಹೊರಟಿದೆ. ಈ ಹಿಂದೆ “ಗಂಟುಮೂಟೆ’ ಚಿತ್ರದಲ್ಲಿ ನಟಿಸಿದ್ದ ನಿಶ್ಚಿತ್ ಕೊರೋಡಿ ಮತ್ತು “ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಜೈ ಜಗದೀಶ್, ತಾರಾ ಅನುರಾಧ, ರಂಗಾಯಣ ರಘು, ಪ್ರಶಾಂತ್ ನಟನ, ಸಂಪತ್, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು, ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಕೆಜಿಎಫ್-1′ ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ “ಕೆಜಿಎಫ್-1’ನ ಎರಡನೇ ಛಾಯಾಗ್ರಹಕರಾಗಿದ್ದ ಸಂಕೇತ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ಮತ್ತು ಅದೇ ಚಿತ್ರದಲ್ಲಿ ಸಹ ಖಳನಟನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಈ ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜು ಶೇರಿಗಾರ “ಟಾಮ್ ಆ್ಯಂಡ್ ಜೆರ್ರಿ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ, “ಹೆಸರೇ ಹೇಳುವಂತೆ, “ಟಾಮ್ ಅಂಡ್ ಜೆರ್ರಿ’ ಕಿತ್ತಾಟದಲ್ಲಿ ಹುಟ್ಟಿದ ಕೆಮಿಸ್ಟ್ರಿ ಈ ಚಿತ್ರದಲ್ಲಿದೆ. ಹೆಸರೇ ಹೇಳುವ ಹಾಗೆ ಬದುಕನ್ನು ಬೇರೆಯದೇ ರೀತಿಯಲ್ಲಿ ನೋಡುವಂಥ ಎರಡು ಪಾತ್ರಗಳ ಸುತ್ತ ಚಿತ್ರದ ಕಥೆ ನಡೆಯುತ್ತದೆ.
ಎರಡು ಪಾತ್ರಗಳ ದೃಷ್ಟಿಯಲ್ಲಿ ಜೀವನ, ಪ್ರೀತಿ, ಸ್ನೇಹ ಎಲ್ಲದಕ್ಕೂ ಬೇರೆಯದೇ ರೀತಿ ಅರ್ಥವಿದೆ. ಅಲ್ಲದೆ ಇವರಿಬ್ಬರ ಬದುಕಿನ ಹುಡುಕಾಟಗಳೇ ಬೇರೆ ಬೇರೆಯಾಗಿ ರುತ್ತದೆ. ಆಕೆ ಕಾಲ್ಪನಿಕ, ಆತ ವಾಸ್ತವ. ಇವರಿಬ್ಬರೂ ಒಟ್ಟಿಗೆ ಸೇರಿ ದಾಗ ಆಗುವ ಘಟನೆಗಳೇ ಸಿನಿಮಾದ ಸಾರಾಂಶ ವಾಗಿದೆ’ ಎಂದು ಕಥೆಯ ವಿವರಣೆ ಕೊಡುತ್ತಾರೆ. “ಚಿತ್ರದ ಕಥೆ ಮತ್ತು ಪಾತ್ರಕ್ಕಾಗಿ ಹೊಂದಿಕೊಳ್ಳುವಂಥ ಕಲಾವಿದರನ್ನೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆಡಂಬರ ವಿಲ್ಲದ ಸನ್ನಿವೇಶಗಳಲ್ಲಿ ಜೀವನದ ಬೆಲೆಯನ್ನು ತೋರಿಸಲಾಗಿದೆ. ವಯಸ್ಸಾದ ಮೇಲೆ ಬುದ್ದಿ ಬರುತ್ತದೆ.
ಅದು ಈ ವಯಸ್ಸಿಗೆ ಬಂದರೆ ಸ್ಪಷ್ಟತೆ ಇರುವುದಿಲ್ಲ. ನಾಳಿನ ಬಿರಿಯಾನಿ ಆಸೆಗೆ ಇಂದಿನ ಚಿತ್ರಾನ್ನವನ್ನು ಉಪೇಕ್ಷೆ ಮಾಡಬೇಡವೆಂಬ ಸಿದ್ದಾಂತವನ್ನು ಹೇಳ ಲಾಗಿದೆ’ ಎನ್ನುತ್ತದೆ ಚಿತ್ರತಂಡ. ಇನ್ನು “ಟಾಮ್ ಆ್ಯಂಡ್ ಜೆರ್ರಿ’ ಚಿತ್ರದಲ್ಲಿ ಐದು ಹಾಡು ಗಳಿದ್ದು, ಚಿತ್ರದ ಹಾಡುಗಳಿಗೆ ಮಾಥ್ಯೂಸ್ ಮನು ರಾಗ ಸಂಯೋಜಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆ ಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಮಧ್ಯ ಭಾಗದಲ್ಲಿ ಬಿಗ್ ಸ್ಕ್ರೀನ್ ಮೇಲೆ “ಟಾಮ್ ಆ್ಯಂಡ್ ಜೆರ್ರಿ’ ಆಟ ನೋಡಬಹುದು.