Advertisement

ಟೋಕಿಯೊ ಒಲಿಂಪಿಕ್ಸ್‌ ಹಾಕಿ-2020: ಮೊದಲ ಗುರಿ ಸೆಮಿ: ಮನ್‌ಪ್ರೀತ್‌

10:14 AM Jan 02, 2020 | Team Udayavani |

ಹೊಸದಿಲ್ಲಿ: ಇದು ಒಲಿಂಪಿಕ್ಸ್‌ ವರ್ಷ. ಜುಲೈ-ಆಗಸ್ಟ್‌ ತಿಂಗಳಲ್ಲಿ ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ವಿಶ್ವದ ಮಹೋನ್ನತ ಕ್ರೀಡಾಕೂಟ ಜರಗಲಿದೆ. ಭಾರತದ ಪಾಲಿಗೆ ಒಲಿಂಪಿಕ್ಸ್‌ ಎಂದೊಡನೆ ಕಣ್ಮುಂದೆ ಸುಳಿಯುವ ಕ್ರೀಡೆಯೆಂದರೆ ಹಾಕಿ. ಒಂದು ಕಾಲದ ಹಾಕಿ ಸಾಮ್ರಾಟ ನಾಗಿ ಮೆರೆದ ಭಾರತವಿಲ್ಲಿ ಗತವೈಭ ವವನ್ನು ಪುನರಾವರ್ತಿಸಲು ಶಕ್ತಿಮೀರಿ ಪ್ರಯತ್ನಿಸಲಿದೆ.

Advertisement

ಈ ಸಂದರ್ಭದಲ್ಲಿ ಮಾತಾಡಿದ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ಅಗ್ರ ನಾಲ್ಕರಲ್ಲಿ ಸ್ಥಾನ ಸಂಪಾದಿಸುವುದು ಭಾರತದ ಮೊದಲ ಗುರಿ ಆಗಿದೆ, ಆದರೆ ನಾವು ಫೈನಲ್‌ನಲ್ಲಿ ಆಡುವ ವಿಶ್ವಾಸವಿದೆ ಎಂದಿದ್ದಾರೆ.

“ಒಲಿಂಪಿಕ್ಸ್‌ ಹಾಕಿ ತಯಾರಿಗೆ ಉಳಿದಿರುವುದು 6 ತಿಂಗಳು ಮಾತ್ರ. ಪ್ರತೀ ದಿನವೂ, ಪ್ರತಿಯೊಂದು ಹಂತದಲ್ಲೂ ನಮ್ಮ ಯೋಜನೆ, ಕಾರ್ಯತಂತ್ರಗಳಲ್ಲಿ ಸುಧಾರಣೆ ಆಗಬೇಕಿದೆ. ಈಗಾಗಲೇ ಕೋಚ್‌ ಗ್ರಹಾಂ ರೀಡ್‌ ಮಾರ್ಗದರ್ಶನದಲ್ಲಿ ನಾವು ಕಠಿನ ದುಡಿಮೆಯಲ್ಲಿ ತೊಡಗಿದ್ದೇವೆ. ನಿರೀಕ್ಷಿತ ಫ‌ಲಿತಾಂಶ ಲಭಿಸುವ ವಿಶ್ವಾಸ ಇದೆ’ ಎಂದು ಮನ್‌ಪ್ರೀತ್‌ ಹೇಳಿದರು.

“ಟೋಕಿಯೊದಲ್ಲಿ ಸೆಮಿಫೈನಲ್‌ ತಲಪುವುದು ಮೊದಲ ಗುರಿ. ಇಲ್ಲಿಂದ ಮುಂದೆ ಪಂದ್ಯಾವಳಿ ಮುಕ್ತವಾಗಿರುತ್ತದೆ. ಅದು ಯಾರದೇ ಪಂದ್ಯ ವಾಗಿರಬಹುದು. ಫೈನಲ್‌ ಆಡುವ ಸಾಮರ್ಥ್ಯ ಭಾರತಕ್ಕಿದೆ ಎಂಬುದು ನನ್ನ ನಂಬಿಕೆ..’ ಎಂಬುದಾಗಿ ಮನ್‌ಪ್ರೀತ್‌ ಅಭಿಪ್ರಾಯಪಟ್ಟರು.

2019 ಫ‌ಲಪ್ರದ ವರ್ಷ
“2019 ನಮ್ಮ ಪಾಲಿಗೆ ಫ‌ಲಪ್ರದ ವರ್ಷ ವಾಗಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸುವುದೇ ಮುಖ್ಯ ಗುರಿ ಆಗಿತ್ತು. ಹಾಗೆಯೇ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಕಾಯ್ದುಕೊಂಡದ್ದು ಕೂಡ ದೊಡ್ಡ ಸಾಧನೆ’ ಎಂದರು.

Advertisement

“ಕಳೆದ ವರ್ಷ ಬಹಳಷ್ಟು ಮಂದಿ ಯುವ ಆಟಗಾರರು ಮೊದಲ ಅಂತಾ ರಾಷ್ಟ್ರೀಯ ಪಂದ್ಯವನ್ನಾಡಿದರು. ಎಲ್ಲರೂ ಪ್ರತಿಭಾನ್ವಿತರೇ ಆಗಿದ್ದರು. ಆಡುವ ಬಳಗವೀಗ ದೊಡ್ಡ ಮಟ್ಟದಲ್ಲಿ ವಿಸ್ತರಿಸಲ್ಪಟ್ಟಿದೆ. ಇದೊಂದು ಉತ್ತಮ ಬೆಳವಣಿಗೆ. ಅಂತಾರಾಷ್ಟ್ರೀಯ ಪಂದ್ಯಗಳ ಒತ್ತಡವನ್ನು ನಿಭಾಯಿಸಬಲ್ಲ ಸಾಮರ್ಥ್ಯ ಇವರಲ್ಲಿ ಕಂಡುಬಂದಿದೆ…’ ಎಂಬುದಾಗಿ ಮನ್‌ಪ್ರೀತ್‌ ಹೇಳಿದರು.

ಏಶ್ಯನ್‌ ಚಾಂಪಿಯನ್ಸ್‌
ಭಾರತ ಸತತವಾಗಿ 2016 ಮತ್ತು 2018ರ “ಏಶ್ಯನ್‌ ಚಾಂಪಿಯನ್ಸ್‌’ ಹಾಕಿ ಪ್ರಶಸ್ತಿ ಜಯಿಸಿದ್ದನ್ನೂ ಮನ್‌ಪ್ರೀತ್‌ ಈ ಸಂದರ್ಭದಲ್ಲಿ ಪ್ರಸ್ತಾವಿಸಿದರು. 2020ರ ಅಕ್ಟೋಬರ್‌ನಲ್ಲಿ ಮತ್ತೆ ಈ ಪಂದ್ಯಾವಳಿ ಏರ್ಪಡಲಿದ್ದು, ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸುವುದು ತಮ್ಮ ಗುರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next