ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕವನ್ನು ಸದ್ದಿಲ್ಲದೆ ಶೇ.22ರಷ್ಟು ಏರಿಕೆ ಮಾಡಲಾಗಿದೆ. ಈ ಹೊಸ ದರ ಜೂ.1ರಿಂದಲೇ ಜಾರಿಯಲ್ಲಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಫಾಸ್ಟ್‌ಟ್ಯಾಗ್ ಇರುವ ಕಾರಣ ಇದುವರೆಗೆ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಇದೀಗ ಶುಲ್ಕ ಏರಿಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
ಕಾರು, ವ್ಯಾನ್, ಜೀಪುಗಳಿಗೆ 30 ರೂ., ಎಲ್ ಎಂವಿ. ಮಿನಿಬಸ್‌ಗಳಿಗೆ 50 ರೂ., ಟ್ರಕ್ಸ್ ಬಸ್, 2 ಅಕ್ಸೆಲ್ ವಾಹನಗಳಿಗೆ 105 ರೂ. ಏರಿಕೆ ಮಾಡಲಾಗಿದೆ. ಇದು ದುಬಾರಿಯಾಗಿದ್ದು, ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ದರದ ಅನ್ವಯ ಕಾರ್, ವ್ಯಾನ್, ಜೀಪುಗಳು 165 ರೂ. ಪಾವತಿಸಬೇಕಿದೆ. ಎಲ್ ಎಂವಿ. ಮಿನಿಬಸ್‌ಗಳು 270 ರೂ., ಟ್ರಕ್, ಬಸ್, 2 ಆಕ್ಸೆಲ್ ವಾಹನಗಳು 565 ರೂ. ಪಾವತಿಸ ಬೇಕಿದೆ. ಬಸ್‌ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಟಿಕೆಟ್ ದರ 145 ರೂ ಇದೆ. ಆದರೆ, ಕಾರು, ವ್ಯಾನ್, ಜೀಪಗಳು ಇದಕ್ಕಿಂತ ಹೆಚ್ಚು ಹಣವನ್ನು ಟೋಲ್ ಶುಲ್ಕವಾಗಿ ಪಾವತಿಸಬೇಕಾ ಗಿದೆ. ದುಬಾರಿ ಟೋಲ್ ಶುಲ್ಕದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3 ತಿಂಗಳಲ್ಲೇ ಟೋಲ್ ಹೆಚ್ಚಳ: ಬೆಂ-ಮೈ ದಶಪಥ ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಬೆಂಗಳೂರಿನ ನೈಸ್‌ರಸ್ತೆ ಜಂಕ್ಷನ್ ನಿಂದ ನಿಡಘಟ್ಟವರೆಗೆ ಪೂರ್ಣಗೊಂಡಿದ್ದು, ಮಾ.12 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದರು. ಮಾ.14 ರಿಂದ ಮೊದಲ ಹಂತದ ರಸ್ತೆಗೆ ಟೋಲ್ ಸಂಗ್ರಹಿಸಲಾಗುತಿತ್ತು. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಮೂರು ತಿಂಗಳೊಳಗೆ ಮತ್ತೆ ಟೋಲ್‌ದರ ಹೆಚ್ಚಳಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆರಂಭದಿಂದಲೂ ಟೋಲ್ ವಿವಾದ: ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಆರಂಭದ ದಿನಗಳಿಂದಲೂ ಒಂದಿಲ್ಲೊಂದು ವಿವಾದ ಎದುರಾಗುತ್ತಲೇ ಇದೆ. ಮೊದಲ ಹಂತದ ರಸ್ತೆಗೆ ಫೆ.28 ರಿಂದಲೇ ಟೋಲ್ ಶುಲ್ಕ ಸಂಗ್ರಹಣೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಮಾ.14ರಿಂದ ಶುಲ್ಕ ಜಾರಿಗೆ ಬಂತು. ಬಳಿಕ ಏ.1 ರಿಂದ ಪರಿಷ್ಕೃತ ಶುಲ್ಕವನ್ನು ಜಾರಿಗೊಳಿಸುವುದಾಗಿ ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿತು. ಈ ಸಂಬಂಧ ಮತ್ತೆ ಸಾರ್ವಜನಿಕರ ವಿರೋಧ ವ್ಯಕ್ತವಾಗುವ ಜತೆಗೆ ಕೆಲ ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರ ಪರಿಷ್ಕೃತ ದರವನ್ನು 3 ತಿಂಗಳ ಕಾಲ ಮುಂದೂಡಿತ್ತು.
ಇದೀಗ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಲು ಆರಂಭಿಸಿದೆ. ಹೆದ್ದಾರಿ ಗುಣಮಟ್ಟ ದಿಂದ ಕೂಡಿಲ್ಲ. ಮಂತ್ರಿಗಳು ಮತ್ತು ಶಾಸಕರು ಇದಕ್ಕೆ ದನಿಗೂಡಿಸಿದ್ದಾರೆ. ಪ್ರಯಾಣಿ ಕರಿಗೆ ಯಾವುದೇ ಸುರಕ್ಷತಾ ವ್ಯವಸ್ಥೆಯನ್ನು ಅಳವ ಡಿಸದೆ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಎನ್‌ಎಚ್‌ಎಐ ವಿರುದ್ಧ ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.