Advertisement

ಟೊಳ್ಳುಗಟ್ಟಿ ಈಗ ಮೂಕವಿಸ್ಮಿತ

06:16 PM May 02, 2019 | Hari Prasad |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಾಟಕ ಆಧಾರಿತ ಚಿತ್ರಗಳು ಬಂದಿವೆ. ಈಗ “ಮೂಕವಿಸ್ಮಿತ’ ಹೊಸ ಸೇರ್ಪಡೆ. ಹೌದು, ಇದು ಟಿ.ಪಿ.ಕೈಲಾಸಂ ಅವರ “ಟೊಳ್ಳು ಗಟ್ಟಿ’ ನಾಟಕ ಆಧರಿಸಿ ಮಾಡಿದ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಮೇ.17 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Advertisement

ನಿರ್ದೇಶಕ ಗುರುದತ್ತ ಶ್ರೀಕಾಂತ್‌ಗೆ ಇದು ಮೊದಲ ಚಿತ್ರ. “ಇಪ್ಪತ್ತರ ದಶಕದಲ್ಲಿ ನಡೆಯುವ ಕಥೆಯನ್ನು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಸಿ­ಕೊಂಡು ಮಾಡಿದ್ದಾರೆ. “ಇದು ಸುಮಾರು 97 ವರ್ಷಗಳ ಹಿಂದಿನ ನಾಟಕ. ಅದ್ಭುತ ನಾಟಕವಾಗಿದ್ದರಿಂದ ಚಿತ್ರ ಮಾಡಿದ್ದೇವೆ. ಬದುಕಿನ ಭಾವನೆಗಳ ಜೊತೆಗೆ ಮನರಂಜನೆಯೂ ಇಲ್ಲಿದೆ ಆ ಕಾಲದ ಕಥೆ ಈಗಿನ ಕಾಲಕ್ಕೆ ಹೇಗೆ ಸರಿಹೊಂದುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.

ಒಳ್ಳೆಯದು ಮತ್ತು ಕೆಟ್ಟದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಕಂಡುಕೊಳ್ಳುತ್ತಾನೆ ಎಂಬುದು ಸಾರಾಂಶ. ಒಬ್ಬ ನಿರ್ದೇಶಕನ ಪರಿಶ್ರಮ, ಒಬ್ಬ ಫೋಟೋಗ್ರಾಫ‌ರ್‌ನ ಹುಡುಕಾಟ, ಒಬ್ಬ ಹುಚ್ಚನ ನಿಜವಾದ ಮನಸ್ಥಿತಿ ಹೀಗೆ ಹಲವು ಸಂಗತಿಗಳು ಒಂದೇ ಕಥೆಯಲ್ಲಿ ಹೇಗೆ ಸೃಷ್ಟಿಯಾಗುತ್ತವೆ ಎಂಬುದು ಚಿತ್ರದ ಹೈಲೈಟ್‌’ ಎನ್ನುತ್ತಾರೆ ಗುರುದತ್ತ.
ಚಿತ್ರದಲ್ಲಿ ಸಂದೀಪ್‌ ಮಲಾನಿ ಅವರಿಗೊಂದು ವಿಶೇಷ ಪಾತ್ರ ಕಲ್ಪಿಸಲಾಗಿದೆಯಂತೆ.

ಅವರಿಗೆ ಹಿರಿಯಣ್ಣ ಎಂಬ ಪಾತ್ರ ಸಿಕ್ಕಿದ್ದು, ಆ ಪಾತ್ರ ನನಗೊಂದು ಗುರುತು ತಂದುಕೊಡುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿರುವ ಸಂದೀಪ್‌ ಮಲಾನಿ, ನಾನಂತೂ ಚಿತ್ರ ನೋಡಲು ಕಾಯುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದು ಮನವಿ ಮಾಡಿಕೊಂಡರು.

ನಾಯಕಿ ಶುಭರಕ್ಷ ಅವರಿಗೂ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ಇದುವರೆಗೆ ಗ್ಲಾಮರ್‌ ಪಾತ್ರ ಮಾಡಿಕೊಂಡು ಬಂದಿದ್ದ ಅವರಿಗೆ ಇಲ್ಲಿ ಪಕ್ಕಾ ಡಿ ಗ್ಲಾಮ್‌ ಪಾತ್ರ ಸಿಕ್ಕಿದೆಯಂತೆ. ಪಕ್ಕಾ ಟ್ರೆಡಿಷನಲ್‌ ಹುಡುಗಿಯಾಗಿ ಕಾಣಿಸಿ­ಕೊಂಡಿದ್ದು, 1920ರ ಕಾಲಘಟ್ಟದ ಮಹಿಳೆಯಾಗಿ ಕಾಣಿಸಿಕೊಂಡಿದ್ದೇನೆ. ನೋಡುಗರಿಗೆ ಒಂದು ಹೊಸ ಫೀಲ್‌ ತಂದು­ಕೊಡುವ ಸಿನಿಮಾ ಇದಾಗಲಿದೆ ಎಂಬುದು ಶುಭರಕ್ಷ ಅವರ ಮಾತು.

Advertisement

ವಾಣಿಶ್ರೀ ಭಟ್‌ ಅವರಿಗೆ ಇದು ಮೊದಲ ಚಿತ್ರ. ರಂಗಭೂಮಿ ಹಿನ್ನಲೆ ಇರುವ ಅವರಿಗೆ ಸಿನಿಮಾ ಆಸಕ್ತಿ ಇರಲಿಲ್ಲವಂತೆ. ಆದರೆ, ಯಾವಾಗ ಇದು ಟಿ.ಪಿ.ಕೈಲಾಸಂ ಅವರ ನಾಟಕ ಆಧರಿತ ಸಿನಿಮಾ ಅಂತ ಗೊತ್ತಾಯಿತೋ, ಕಥೆ ಕೇಳಿ, ಪಾತ್ರ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಎರಡು ಶೇಡ್‌ ಪಾತ್ರಗಳಿದ್ದು, ಅದು ಹೇಗೆ ಇದೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂದರು ಅವರು.

ಚಂದ್ರಕೀರ್ತಿ ಅವರು ಕೂಡ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರಿಗೆ ಇದು ನಾಲ್ಕನೆಯ ಸಿನಿಮಾ. ಇಲ್ಲಿ ಕೆಲಸ ಮಾಡುವ ಮೊದಲು ಹದಿನೈದು ದಿನಗಳ ಕಾಲ ವರ್ಕ್‌ಶಾಪ್‌ ಮಾಡಿದ ಅನುಭವ ವಿಶೇಷವಾಗಿತ್ತು. ತಂದೆಗೆ ಒಳ್ಳೆಯ ಮಗನ ಪಾತ್ರ ಮಾಡಿರುವ ನನಗೆ ಚಿತ್ರದ ಮೇಲೆ ವಿಶ್ವಾಸವಿದೆ’ ಎಂದರು ಚಂದ್ರಕೀರ್ತಿ.

ಕಾರ್ತಿಕ್‌ ಅವರಿಗೂ ಸಿನಿಮಾ ಮಾಡುವ ಕನಸು ಈ ಮೂಲಕ ಈಡೇರಿದೆಯಂತೆ. ಚಿತ್ರದಲ್ಲಿ ಅವರು ಒಬ್ಬರನ್ನು ತುಳಿದು ಬದುಕಬೇಕೆಂಬ ಸ್ವಾರ್ಥ ಭಾವ ಇರುವ ಪಾತ್ರ ಮಾಡಿದ್ದಾರಂತೆ. ಚಿತ್ರಕ್ಕೆ ಡಾ.ಚಿನ್ಮಯ ಎಂ.ರಾವ್‌ ಸಂಗೀತ ನೀಡಿದ್ದಾರೆ. ವಿಜಯ್‌ರಾಜ್‌ ಹಿನ್ನೆಲೆ ಸಂಗೀತವಿದೆ. ಸಿದ್ದು ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next