ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗು ವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ ಎಂಬುದಾಗಿ ಸಂಸದ ನಳಿನ್‌ಕುಮಾರ್ ಕಟೀಲು ದೂರವಾಣಿಯ ಮೂಲಕ ಡಾ| ದೇವಿ ಪ್ರಸಾದ್ ಶೆಟ್ಟಿ ಅವರಿಗೆ ತಿಳಿಸಿದ್ದಾರೆ.
ಹೆಜಮಾಡಿಯಲ್ಲಿ ಟೋಲ್ ವಿರುದ್ಧ ಅವಿಭಜಿತ ದ.ಕ. ಜಿಲ್ಲೆಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ನಡೆದ ಸಾಂಕೇತಿಕ ಪ್ರತಿಭಟನೆ ಸಂದರ್ಭ ಹೋರಾಟ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಜತೆ ದೂರವಾಣಿ ಮೂಲಕ ಮಾತನಾಡಿದ ವೇಳೆ ಸಂಸದರು ಈ ಮಾಹಿತಿ ನೀಡಿದರು. ಇದೇ ವೇಳೆ ಸೆ. 24ರಂದು ಬೆಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರ, ನವಯುಗ ಕಂಪೆನಿ, ಜನಪ್ರತಿನಿಧಿಗಳು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ನಡೆಸಿ ದ.ಕ., ಉಡುಪಿ ಜಿಲ್ಲೆಯ ಎಲ್ಲ ವಾಹನ ಗಳಿಗೆ ಜಿಲ್ಲೆಯ ಟೋಲ್‌ಗಳಲ್ಲಿ ಸಂಪೂರ್ಣ ವಿನಾಯಿತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಳಿನ್ ಹೇಳಿದರು.
ರಾಜ್ಯ ಅರಣ್ಯ ಸಚಿವ ಆರ್. ಶಂಕರ್ ಹೆಜಮಾಡಿ ಟೋಲ್ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದರು. ವಿಧಾನ ಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ವಿನಯಕುಮಾರ್ ಸೊರಕೆ ಮತ್ತಿತರರು ಮಾತನಾಡಿದರು. ಹೋರಾಟ ಸಮಿತಿ ಉಪಾಧ್ಯಕ್ಷ ಗುಲಾಂ ಮಹಮ್ಮದ್, ಜಿ. ಪಂ.ಸದಸ್ಯ ಶಶಿಕಾಂತ್ ಪಡುಬಿದ್ರಿ, ದಿನೇಶ್ ಕೋಟ್ಯಾನ್, ರೇಣುಕಾ ಪುತ್ರನ್, ಯು. ಸಿ. ಶೇಖಬ್ಬ ಮತ್ತಿತರರು ಭಾಗ ವಹಿಸಿದರು. ಶೇಖರ್ ಹೆಜಮಾಡಿ ನಿರ್ವಹಿಸಿದರು.
4 ಟೋಲ್‌ಗಳಲ್ಲೂ ಪ್ರತಿಭಟನೆ
ಚತುಷ್ಪಥ ಹೆದ್ದಾರಿ ಅಸಮರ್ಪಕ ಕಾಮಗಾರಿ ವಿರೋಧಿಸಿ, ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಕೋರಿ ಸಾಸ್ತಾನ, ತಲಪಾಡಿ, ಸುರತ್ಕಲ್ ಟೋಲ್ ಗೇಟ್ ಸಮೀಪವೂ ಪ್ರತಿಭಟನ ಸಭೆ ನಡೆಯಿತು.