Advertisement
ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ಗೆ ಕೋವಿಡ್ 19 ವೈರಸ್ ಭೀತಿ ತಟ್ಟಿದೆ. ಇದು ನಡೆಯುವುದೇ ಅನುಮಾನವಿದೆ. ಆಗ ಜಪಾನ್ ಸಾವಿರಾರು ಕೋಟಿ ರೂ.ಗಳ ನಷ್ಟ ಅನುಭವಿಸ ಬೇಕಾಗುತ್ತದೆ. ಅಕಸ್ಮಾತ್ ಒಲಿಂಪಿಕ್ಸ್ ನಡೆದರೂ ಇದಕ್ಕೆ ಬಹುತೇಕ ದೇಶಗಳ ಕ್ರೀಡಾಪಟುಗಳು ಗೈರಾಗುವುದರಲ್ಲಿ ಅನುಮಾನವಿಲ್ಲ. ಆಗಲೂ ಜಪಾನ್‌ಗೆ ನಷ್ಟವೇ.
1923ರಲ್ಲಿ ರುದ್ರಭಯಾನಕ ಭೂಕಂಪಕ್ಕೆ ಸಿಲುಕಿದ್ದ ಜಪಾನ್, ತಾನು ಈ ಪ್ರಾಕೃತಿಕ ವಿಕೋಪದಿಂದ ಹೇಗೆ ಮತ್ತೆ ತಲೆಯೆತ್ತಿ ನಿಂತೆ ಎಂಬುದನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ 1940ರ ಒಲಿಂಪಿಕ್ಸ್ ಆ ದೇಶಕ್ಕೆ ಮುಖ್ಯವಾಗಿತ್ತು ಎಂಬುದಾಗಿ ಡೇವಿಡ್ ಗೋಲ್ಡ್‌ಬ್ಲಾಟ್ ತಮ್ಮ “ದಿ ಗೇಮ್ಸ್’ ಪುಸ್ತಕದಲ್ಲಿ ಬರೆದಿದ್ದಾರೆ. ಈ ಕಾರಣಕ್ಕಾಗಿ ಇದು “ರಿಕವರಿ ಗೇಮ್ಸ್’ ಆಗಿತ್ತು. ಆದರೆ ಕೊನೆಗೆ ಇದು “ಮಿಸ್ಸಿಂಗ್ ಒಲಿಂಪಿಕ್ಸ್’ ಯಾದಿಯಲ್ಲಿ ಸೇರಿಕೊಂಡದ್ದು ಮಾತ್ರ ವಿಪರ್ಯಾಸ.
Related Articles
Advertisement
ಬೆಂಬಲಕ್ಕೆ ನಿಂತ ಮುಸೊಲಿನಿ1940ರ ಒಲಿಂಪಿಕ್ಸ್‌ಗೆ ಜಪಾನ್ 1932ರಲ್ಲಿ ಬಿಡ್ ಸಲ್ಲಿಸಿತ್ತು. ಅಂದು ಸ್ಪರ್ಧೆಯಲ್ಲಿದ್ದ ನಗರಗಳೆಂದರೆ ಹೆಲ್ಸಿಂಕಿ ಮತ್ತು ರೋಮ್. ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ ಜಪಾನ್ ಬೆಂಬಲಕ್ಕೆ ನಿಂತರು. 1944ರ ರೋಮ್ ಒಲಿಂಪಿಕ್ಸ್ ಆತಿಥ್ಯಕ್ಕೆ ಜಪಾನ್ ಸಹಕರಿಸುವುದಾದರೆ ತಾನು ಬಿಡ್‌ನಿಂದ ಹಿಂದೆ ಸರಿಯುವ ನಿರ್ಧಾರ ಮುಸೊಲಿನಿಯದಾಗಿತ್ತು. ಹಾಗೆಯೇ ಆಯಿತು. ಆದರೆ ಈ ರೋಮ್ ಒಲಿಂಪಿಕ್ಸ್ ಕೂಡ ಮಹಾಯುದ್ಧಕ್ಕೆ ಬಲಿ ಯಾಯಿತೆಂಬುದು ಬೇರೆ ವಿಷಯ. ಕೊನೆಯಲ್ಲಿ ಟೋಕಿಯೊ ಮತ್ತು ಹೆಲ್ಸಿಂಕಿ ಮಾತ್ರ ಬಿಡ್‌ನಲ್ಲಿ ಉಳಿದವು. ಇದರಲ್ಲಿ ಜಪಾನ್ ರಾಜಧಾನಿ 37-26 ಮತಗಳ ಮೇಲುಗೈ ಸಾಧಿಸಿತು. ರಾಜತಾಂತ್ರಿಕ ಒತ್ತಡ…
ಏಶ್ಯದಲ್ಲಿ ಒಲಿಂಪಿಕ್ಸ್ ನಡೆಯಲಿದೆ ಎಂಬುದು ಅಪಾರ ಸಂತಸಕ್ಕೆ ಕಾರಣವಾಗಿತ್ತು. ಕ್ರೀಡಾಕೂಟದ ಎಲ್ಲ ದಿನಾಂಕಗಳನ್ನು ಅಂತಿಮಗೊಳಿಸಲಾಗಿತ್ತು. ಪೋಸ್ಟರ್‌ಗಳನ್ನೂ ಮುದ್ರಿಸಲಾಗಿತ್ತು. 1940ರ ಸೆ. 21ರಂದು ಉದ್ಘಾಟನಾ ಕಾರ್ಯಕ್ರಮವಿತ್ತು. ಇದೇ ವೇಳೆ ಜಪಾನ್ ಮೇಲೆ ಹೊರಗಿನಿಂದ ರಾಜತಾಂತ್ರಿಕ ಒತ್ತಡಗಳೂ ಹೇರಲ್ಪಟ್ಟವು. ಹೀಗಾಗಿ ಒಲಿಂಪಿಕ್ಸ್‌ಗಾಗಿ ಖರ್ಚು ಮಾಡುವ ಮೊತ್ತವನ್ನು ಮಿಲಿಟರಿ ವೆಚ್ಚಕ್ಕೆ ಬಳಸಿ ಎಂಬ ಒತ್ತಡ ದೇಶದೊಳಗಿನಿಂದಲೇ ಹೆಚ್ಚಿತು. ಇದೇ ವೇಳೆ ಜಪಾನ್‌ನಲ್ಲಿ ಯುದ್ಧಸದೃಶ ಸ್ಥಿತಿ ಇರುವುದರಿಂದ ಬ್ರಿಟನ್ ಮತ್ತು ಅಮೆರಿಕ ಒಲಿಂಪಿಕ್ಸ್ ಬಹಿಷ್ಕರಿಸುವ ಸಾಧ್ಯತೆಯೂ ಇದೆ ಎಂಬ ಮಾಹಿತಿಯೂ ಲಭಿಸಿತು. ಅಂತಿಮವಾಗಿ ದ್ವಿತೀಯ ಮಹಾಯುದ್ಧ ಈ ಕ್ರೀಡಾಕೂಟವನ್ನೇ ಆಪೋಶನ ತೆಗೆದುಕೊಂಡಿತು. ತ್ರಿವಳಿ ಪ್ರಾಕೃತಿಕ ಆಘಾತ
2020ರ ಒಲಿಂಪಿಕ್ಸ್ ಕೂಡ ಜಪಾನ್ ಪಾಲಿಗೆ “ರಿಕವರಿ ಗೇಮ್ಸ್’ ಆಗಿತ್ತು. 2011ರ ತ್ರಿವಳಿ ಪ್ರಾಕೃತಿಕ ಆಘಾತದಿಂದ ಚೇತರಿಸಿದ ತಾನು ಮತ್ತೆ ಹೇಗೆ ಸದೃಢವಾಗಿ ಎದ್ದು ನಿಂತೆ ಎಂಬುದನ್ನು ಪ್ರಪಂಚಕ್ಕೆ ಸಾರಬೇಕಿತ್ತು. ಅಂದು ಭಯಾನಕ ಭೂಕಂಪ, ಸುನಾಮಿ ಮತ್ತು ಫುಕೋಶಿಮ ಅಣುಸ್ಥಾವರ ಸ್ಫೋಟ ಜಪಾನನ್ನು ಹೈರಾಣಾಗಿಸಿತ್ತು. ಇದರಿಂದ ಆ ದೇಶವೀಗ ಅಮೋಘ ರೀತಿಯಲ್ಲಿ ಚೇತರಿಸಿಕೊಂಡಿದೆ. ಆದರೆ ಕೊರೊನಾ ವೈರಸ್ ಕಂಟಕವಾಗಿ ಪರಿಣಮಿಸಿದೆ! ಪರಿಹಾರಕ್ಕೆ ಐಒಸಿ ಕೂಡ ವಿಫಲ
ಅತಂತ್ರಗೊಂಡಿರುವ ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಖಚಿತವಾದ ನಿರ್ಧಾರಕ್ಕೆ ಬರುವಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೂ (ಐಒಸಿ) ವಿಫಲಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಮಾದರಿ ಎನ್ನಬಹುದಾದ ಪರಿಹಾರ ಎಂಬುದಿಲ್ಲ. ಇದು ಅಸಾಮಾನ್ಯ ಸ್ಥಿತಿಯಾಗಿರುವುದರಿಂದ ಅಸಾಮಾನ್ಯ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಐಒಸಿಯ ವಕ್ತಾರರೊಬ್ಬರು ಹೇಳಿದ್ದಾರೆ. ಕೆಲವು ಉನ್ನತ ಕ್ರೀಡಾಪಟುಗಳು ತಮ್ಮ ಆರೋಗ್ಯವನ್ನು ಒತ್ತೆಯಿಟ್ಟು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕಾಗಿದೆ ಎಂಬ ಟೀಕೆಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಐಒಸಿ ಈ ಹೇಳಿಕೆ ನೀಡಿದೆ. “ಕ್ರೀಡಾಕೂಟದ ಸಮಗ್ರತೆ ಮತ್ತು ಕ್ರೀಡಾಪಟುಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬಿಕ್ಕಟ್ಟಿಗೊಂದು ಪರಿಹಾರವನ್ನು ಕಂಡುಕೊಳ್ಳಲು ಐಒಸಿ ಬದ್ಧವಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಮಾದರಿ ಎನ್ನಬಹುದಾದ ಪರಿಹಾರ ನಮ್ಮ ಎದುರು ಇಲ್ಲ’ ಎಂದಿದ್ದಾರೆ ಐಒಸಿ ಅಧಿಕಾರಿ. “ಟೋಕಿಯೊ ಒಲಿಂಪಿಕ್ಸ್ ನಡೆಸುವುದು ಸಂವೇದನಾರಹಿತ ನಡೆ’
ಕೊರೊನಾ ಹಾವಳಿಯ ನಡುವೆಯೇ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸುವುದಕ್ಕೆ ಈಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಳಗಿಂದಲೇ (ಐಒಸಿ) ಅಪಸ್ವರ ವ್ಯಕ್ತವಾಗಿದೆ. ಟೋಕಿಯೊ ಒಲಿಂಪಿಕ್ಸ್ ನಡೆಸಲು ಒತ್ತಡ ಹಾಕುವುದು “ಸಂವೇದನಾ ರಹಿತ ಮತ್ತು ಬೇಜವಾಬ್ದಾರಿ ನಡೆ’ ಎಂದಿದ್ದಾರೆ ಐಒಸಿ ಸದಸ್ಯೆ ಹ್ಯಾಲಿ ವಿಕನ್ ಹೈಸರ್. ಐಒಸಿಯ ಆ್ಯತ್ಲೀಟ್ಸ್ ಕಮಿಷನ್‌ನ ಸದಸ್ಯರೊಬ್ಬರು, ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ “ಕಠಿನ ನಿರ್ಧಾರ’ ಕೈಗೊಳ್ಳುವ ಅಗತ್ಯವಿಲ್ಲ ಎಂದಿರುವುದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ ಹ್ಯಾಲಿ ಈ ಹೇಳಿಕೆ ನೀಡಿದ್ದಾರೆ. ಹ್ಯಾಲಿ, 2002ರಿಂದ 2016ರ ತನಕ ಸತತ 4 ಸಲ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಕೆನಡದ ಐಸ್ ಹಾಕಿ ತಂಡದ ಸದಸ್ಯೆಯಾಗಿದ್ದಾರೆ. “ಪ್ರಸ್ತುತ ಒಲಿಂಪಿಕ್ಸ್‌ಗಿಂತಲೂ ಕೊರೊನಾ ಬಿಕ್ಕಟ್ಟೇ ದೊಡ್ಡದಾಗಿದೆ. ಮುಂದಿನ 3 ತಿಂಗಳ ಮಾತು ಬಿಡಿ, ಮುಂದಿನ 24 ತಾಸುಗಳಲ್ಲಿ ಏನಾಗಬಹುದು ಎನ್ನುವುದೇ ನಮಗೆ ಗೊತ್ತಾಗುತ್ತಿಲ್ಲ. ಈಗಾಗಲೇ ಕೊರೊನಾ ಕ್ರೀಡಾಪಟುಗಳ ತಯಾರಿ ಮತ್ತು ತರಬೇತಿಯನ್ನು ಅಸ್ತವ್ಯಸ್ತಗೊಳಿಸಿದೆ. ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಪರಿಪೂರ್ಣವಾದ ಕ್ರೀಡಾ ಕೂಟ ನಡೆಯುವುದು ಅಸಾಧ್ಯ’ ಎಂದು ಅಭಿಪ್ರಾಯ ಪಟ್ಟಿದ್ದಾರೆ ಹ್ಯಾಲಿ. “ಒಲಿಂಪಿಕ್ಸ್‌ಗೆ ತಯಾರಿ ನಡೆಸಿರುವ ಕ್ರೀಡಾಪಟುಗಳ ವೇದನೆ ಮತ್ತು ನಿರಾಶೆ ಏನೆಂಬುದು ಕ್ರೀಡಾಪಟುವಾಗಿರುವ ನನಗೆ ಅರ್ಥವಾಗುತ್ತದೆ. ಆದರೆ ಈಗ ಪರಿಸ್ಥಿತಿ ಕೈಮೀರಿ ಹೋಗಿದೆ. ಇಡೀ ಜೀವನವನ್ನು ನೀವು ಒಂದು ಕೂಟಕ್ಕಾಗಿ ಮುಡಿಪಾಗಿಟ್ಟಿದ್ದೀರಿ. ಆದರೆ ಅತಂತ್ರ ಸ್ಥಿತಿಯಲ್ಲಿ ಎಲ್ಲರೂ ಅಸಹಾಯಕರಾಗಿದ್ದಾರೆ’ ಎಂದಿದ್ದಾರೆ ಹ್ಯಾಲಿ ವಿಕನ್‌ಹೈಸರ್.