Advertisement

ಕ್ರೀಡೆ ಗೆದ್ದ ಕ್ಷಣವಿದು!

08:30 PM Aug 03, 2021 | Team Udayavani |

ಒಲಿಂಪಿಕ್ಸ್ ಕೂಟದ ಸ್ಪರ್ಧಾತ್ಮಕ ದೃಶ್ಯಗಳ ನಡುವೆ ಇಂತಹ ಮಾನವೀಯ ಮುಖಗಳು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆಯುವುದಿಲ್ಲ. ಈ ದೃಶ್ಯವು ಟೋಕಿಯೊ ಓಲಂಪಿಕ್ ನ  ಪುರುಷರ ಹೈಜಂಪ್ ಫೈನಲ್ ಪಂದ್ಯದಲ್ಲಿ ನಡೆದ ಒಂದು ಘಟನೆ. ಯಾರ ಮನಸ್ಸನ್ನೂ ಗಾಢವಾಗಿ ತಟ್ಟುವ ಸಂದೇಶ ಇಲ್ಲಿ ಅಡಗಿದೆ. ಓದುತ್ತಾ ಹೋಗಿ.

Advertisement

ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು.ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಲೆವೆಲ್ ಆಯಿತು.

ನಂತರದಲ್ಲಿ ತೀರ್ಪುಗಾರರು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಜಂಪ್ ಮಾಡುವ ಅವಕಾಶಗಳನ್ನು ನೀಡಿದರು. ಇಬ್ಬರೂ ಮೂರೂ ಬಾರಿಯೂ 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲೆ ಇಲ್ಲ! ಹಾಗಾಗಿ ಇಬ್ಬರಿಗೂ ಮತ್ತೊಂದು  ಅವಕಾಶವನ್ನು ನೀಡಲಾಯಿತು.

ಆದರೆ ಇಟಲಿಯ ಸ್ಪರ್ಧಿ ತಂಬರಿಯ ಕಾಲಿಗೆ ಗಂಭೀರ ಪೆಟ್ಟಾದ್ದರಿಂದ ಆತನು ದುಃಖದಿಂದ ಕೊನೆಯ ಅವಕಾಶವನ್ನು ಉಪಯೋಗ ಮಾಡದೆ ಹಿಂದೆ ಸರಿದನು.

ಈ ಕ್ಷಣದಲ್ಲಿ ಕತಾರ್ ದೇಶದ  ಬಾರ್ಶಿಮ್ ಎದುರಿಗೆ ಯಾವ ಸ್ಪರ್ಧಿ ಕೂಡ ಇಲ್ಲದೆ ಆತನು   ಸುಲಭವಾಗಿ ಚಿನ್ನದ ಪದಕ ಧರಿಸಲು ಕೊರಳು ಒಡ್ಡಬಹುದಿತ್ತು.

Advertisement

ಆದರೆ ಬಾರ್ಶಿಮ್ ತಲೆಯಲ್ಲಿ ನಡೆಯುತ್ತಿದ್ದ ವಿಚಾರವೇ ಬೇರೆ ಇತ್ತು. ಅವನು ಅಲ್ಲಿದ್ದ ಒಲಿಂಪಿಕ್ಸ್  ಅಧಿಕಾರಿಗಳನ್ನು “ನಾನು ಕೂಡ  ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಬಂಗಾರದ ಪದಕವನ್ನ ಇಬ್ಬರಿಗೂ ಹಂಚುತ್ತೀರಲ್ಲವೇ?” ಅಂತ ಪ್ರಶ್ನಿಸಿದ!

ಅಧಿಕಾರಿಗಳು ತಮ್ಮಲ್ಲಿ ಪರಾಮರ್ಶೆ ಮಾಡಿ ‘ಹೌದು.  ಹಾಗಾದಲ್ಲಿ ನಿಯಮದ ಪ್ರಕಾರ ನಿಮ್ಮಿಬ್ಬರನ್ನೂ ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ.’ ಎಂದರು.

ಆಗ ಬಾರ್ಶಿಮ್ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ತಕ್ಷಣವೇ ತಾನು ಕೂಡ ಕೊನೆಯ ಅವಕಾಶದಿಂದ ಹಿಂದೆ ಸರಿಯುವುದಾಗಿ ತಿಳಿಸಿದನು! ಅಧಿಕಾರಿಗಳು ಒಂದು ಕ್ಷಣ ಚಕಿತರಾದರು. ಯಾಕೆಂದರೆ ಅಂತಹ ಘಟನೆ ಒಲಿಂಪಿಕ್ಸ್ ಕೂಟದಲ್ಲಿ ಅದುವರೆಗೂ ನಡೆದಿರಲಿಲ್ಲ! ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳನ್ನು ಜಂಟಿಯಾಗಿ ಚಿನ್ನದ ಪದಕದ ವಿಜೇತರೆಂದು ಘೋಷಿಸಿದರು.

ಇದನ್ನು ತಿಳಿದ ಇಟಲಿಯ ಪ್ರತಿಸ್ಪರ್ಧಿ ಜಿಯಾನ್ ಮಾರ್ಕೊ ತಂಬರಿ ಅತ್ಯಂತ ಸಂತಸ ಮತ್ತು ಭಾವಸ್ಪರ್ಶದಿಂದ ಹಾರಿ  ಬಾರ್ಶಿಮನನ್ನು ಅಪ್ಪಿಕೊಂಡ. ಅವರಿಬ್ಬರು ಕೂಡ ಭಾವುಕರಾಗಿ ಕಣ್ಣೀರು ಹರಿಸಿದರು.

ಇದನ್ನು ನೋಡಿದ ಜನರೆಲ್ಲರೂ ಕೂಡ ಕಣ್ಣೀರು ಸುರಿಸಿ ಚಪ್ಪಾಳೆ ತಟ್ಟಿದರು. ಅಲ್ಲದೇ ಸ್ಪರ್ಧಿಗಳ, ಅದರಲ್ಲೂ ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮರ ಕ್ರೀಡಾ ಮನೋಭಾವಕ್ಕೆ ಮನಸೋತಿದ್ದರು.

ಕ್ರೀಡೆಯಲ್ಲಿ ಸೋಲು, ಗೆಲುವುಗಳನ್ನು ಮೀರಿ ನಿಂತ ಹೃದಯಸ್ಪರ್ಶಿ ಘಟನೆ ಇದು. ಕ್ರೀಡೆಗೆ ಭಾಷೆ, ದೇಶ, ಮತ ಮತ್ತು ಧರ್ಮಗಳ ಗಡಿ ಇರುವುದಿಲ್ಲ ಎಂಬುದನ್ನು ಈ ಘಟನೆಯು ನಿರೂಪಿಸಿತು. ಗೆದ್ದವರು, ಸೋತವರು ಯಾರು ಎಂಬುದಕ್ಕಿಂತ ಕ್ರೀಡೆ ಗೆದ್ದಿತು ಎಂದು ಪ್ರೂವ್ ಆದ ಘಟನೆ ಇದು!

ಸಣ್ಣ ಸಣ್ಣ ವಸ್ತುವನ್ನು ಹಂಚಿಕೊಳ್ಳುವ ವಿಷಯಕ್ಕೂ ಮನುಷ್ಯ ಸ್ವಾರ್ಥಿಯಾಗುತ್ತಿರುವ ಇಂದಿನ ದಿನಗಳಲ್ಲಿ ಅನಾಯಾಸವಾಗಿ ತನ್ನದಾಗುತ್ತಿದ್ದ ವಿಶ್ವ ಮಟ್ಟದ  ಬಂಗಾರ ಪದಕವನ್ನು ಪ್ರತಿಸ್ಪರ್ಧಿಯೊಂದಿಗೆ ಹಂಚಿಕೊಳ್ಳಲು ತಾನಾಗಿಯೇ ಮುಂದಾದ ಕತಾರನ ಮುತಾಜ್ ಈಸಾ ಬಾರ್ಶಿಮ್ ಗೆ ಹೃತ್ಪೂರ್ವಕ ಅಭಿನಂದನೆಗಳು.

 

-ರಾಜೇಂದ್ರ ಭಟ್,ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next