Advertisement

ಒಲಿಂಪಿಕ್ಸ್‌ ಜ್ಯೋತಿ ಸ್ವಾಗತಿಸಿದ ಟೋಕಿಯೊ

01:30 AM Jul 10, 2021 | Team Udayavani |

ಟೋಕಿಯೊ: “ಬೆಳಕೆಂಬ ಭರವಸೆ ನಮ್ಮ ಮುಂದಿದೆ’ ಎಂಬ ಆಶಯವನ್ನು ಹೊತ್ತ ಒಲಿಂಪಿಕ್ಸ್‌ ಜ್ಯೋತಿ 106 ದಿನಗಳ ಸಂಚಾರದ ಬಳಿಕ ಆತಿಥೇಯ ತಾಣವಾದ ಟೋಕಿಯೊ ನಗರಕ್ಕೆ ಆಗಮಿಸಿತು. ಇಲ್ಲಿನ ಆಯ್ದ ಪ್ರದೇಶಗಳಲ್ಲಿ ಮುಂದಿನ ಎರಡು ವಾರಗಳ ತಿರುಗಾಟ ನಡೆಸಿದ ಬಳಿಕ ಜು. 23ರ ಉದ್ಘಾಟನಾ ಸಮಾರಂಭದಲ್ಲಿ ಇದು “ಒಲಿಂಪಿಕ್ಸ್‌ ಕುಂಡ’ದಲ್ಲಿ ಪ್ರಜ್ವಲಿಸಲಿದೆ.
1964ರ ಟೋಕಿಯೊ ಒಲಿಂಪಿಕ್ಸ್‌ಗಾಗಿ ನಿರ್ಮಿಸಲಾದ ಐತಿಹಾಸಿಕ “ಕೊಮಝಾವ ಒಲಿಂಪಿಕ್‌ ಪಾರ್ಕ್‌ ಸ್ಟೇಡಿಯಂ’ ನಲ್ಲಿ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ಮೂರು ಬಾರಿಯ ಪ್ಯಾರಾಲಿಂಪಿಕ್‌ ಶೂಟರ್‌ ಟಗುಚಿ ಅಕಿ ಜ್ಯೋತಿಯನ್ನು ಪೋಡಿಯಂಗೆ ತಂದರು. ಮಾ. 25ರಂದು ಫ‌ುಕುಶಿಮಾದಲ್ಲಿ ಒಲಿಂಪಿಕ್ಸ್‌ ಜ್ಯೋತಿ ರಿಲೇಗೆ ಟಗುಚಿ ಅಕಿ ಅವರೇ ಮರು ಚಾಲನೆ ನೀಡಿದ್ದರು. ಹೀಗಾಗಿ ಇವರ ಪಾಲಿಗೆ ಇದೊಂದು ಸ್ಮರಣೀಯ ಕ್ಷಣವೆನಿಸಿತು.

Advertisement

ಟಾರ್ಚ್‌ ರಿಲೇಯನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಟೋಕಿಯೊ ಗವರ್ನರ್‌ ಕೊçಕೆ ಯುರಿಕೊ ಧನ್ಯವಾದ ಸಲ್ಲಿಸಿದರು. ಜಪಾನಿನ ಮಾಜಿ ಟೆನಿಸ್‌ ಆಟಗಾರ್ತಿ ಮಟೌಕಾ ಶುಜೊ ಕೂಡ ಸಮಾರಂಭದ ವೇದಿಕೆ ಯಲ್ಲಿದ್ದರು.

ಒಲಿಂಪಿಕ್ಸ್‌ ವಿರೋಧಿ ಪ್ರತಿಭಟನೆ
ಇದೇ ವೇಳೆ ಸ್ಟೇಡಿಯಂ ಹೊರಗಡೆ ಒಲಿಂಪಿಕ್ಸ್‌ ವಿರೋಧಿ ಪ್ರತಿಭಟನೆಯೂ ನಡೆಯಿತು. “ನೋ ಒಲಿಂಪಿಕ್ಸ್‌ ಇನ್‌ ಟೋಕಿಯೊ’, “ಒಲಿಂಪಿಕ್ಸ್‌ ಕಿಲ್‌ ಅಸ್‌ ಆಲ್‌’, “ಒಲಿಂಪಿಕ್ಸ್‌ ಕಿಲ್‌ ದ ಪುವರ್‌’ ಮೊದಲಾದ ಫ‌ಲಕಗಳನ್ನು ಹಿಡಿದ ಪ್ರತಿಭಟನಾಕಾರರು ಒಲಿಂಪಿಕ್ಸ್‌ ವಿರೋಧಿ ಘೋಷಣೆ ಕೂಗತೊಡಗಿದರು.

ಫಿಟ್‌ನೆಸ್‌ ತೇರ್ಗಡೆಗೆ ಸೂಚನೆ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರೇಸ್‌ ವಾಕರ್‌ಗಳಾದ ಭಾವನಾ ಜಾಟ್‌, ಕೆ.ಟಿ. ಇರ್ಫಾನ್‌ ಮತ್ತು ಲಾಂಗ್‌ಜಂಪರ್‌ ಎಂ. ಶ್ರೀಶಂಕರ್‌ ಅವರಿಗೆ ಫಿಟ್‌ನೆಸ್‌ ಟೆಸ್ಟ್‌ಗೆ ಒಳಗಾಗಲು ಆ್ಯತ್ಲೆಟಿಕ್ಸ್‌ ಫೆಡರೇಶನ್‌ ಆಫ್ ಇಂಡಿಯಾ (ಎಎಫ್ಐ) ಸೂಚಿಸಿದೆ. ಇವರಲ್ಲಿ ಭಾವನಾ ಶುಕ್ರವಾರವೇ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾದರು.

“ಒಲಿಂಪಿಕ್ಸ್‌ಗೆ ನಾವು ಅನ್‌ಫಿಟ್‌ ಆ್ಯತ್ಲೀಟ್‌ಗಳನ್ನು ಕಳುಹಿಸಲು ಸಾಧ್ಯವಿಲ್ಲ. ಜಪಾನ್‌ಗೆ ತೆರಳುವ ಮುನ್ನ ಇವರೆಲ್ಲ ಸಂಪೂರ್ಣ ಫಿಟ್‌ನೆಸ್‌ ಹೊಂದಿರಬೇಕು. ಅದಕ್ಕಾಗಿ ಈ ಟೆಸ್ಟ್‌…’ ಎಂದಿದ್ದಾರೆ ಎಎಫ್ಐ ಅಧ್ಯಕ್ಷ ಎ. ಸುಮರಿವಲ್ಲ.

Advertisement

9,500 ಕಿ.ಮೀ. ಸಂಚಾರ
ಒಲಿಂಪಿಕ್ಸ್‌ ಜನ್ಮತಾಣವಾದ ಗ್ರೀಸ್‌ನ ಐತಿಹಾಸಿಕ ಒಲಿಂಪಿಯಾದಲ್ಲಿ 2020ರ ಮಾರ್ಚ್‌ 12ರಂದು ಈ ಜ್ಯೋತಿ ಪ್ರಯಾಣ ಆರಂಭಿಸಿತ್ತು. 9,500 ಕಿ.ಮೀ. ಸಂಚಾರ ಪೂರೈಸಿ ಜಪಾನ್‌ ಪ್ರವೇಶಿಸಿತ್ತು. ಆದರೆ ಕೊರೊನಾದಿಂದಾಗಿ ಒಲಿಂಪಿಕ್ಸ್‌ ಕೂಟವನ್ನು ಒಂದು ವರ್ಷ ಮುಂದೂಡುವ ಅನಿವಾರ್ಯತೆ ಎದುರಾಯಿತು. ಆಗ ಈ ಜ್ಯೋತಿಯನ್ನು ಟೋಕಿಯೊದ “ಒಲಿಂಪಿಕ್‌ ಮ್ಯೂಸಿಯಂ’ನಲ್ಲಿ ಇರಿಸಲಾಯಿತು. ಬಳಿಕ ಕಳೆದ ಮಾ. 25ರಂದು ರಿಲೇ ಪುನರಾರಂಭಗೊಂಡಿತ್ತು.

ಕ್ರೀಡಾಳುಗಳ ಜತೆ ಮೋದಿ ಸಂವಹನ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜು. 13ರಂದು ವರ್ಚುವಲ್‌ ಸಂವಹನ ನಡೆಸಲಿದ್ದಾರೆ. ಆ್ಯತ್ಲೀಟ್‌ಗಳಿಗೆ ಸ್ಫೂರ್ತಿ ತುಂಬಿಸುವುದೇ ಇದರ ಉದ್ದೇಶ. ಭಾರತದ ಮೊದಲ ತಂಡ ಜು. 17ರಂದು “ಏರ್‌ ಇಂಡಿಯಾ’ ವಿಮಾನದಲ್ಲಿ ಟೋಕಿಯೊಗೆ ಪ್ರಯಾಣಿಸಲಿದೆೆ.

ಸುಲಭ ಡ್ರಾ, ಕಠಿನ ಸವಾಲು: ಸಿಂಧು
ಹೈದರಾಬಾದ್‌, ಜು. 9: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಡ್ರಾ ಏನೋ ಸುಲಭವಾಗಿದೆ, ಆದರೆ ಸವಾಲು ಕಠಿನ ಎಂಬುದಾಗಿ ರಿಯೋ ರಜತ ಪದಕ ವಿಜೇತೆ, ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಹೇಳಿದ್ದಾರೆ.

ಟೋಕಿಯೊ ಕೂಟದ “ಜೆ’ ಗ್ರೂಪ್‌ನಲ್ಲಿ ಪಿ.ವಿ. ಸಿಂಧು ಸ್ಥಾನ ಪಡೆದಿದ್ದಾರೆ. ಇಲ್ಲಿನ ಇನ್ನಿಬ್ಬರು ಆಟಗಾರ್ತಿಯರೆಂದರೆ ಹಾಂಕಾಂಗ್‌ನ ಚೆಯುಂಗ್‌ ಎನ್‌ಗಾನ್‌ ಯೀ (34ನೇ ರ್‍ಯಾಂಕಿಂಗ್‌) ಮತ್ತು ಇಸ್ರೇಲ್‌ನ ಕ್ಸೆನಿಯಾ ಪೊಲಿಕರ್ಪೋವಾ (58ನೇ ರ್‍ಯಾಂಕಿಂಗ್‌).

“ಇದೊಂದು ಉತ್ತಮ ಡ್ರಾ. ಆದರೆ ಸವಾಲು ಕಠಿನ. ಎಲ್ಲರೂ ಟಾಪ್‌ ಫಾರ್ಮ್ನಲ್ಲಿದ್ದಾರೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನ್ನಲ್ಲಿದೆ’ ಎಂಬುದು ಸಿಂಧು ಅನಿಸಿಕೆ.

ಗ್ರೂಪ್‌ ಹಂತದ ಆಟಗಾರ್ತಿಯರ‌ ವಿರುದ್ಧ ಸಿಂಧು ಅಜೇಯ ದಾಖಲೆ ಹೊಂದಿದ್ದಾರೆ. ಎನ್‌ಗಾಯಿ ಯೀ ವಿರುದ್ಧ 5, ಪೊಲೊಕರ್ಪೋವಾ ವಿರುದ್ಧ ಎರಡೂ ಪಂದ್ಯಗಳನ್ನು ಜಯಿಸಿದ್ದಾರೆ.

ಪುರುಷರ ಸಿಂಗಲ್ಸ್‌
ಪುರುಷರ ಸಿಂಗಲ್ಸ್‌ನಲ್ಲಿ 15ನೇ ರ್‍ಯಾಂಕಿಂಗ್‌ನ ಬಿ. ಸಾಯಿ ಪ್ರಣೀತ್‌ “ಡಿ’ ಗ್ರೂಪ್‌ನಲ್ಲಿದ್ದಾರೆ. ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲೂjವ್‌ (29ನೇ ರ್‍ಯಾಂಕಿಂಗ್‌) ಮತ್ತು ಇಸ್ರೇಲ್‌ನ ಮಿಶ ಜಿಲ್ಬರ್‌ಮ್ಯಾನ್‌ (47ನೇ ರ್‍ಯಾಂಕಿಂಗ್‌) ಈ ಗುಂಪಿನ ಉಳಿದಿಬ್ಬರು ಸದಸ್ಯರು. “ಇದೊಂದು ಸಮ್ಮಿಶ್ರ ಡ್ರಾ. ಕಠಿನವೂ ಅಲ್ಲ, ಸುಲಭವೂ ಆಗಿಲ್ಲ’ ಎಂದಿದ್ದಾರೆ ಸಾಯಿ ಪ್ರಣೀತ್‌.
ಡಬಲ್ಸ್‌ನಲ್ಲಿ ಸೆಣಸಲಿರುವ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ “ಎ’ ವಿಭಾಗಲ್ಲಿ ಸ್ಥಾನ ಪಡೆದಿದ್ದಾರೆ. ಜು. 24ರಿಂದ ಬ್ಯಾಡ್ಮಿಂಟನ್‌ ಸ್ಪರ್ಧೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next