ಉಳ್ಳಾಲ ತಲಪಾಡಿ ಟೋಲ್‌ಗೇಟ್ ಬಳಿ ವೃದ್ಧರೊಬ್ಬರಿಗೆ ಗುರುವಾರ ಟೋಲ್ ಸಿಬಂದಿ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ ಯುವಕನೊಬ್ಬನಿಗೆ ಟೋಲ್ ಸಿಬಂದಿ ಹಲ್ಲೆಗೈದು ಗಾಯಗೊಂಡ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂದಕ ನಿವಾಸಿ ಅಬ್ದುಲ್ ಹಮೀದ್ ಸರಾಫತ್ (25) ಹಲ್ಲೆಗೊಳಗಾದವರು. ಕೆಲಸದ ನಿಮಿತ್ತ ಮಂಗಳೂರಿನಿಂದ ಕಾಸರಗೋಡಿಗೆ ಕಾರಿನಲ್ಲಿ ತೆರಳುವ ಸಂದರ್ಭ ಈ ಘಟನೆ ನಡೆದಿದ್ದು, ಸರಾಫತ್ ಅವರು ತನ್ನ ಕಾರಿನಲ್ಲಿ ಅಪರಾಹ್ನ 2.30ರ ವೇಳೆ ತಲಪಾಡಿ ಟೋಲ್ ಗೇಟ್ ತಲುಪುತ್ತಿದ್ದಂತೆ ಟೋಲ್ ಸಿಬಂಧಿದಿ ವಾಹನ ಚಾಲಕ ವೃದ್ಧರೋರ್ವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಸರಾಫತ್ ಟೋಲ್ ಸಿಬಂದಿಯಲ್ಲಿ ಹಲ್ಲೆಯ ಕಾರಣ ವಿಚಾರಿಸಿ ಚಾಲಕರ ತಪ್ಪಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು.
ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಟೋಲ್ ಗೇಟ್‌ನ ಸಿಬಂದಿ ಏಕಾಏಕಿ ಹಲ್ಲೆ ವಿಚಾರವನ್ನು ಪ್ರಶ್ನಿಸಿದ ಸರಾಫತ್‌ರನ್ನು ಸುತ್ತುವರಿದು ಹಲ್ಲೆ ನಡೆಸಿ ತೆರಳಿದರು ಎನ್ನಲಾಗಿದೆ. ಗಾಯಗೊಂಡಿದ್ದ ಸರಾಫತ್‌ನನ್ನು ಸ್ಥಳೀಯರೊಬ್ಬರು ಉಳ್ಳಾಲದ ಸರೋಜ್ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಹಲ್ಲೆ ನಡೆಸಿದ ಎಲ್ಲರಲ್ಲೂ ಗುರುತಿನ ಚೀಟಿಯ ಬ್ಯಾಜ್ ಇದ್ದು, ಇದರಿಂದ ಟೋಲ್ ಗೇಟ್ ಸಿಬಂದಿಯೇ ಹಲ್ಲೆ ನಡೆಸಿದ್ದಾರೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸರಾಫತ್ ದೂರು ದಾಖಲಿಸಿದ್ದಾರೆ.
ಹೆಚ್ಚುವರಿ ಹಣ ವಸೂಲಿ : ಕೇರಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ವಿಮಾನ ನಿಲ್ದಾಣದಿಂದ ಕಾಸರಗೋಡಿಗೆ ತೆರಳುವ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲು ಮಾಡಲಾಗುತ್ತದೆ. ಹೆಚ್ಚಾಗಿ ಬೆಂಗಳೂರು, ಹೈದರಾಬಾದ್ ಸೇರಿದಂತೆ ದೊಡ್ಡ ದೊಡ್ಡ ಟೋಲ್‌ಗೇಟ್‌ಗಳಲ್ಲಿ ಸಿಬಂದಿ ಮತ್ತು ಪೊಲೀಸರು ಇರುತ್ತಾರೆ. ಆದರೆ ಮಂಗಳೂರು ಕೇಂದ್ರಿಕರಿಸಿರುವ ಟೋಲ್ ಗೇಟ್‌ಗಳಲ್ಲಿ ಮತ್ತು ತಲಪಾಡಿ ಟೋಲ್‌ಗೇಟ್‌ಗಳಲ್ಲಿ ಸಿಬಂದಿಯೊಂದಿಗೆ ಕೆಲವರು ಗೂಂಡಾಗಳಂತೆ ವರ್ತಿಸುತ್ತಾರೆ ಎಂದು ಹಲ್ಲೆಗೊಳಗಾದ ಸರಾಫತ್ ಸಂಬಂಧಿ ಸೈಫ್ ಸುಲ್ತಾನ್ ತಿಳಿಸಿದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.