Advertisement

23 ವರ್ಷದ ಯೋಧ…ನಾಯಕ್ ಸುಬೇದಾರ್ ನೀರಜ್ ಚೋಪ್ರಾ

08:55 AM Aug 08, 2021 | Team Udayavani |

ಅವರು ಇಂದು ಮಾಡಿದ್ದು ಇತಿಹಾಸ. ಜಾವೆಲಿನನ್ನು ಒಂದು ನಿರ್ದಿಷ್ಟ ಕೋನದಲ್ಲಿ ತೆರೆದು 87.58 ಮೀಟರ್ ದೂರಕ್ಕೆ ಎಸೆದು  ನಿರ್ಭಾವುಕ ಆಗಿ ನಿಂತಾಗಲೆ ಚಿನ್ನದ ಸೂಚನೆ ಸಿಕ್ಕಿತ್ತು. ಇತರ ಫೈನಲಿಸ್ಟ್ ಗಳು ಆಗಿದ್ದ ಜೆಕ್ ಗಣರಾಜ್ಯದ ಇಬ್ಬರೂ ಅವರಿಗಿಂತ ಒಂದು ಮೀಟರ್ ಮತ್ತು ಎರಡು ಮೀಟರ್ ಕಡಿಮೆ ದೂರಕ್ಕೆ ಎಸೆತವನ್ನು ಮುಗಿಸಿ ಸುಸ್ತು ಹೊಡೆದಾಗ ಚಿನ್ನದ ಪದಕವು ಖಾತ್ರಿ ಆಯ್ತು!

Advertisement

ಅದೂ ಎಂತಹ ಚಿನ್ನ ಅಂತೀರಿ? 1896ರಲ್ಲಿ ಆಧುನಿಕ ಒಲಿಂಪಿಕ್ಸ್ ಆರಂಭ ಆದ ನಂತರದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಓಲಿದ ಮೊದಲ ವೈಯಕ್ತಿಕ ಚಿನ್ನ! ಅದಕ್ಕಾಗಿ ನನ್ನ  ಭಾರತವು 125 ವರ್ಷಗಳ ಕಾಲ ಕಾಯಬೇಕಾಯಿತು!

ಹಾಕಿಯಲ್ಲಿ ಭಾರತ 8 ಬಾರಿ ಚಿನ್ನವನ್ನು ಗೆದ್ದದ್ದನ್ನು ಹೊರತು ಪಡಿಸಿದರೆ ಭಾರತಕ್ಕೆ ದೊರೆತ ಕೇವಲ ಎರಡನೇ ವೈಯಕ್ತಿಕ ಚಿನ್ನ ಇದು! ಹಾಗೆ ಕೂಡ ಈ ಪದಕವು ಭಾರೀ ಪ್ರೆಶಿಯಸ್!  ಅಭಿನವ್ ಬಿಂದ್ರಾ 2008ರಲ್ಲಿ ಶೂಟಿಂಗಲ್ಲಿ ಚಿನ್ನದ ಪದಕ ಪಡೆದ ನಂತರ ಭಾರತಕ್ಕೆ ದೊರೆತ ಕೇವಲ ಎರಡನೇ ಚಿನ್ನ!

ಒಲಿಂಪಿಕ್ಸ್ ಮೈದಾನದಲ್ಲಿ ಭಾರತದ ರಾಷ್ಟ್ರಧ್ವಜವು ಎಲ್ಲಕ್ಕಿಂತ ಎತ್ತರ ನಿಂತು ಮೆರೆದ ಒಂದು ಅಪೂರ್ವ ಘಟನೆ ! ಜನ ಗಣ ಮನ ಕಿವಿದುಂಬಿದ ಹೃದಯಂಗಮ ಘಟನೆ!  ಇದಕ್ಕೆ ಕಾರಣರಾದವರು ನೀರಜ್ ಚೋಪ್ರಾ. ಒಬ್ಬ ಸೈನಿಕ ಅನ್ನುವುದು added pride. ಅವರು ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಒಂದು ಸಣ್ಣ ಗ್ರಾಮದಿಂದ  ಬಂದವರು. ಕಾಲೇಜಿನಲ್ಲಿ ಓದುತ್ತಿರುವಾಗ ಸೈನ್ಯದ ಪರೀಕ್ಷೆ ಬರೆದು ಸೈನಿಕ ಆದವರು.

ಅವರ ಬಲಿಷ್ಟ ರಟ್ಟೆಗಳನ್ನು ಗಮನಿಸಿದ ಒಬ್ಬ ಸೈನ್ಯದ ಹಿರಿಯ ಅಧಿಕಾರಿ ಶಾಟ್ಪುಟ್ ಮತ್ತು ಜಾವೇಲಿನ್ ಅಭ್ಯಾಸ ಮಾಡಲು ಹೇಳಿದ್ದೇ ಆರಂಭ. ಒಬ್ಬ ಒಳ್ಳೆಯ ಕೋಚ್ ಮೂಲಕ ಜಾವೇಲಿನ್ ಎಸೆಯಲು ಅಂದೇ ಅವರು ಆರಂಭ ಮಾಡಿದ್ದರು. ಇದು ನೀರಜ್ ಚೋಪ್ರಾ ಅವರು ಗೆದ್ದ ಮೊದಲ ಅಂತಾರಾಷ್ಟ್ರೀಯ ಪದಕ ಅಲ್ಲವೆ ಅಲ್ಲ! ಅವರು ಗೆದ್ದ 2016ರ ಸೌತ್ ಏಷಿಯನ್ ಕೂಟದ ಚಿನ್ನವು ಅವರ ಮೊದಲಿನದು. ನಂತರ ಕಾಮನ್ ವೆಲ್ತ್ ಗೇಮ್ಸ್ ಚಿನ್ನ, ಏಷಿಯನ್ ಗೇಮ್ಸ್ ಚಿನ್ನ, ಏಷಿಯನ್  ಜ್ಯೂ. ಕೂಟದ ಚಿನ್ನ, ವಿಶ್ವ ಜ್ಯೂನಿಯರ್ ಕೂಟದ ಚಿನ್ನ ಹೀಗೆ ಆರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕಗಳು ಅವರ ಶೋಕೇಸಲ್ಲಿ ಮೊದಲೇ ಇವೆ.

Advertisement

ಇನ್ನೂ  ಆಶ್ಚರ್ಯ ಎಂದರೆ ಅವರ ಜಾವೇಲಿನನ ವೈಯಕ್ತಿಕ ದಾಖಲೆ ಇದಕ್ಕಿಂತ ಇನ್ನೂ  ಉತ್ತಮವಾಗಿಯೆ ಇದೆ ( 88.07 ಮೀಟರ್)! ಒಲಿಂಪಿಕ್ಸನಲ್ಲಿ ಅವರು ಅದರ ಹತ್ತಿರ ಕೂಡ  ಬಂದಿಲ್ಲ ಅನ್ನುವುದು ವಿಶೇಷ. ಆದರೂ ಚಿನ್ನದ ಪದಕ ಮಿಸ್ ಆಗಲಿಲ್ಲ!

ಈಗಾಗಲೇ ಭಾರತ ಸರಕಾರವು ಸೈನಿಕರಿಗೆ ನೀಡುವ ವಿಶಿಷ್ಟ ಸೇವಾ ಮೆಡಲ್ ಅವರು ಗೆದ್ದಿದ್ದಾರೆ. ಹಾಗೆಯೇ ಅರ್ಜುನ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ. ಈ ವರ್ಷ ನೀಡುವ ಧ್ಯಾನ ಚಂದ್ ಖೇಲ್ ರತ್ನ ಪ್ರಶಸ್ತಿ ಕೂಡ  ಅವರಿಗೆ ಖಂಡಿತ  ದೊರೆಯಬೇಕು ಅನ್ನುವುದು ನ್ಯಾಯ!

ಅಂತವರ ಬದುಕಿನ ಕತೆಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಬಂದರೆ, ಮಕ್ಕಳು ಓದುವಂತಾದರೆ ಮುಂದೆ ಇನ್ನಷ್ಟು ಕ್ರೀಡೆಯ ಪ್ರತಿಭೆಗಳು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕಗಳನ್ನು ತರಬಹುದು. ಜೈ ಹಿಂದ್.

ರಾಜೇಂದ್ರ ಭಟ್.ಕೆ

ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು

Advertisement

Udayavani is now on Telegram. Click here to join our channel and stay updated with the latest news.

Next