Advertisement

ಟೋಕಿಯೊ ಒಲಂಪಿಕ್ಸ್ ನಲ್ಲಿ ಪದಕಕ್ಕೆ ಪಣ ತೊಟ್ಟ ಪ್ರಣತಿ

11:04 PM Jul 20, 2021 | Team Udayavani |

ಕೆಲವು ಸಾಧನೆಗಳೇ ಹಾಗೆ. ಪರ್ವತ ಏರಿದ ಮೇಲೆ ಕೆಳಗಿನ ಇಳಿಜಾರು ನೋಡುವಾಗ ಎದೆ ಝಲ್ಲೆನ್ನುತ್ತದೆ… ಈ ಸಾಧನೆ ನಿಜವೇನಾ ಎಂಬ ಬೆರಗು ಮೂಡುತ್ತದೆ. ಶಿಖರ ಸಾಧನೆ ಆತ್ಮತೃಪ್ತಿ ತರುತ್ತದೆ. ಸುಲಭವಾಗಿ ದಕ್ಕಿದ್ದು ಸಾಧನೆ ಎನಿಸಿಕೊಳ್ಳುವುದಿಲ್ಲ. ಇತಿಹಾಸ ನಿರ್ಮಾಣ, ದಿನ ಬೆಳಗಾದರೆ ಸಾಧ್ಯವಾಗುವುದಿಲ್ಲ. ನೆಲದಾಳದ ಲೋಹದ ತುಣುಕು ಅಪರಂಜಿ ಚಿನ್ನವಾಗಬೇಕಾದರೆ, ಬೆಂಕಿಯಲ್ಲಿ ಬೇಯಬೇಕು. ಸಾಧಕನೂ ಅಷ್ಟೆ, ಕಷ್ಟಗಳಲ್ಲಿ ನೋಯಬೇಕು, ಸವಾಲುಗಳನ್ನೆದುರಿಸಿ ಕಾದಬೇಕು, ಬೀಳಬೇಕು, ಮೈಕೊಡವಿ ಏಳಬೇಕು.

Advertisement

ಯಾರೋ ಸಾಗಿದ ಕಾಲು ಹಾದಿ ಅನುಸರಿಸಿದರೆ ನಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ನಮ್ಮ ಗುರಿಯ ಮಾರ್ಗ ನಾವೆ ನಿರ್ಮಿಸಿಕೊಳ್ಳಬೇಕು. ಸಂದರ್ಭಗಳು ಹಾಗೆಯೇ ಇರುತ್ತದೆ. ಇಡೀ ಜಗತ್ತೇ ತನ್ನ ವಿರುದ್ಧವಾಗಿದೆ ಎಂಬ ಭಾವನೆ ಬಲಿಯುತ್ತಿರುತ್ತದೆ. ಕಷ್ಟಗಳು ಬರುವಾಗ ಸಾಲು ಸಾಲಾಗಿ ಬರುತ್ತದೆ. ನಿಲುಗಡೆಯೇ ಇಲ್ಲದ ಜಡಿ ಮಳೆಯಂತೆ ಹೆದರಿಸುತ್ತಿರುತ್ತವೆ. ಈಗಲೋ ಆಗಲೋ ಮುಳುಗುವಂತಿರುವ ಒಡಕಲು ದೋಣಿಯಲ್ಲಿ ದಡವೇ ಕಾಣದ ಸಾಗರ ಮಧ್ಯದಲ್ಲಿ ಅತಂತ್ರವಾದ ಅಸಹಾಯಕತೆ ಸೃಷ್ಟಿಸಿಬಿಟ್ಟಿರುತ್ತವೆ.

ಮುಳುಗುನೀರಿನ ಅಂಥ ದಾರುಣ ಕ್ಷಣ ಮನುಷ್ಯ ಜಾತಿಯ ದೈತ್ಯ ಶಕ್ತಿ ಅನಾವರಣಕ್ಕೆ ವೇದಿಕೆಯಾಗಿಬಿಡುತ್ತದೆ. ಜೀವನ್ಮರಣ ಸಂದಿಗ್ಧದಲ್ಲಿ ಸಿಲುಕಿದಾಗಲೂ ಹೋರಾಡುವ, ಬದುಕುವುದಕ್ಕೊಂದು ಹೊಸ ದಾರಿಯನ್ನು ಹುಡುಕುವ ಶಕ್ತಿಯನ್ನು, ಛಾತಿಯನ್ನು ಪ್ರಕೃತಿ ಮನುಷ್ಯನಿಗೆ ಕೊಟ್ಟಿದೆ. ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿದರೂ, ಬೆಳಕು ತೂರುವುದಕ್ಕೊಂದು ಸಣ್ಣ ಕಿಂಡಿ ಇದ್ದರು ಸಾಕು ಜೀವನ ಹೋರಾಟ ಮುಂದುವರೆಸುವುದಕ್ಕೆ. ಇದಕ್ಕೆ ಪ್ರಣತಿ ನಾಯಕ್‌ ಅವರ ಸಾಧನೆಯೇ ಉತ್ತಮ ನಿದರ್ಶನ.

ಇದನ್ನೂ ಓದಿ :ಸುರಕ್ಷಿತ ಒಲಿಂಪಿಕ್ಸ್‌ : ಜಪಾನ್‌ ಪ್ರಧಾನಿ ಅಭಯ

2016ರಲ್ಲಿ ರಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್‌ ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ ಆ ಕ್ಷಣವನ್ನು ಭಾರತೀಯ ಕ್ರೀಡಾ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇಲ್ಲಿ ದೀಪಾಗೆ ಕಂಚಿನ ಪದಕ ಗೆಲ್ಲಲು ಸಾಧ್ಯವಾಗದಿದ್ದರೂ, ಅವರು ಖಂಡಿತವಾಗಿಯೂ ಅನೇಕ ಆಟಗಾರರಿಗೆ ಸ್ಫೂರ್ತಿಯಾದರು. ಇದೀಗ ಈ ಪದಕ ಬರವನ್ನು ನೀಗಿಸಲು ಪ್ರಣತಿ ನಾಯಕ್‌ ಟೋಕಿಯೊಗೆ ತೆರಳಿದ್ದಾರೆ. ಆದರೆ ಈ ಬಾರಿ ದೀಪಾ ಅವರು ಈ ಜಾಗತಿಕ ಕ್ರೀಡಾಕೂಡದಲ್ಲಿ ಪಾಲ್ಗೊಳುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಆದರೆ ಅವರ ಹೆಜ್ಜೆಗಳನ್ನು ಅನುಸರಿಸಿ ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಲು ಪ್ರಣತಿ ಸಜ್ಜಾಗಿದ್ದಾರೆ.

Advertisement

ಬಸ್‌ ಚಾಲಕನ ಮಗಳು
ಪ್ರಣತಿ ನಾಯಕ್‌ ಪಶ್ಚಿಮ ಬಂಗಾಳದ ಮಿಡ್ನಾಪೋರ್‌ ಜಿಲ್ಲೆಯವರಾಗಿದ್ದು, ಅವರು ಮಧ್ಯಮ ಕುಟುಂಬದಿಂದ ಬಂದವರು. ಆಕೆಯ ತಂದೆ ಬಸ್‌ ಚಾಲಕರಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪ್ರಣತಿ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರ ತಂದೆ ತಮ್ಮ ಮಗಳಿಗೆ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದು ತಮಗೆ ಬಹಳ ಹೆಮ್ಮೆಯ ವಿಷಯ ಬಡತನದ ಕುಟುಂಬದಿಂದ ಬಂದವರಾಗಿದ್ದರೂ ಮಗಳ ಸಾಧನೆಯ ಮುಂದೆ ಎಲ್ಲವು ಶೂನ್ಯ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಲು ಅವಕಾಶ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಣತಿ ನಾಯಕ್‌ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದೇಶವೇ ಹೆಮ್ಮೆಪಡುವಂತೆ ಮಾಡುವುದು ನನ್ನ ಮೊದಲ ಗುರಿ ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದ ಅಭ್ಯಾಸಕ್ಕೆ ಅಡ್ಡಿ
ಕರೋನಾ ಸಾಂಕ್ರಾಮಿಕದಿಂದಾಗಿ ನಾನು ಒಂದು ವರ್ಷಕ್ಕೂ ಹೆಚ್ಚು ಸಮಯ ಮನೆಯಲ್ಲಿಯೇ ಇದ್ದೇ. ಇದೀಗ ಕಳೆದ ಎರಡು ತಿಂಗಳಿನಿಂದ ಮತ್ತೆ ತರಬೇತಿಯನ್ನು ಮುಂದುವರೆಸಿದ್ದೇನೆ.

ಕೊರೊನಾ ಸಾಂಕ್ರಾಮಿಕ ಯುಗದಲ್ಲಿ ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನ ಒಂದೇ ರೀತಿ ಆಗಿರುವುದಿಲ್ಲ ನಾನು ಇತರ ಜಿಮ್ನಾಸ್ಟ್‌ಗಳಂತೆ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಶಕ್ತಿಯಿರುವವರು ಲಾಕ್‌ಡೌನ್‌ನಲ್ಲಿ ಸಹ ನಿರಂತರವಾಗಿ ತರಬೇತಿ ಪಡೆಯುತ್ತಿದ್ದರು. ಆದರೆ ನನ್ನ ಬಳಿ ಫಿಟ್‌ನೆಸ್‌ಗಾಗಿ ಯಾವುದೇ ಜಿಮ್‌ ಇರಲಿಲ್ಲ. ಈ ದೊಡ್ಡ ಪಂದ್ಯಾವಳಿಗಾಗಿ ಮನೆಯಲ್ಲಿಯೇ ನಾನು ನನ್ನನ್ನು ಸಿದ್ಧಪಡಿಸಿಕೊಂಡಿದ್ದೇನೆ ಎಂದು ಹೇಳಿದರು . ಇದೆಲ್ಲದರ ಪರಿಶ್ರಮ ಟೋಕಿಯೊದಲ್ಲಿ ನನಸಾಗಲಿ ಎನ್ನುವುದು ಭಾರತೀಯ ಕ್ರೀಡಾಭಿಮಾನಿಗಳ ಆಶಯವಾಗಿದೆ.

ಏಕೈಕ ಭಾರತೀಯ ಜಿಮ್ನಾಸ್ಟ್‌:
ಪ್ರಣತಿ ನಾಯಕ್‌ ಅವರು ದೀಪ ಕರ್ಮಾಕರ್‌ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಎರಡನೇ ಭಾರತೀಯ ಮಹಿಳಾ ಜಿಮ್ನಾಸ್ಟ್‌ ಆಗಿದ್ದಾರೆ. ಇದಲ್ಲದೆ ಪ್ರಣತಿ ನಾಯಕ್‌ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಏಕೈಕ ಭಾರತೀಯ ಜಿಮ್ನಾಸ್ಟ್‌ ಕೂಡ ಆಗಿದ್ದಾರೆ.

– ಅಭಿ 

Advertisement

Udayavani is now on Telegram. Click here to join our channel and stay updated with the latest news.

Next