Advertisement

ಟ್ರೋಲ್‌;ತುಳು ಕಲಾವಿದರ ಗೋಳು!

11:21 PM May 22, 2019 | Sriram |

ಸದ್ಯ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚು. ಕೈಯಲ್ಲಿರುವ ಮೊಬೈಲ್‌ ಮೂಲಕವೇ ಸರ್ವ ಸಂಗತಿಗಳು ಜನರ ಕೈ ಸೇರುತ್ತಿವೆ. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಸ ಹಿತ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಜನರೀಗ ಕೈಯಾಡಿಸುತ್ತಿದ್ದಾರೆ. ಅದರಲ್ಲಿಯೂ ದೇಶದ- ರಾಜ್ಯದ ಅಥವಾ ಜಿಲ್ಲೆಯಲ್ಲಿ ಯಾವುದಾದರೂ ಒಂದು ಕುತೂಹಲಕಾರಿ ಘಟನೆಗಳಾದರೆ ಅಂತಹ ಸಂಗತಿಯು ವಿಭಿನ್ನ ನೆಲೆಯಲ್ಲಿ ಟ್ರೋಲ್‌ ಆಗುವುದು ಸಾಮಾನ್ಯವಾಗಿದೆ.

Advertisement

ಇಂತಹ ಪರಿಸ್ಥಿತಿಯಲ್ಲಿ ಕರಾವಳಿ ಭಾಗದಲ್ಲಿ ಯಾವುದಾದರೂ ಒಂದು ಸಂಗತಿಯಾದರೆ ತತ್‌ಕ್ಷಣಕ್ಕೆ ಟ್ರೋಲ್‌ ಆದರೆ ಅದರಲ್ಲಿ ಕಾಣಿಸಿಕೊಳ್ಳುವುದು ಕೋಸ್ಟಲ್‌ವುಡ್‌ನ‌ ಕಾಮಿಡಿ ಸ್ಟಾರ್‌ ಕಲಾವಿದರ ಚಿತ್ರಗಳು.

ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸೇರಿದಂತೆ ಕಾಮಿಡಿ ಕಲಾವಿದರೇ ಈ ಟ್ರೋಲ್‌ಗ‌ಳಿಗೆ ಬಳಕೆಯಾಗುವುದು ಸಾಮಾನ್ಯ ಸಂಗತಿಯಂತಾಗಿದೆ. ಅದರಲ್ಲಿಯೂ ಎಲ್ಲ ವಿಚಾರದಲ್ಲಿಯೂ ಅರವಿಂದ ಬೋಳಾರ್‌ ಅವರ ಫೋಟೋ ಹಾಕಿ ಯಾವುದೋ ಒಂದು ವಿಷಯಕ್ಕೆ ಲಿಂಕ್‌ ಮಾಡಿ ಕಾಮಿಡಿ ಮಾಡುವುದು ಕಂಡು ಬರುತ್ತಿದೆ. ರಾಜಕೀಯ, ಕ್ರೀಡೆ, ಸಾಂಸ್ಕೃತಿಕ.. ಹೀಗೆ ಎಲ್ಲ ವಿಷಯದಲ್ಲೂ ಫೋಟೋ ಹಾಕಿ ಟ್ರೋಲ್‌ ಮಾಡುತ್ತಿದ್ದಾರೆ.
ಯಾವುದೋ ಒಂದು ವಿಷಯಕ್ಕೆ, ಯಾರಿಗೋ ಖುಷಿ ನೀಡುವ ಉದ್ದೇಶದಿಂದ ಟ್ರೋಲಿಗರ ಕಲಾವಿದರನ್ನು ಬಳಸಿಕೊಂಡು ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದು ಸರಿಯಲ್ಲ ಎಂಬುದು ಕೆಲವು ಕಲಾವಿದರ ಅಭಿಪ್ರಾಯ. ಕಾಮಿಡಿ ವಿಷಯವನ್ನು ಕಾಮಿಡಿಯಾಗಿ ಬಿಂಬಿಸಿದರೆ ತೊಂದರೆ ಇಲ್ಲ. ಆದರೆ ಅಶ್ಲೀಲ ಹಾಗೂ ವೈಯಕ್ತಿಕ ನಿಂದನೆಯ ವಿಷಯದಲ್ಲೂ ಕಲಾವಿದರ ಬಳಕೆ ತರವಲ್ಲ ಎಂಬುದು ಅವರ ಅಭಿಪ್ರಾಯ.

ಈ ಬಗ್ಗೆ “ಕುಡ್ಲ ಟಾಕೀಸ್‌’ ಜತೆಗೆ ಮಾತನಾಡಿದ ಅರವಿಂದ ಬೋಳಾರ್‌, ನಾವು ನಿಜಕ್ಕೂ ಕಲಾಭಿಮಾನಿಗಳ ಸ್ವತ್ತು. ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು ಅವರು. ಅವರ ಆಶೀರ್ವಾದ ದಿಂದಲೇ ನಾವು ಇಂದು ಹೆಸರು- ಮಾನ್ಯತೆ ಪಡೆದಿದ್ದೇವೆ. ಹೀಗಾಗಿ ನಮ್ಮನ್ನು ಪ್ರೀತಿಸಿ ದವರಿಗೆ ನಾವು ಬೇಸರ ತರಿಸುವುದು ಸರಿಯಲ್ಲ ಎಂಬ ಕಾರಣದಿಂದ ಕೆಲವೊಮ್ಮೆ ಮೌನವಾಗಿದ್ದೇವೆ. ಟ್ರೋಲ್‌ ಮೂಲಕ ನನ್ನನ್ನೂ ಸೇರಿದಂತೆ ಕೆಲವು ಕಲಾವಿದರನ್ನು ಬೇರೆ ಬೇರೆ ವಿಚಾರ- ಸಂಗತಿಗಳಲ್ಲಿ ಬಳಕೆ ಮಾಡುತ್ತಿದ್ದಾರೆ.

ಜನರ ಖುಷಿಗಾಗಿ ನಮ್ಮನ್ನು ಸದಾಶಯದ ಕಾಮಿಡಿಯೊಂದಿಗೆ ಟ್ರೋಲ್‌ ಮಾಡಿದರೆ ನಮಗೆ ಯಾವುದೇ ಬೇಸರವಿಲ್ಲ. ಆದರೆ, ಕೆಲವು ಬಾರಿ ಇದಕ್ಕೆ ಮೀರಿದ ಸಂಗತಿಗಳು ನಡೆಯುತ್ತಿರುವುದು ತುಂಬ ಬೇಸರ ತರಿಸಿದೆ. ನಮ್ಮಿಂದ ಜನರು ನಿರೀಕ್ಷಿಸುವ ಹಾಸ್ಯವನ್ನು ಮೀರಿ, ಕೆಲವೊಮ್ಮೆ ಅಶ್ಲೀಲವಾಗಿ ಹಾಗೂ ಮನೆಮಂದಿಯೆಲ್ಲ ನೋಡದ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ನೆಲೆಯಲ್ಲಿ ನಮ್ಮನ್ನು ಬೊಟ್ಟು ಮಾಡಿ ಇನ್ನೊಂದು ಪಕ್ಷದವರು ನೋಡುವಂತೆ ಅಥವಾ ವೈಯಕ್ತಿಕ ವಿಷಯದಲ್ಲಿಯೂ ನಮ್ಮನ್ನು ತುರುಕಿಸುವ ಪ್ರಯತ್ನ ನಡೆಯುತ್ತಿರುವುದು ಬೇಸರ ತರಿಸುತ್ತಿದೆ. ಹೀಗಾಗಿ ನನ್ನದೊಂದು ಕಳಕಳಿಯ ಮನವಿ. ನಮಗೂ ಬದುಕಿದೆ. ಜೀವನವಿದೆ. ದಯವಿಟ್ಟು ನಮ್ಮನ್ನು ಕೆಟ್ಟದಾಗಿ ಅಥವಾ ಪಕ್ಷ ಆಧಾರಿತವಾಗಿ ಹಾಗೂ ವೈಯಕ್ತಿಕ ವಿಷಯದ ನೆಲೆಯಲ್ಲಿ ಟ್ರೋಲ್‌ ಮಾಡದಿರಿ. ಬದಲಾಗಿ ಸದಾ ಹಾಸ್ಯದ ಮೂಲಕ ಸಂದೇಶ ಹಾಗೂ ಜನರಿಗೆ ಖುಷಿ ನೀಡುವ ಸದಾಶಯದ ಕಾಮಿಡಿ ಟ್ರೋಲ್‌ಗೆ ನಮ್ಮದೇನು ಆಕ್ಷೇಪವಿಲ್ಲ. ಯಾಕೆಂದರೆ, ನಾವು ಕಲಾಭಿಮಾನಿಗಳ ಮೂಲಕ ಮೇಲೆ ಬಂದವರು. ಅವರು ಪ್ರೋತ್ಸಾಹ ನೀಡಿದ ಕಾರಣದಿಂದ ಮಾತ್ರ ನಾವು ಇಂದು ಈ ಸ್ಥಾನ ಪಡೆದಿದ್ದೇವೆ ಎನ್ನುತ್ತಾರೆ.

Advertisement

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next