ಕಳೆದ ವರ್ಷ ಕೊರೊನಾ ದಾಳಿಗೆ ದಿಢೀರನೆ ಟೋಕಿಯೊ ಒಲಿಂಪಿಕ್ಸ್ ರದ್ದಾಗಿತ್ತು. ಈ ವರ್ಷವೂ ನಡೆ ಯುತ್ತಾ, ನಡೆಯುತ್ತಾ ಎಂಬ ಪ್ರಶ್ನೆಗಳ ನಡುವೆ, ನಡೆಸಬೇಡಿ, ನಡೆಸಬೇಡಿ ಎಂಬ ಪ್ರತಿಭಟನೆಯ ಸ್ವರ ಗಳೊಂದಿಗೆ ಒಲಿಂಪಿಕ್ಸ್ ಶುರುವಾಯಿತು. ನೋಡನೋಡುತ್ತಿರು ವಂತೆಯೇ ಮುಗಿದೇ ಹೋಗಿದೆ. ಈ ಹಿನ್ನೆಲೆ ಯಲ್ಲಿ ಜು. 23ರಿಂದ ಆ.8ರ ನಡುವೆ ಟೋಕಿಯೊದಲ್ಲಿ ಏನೇನಾಯ್ತು ಎಂಬ ನೆನಪುಗಳು ಇಲ್ಲಿವೆ.
ವೇಟ್‌ಲಿಫ್ಟಿಂಗ್‌ಮೀರಾಬಾಯಿ ಬೆಳ್ಳಿ ಬೆಳಕು :
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ವರು ಮೀರಾ ಬಾಯಿ ಚಾನು. 49 ಕೆಜಿ ವಿಭಾಗ ದಲ್ಲಿ ಚಾನು, ಒಟ್ಟು 202 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು. ಚಾನು ಅವರು ಮಣಿಪುರ ರಾಜಧಾನಿ ಇಂಫಾಲಕ್ಕೆ 20 ಕಿ.ಮೀ. ದೂರವಿರುವ ನಾಂಗೊ³àಕ್ ಕಾಕಿcಂಗ್ ಎಂಬ ಹಳ್ಳಿಯವರು.
57 ಕೆಜಿ ಕುಸ್ತಿ ರವಿಕುಮಾರ್‌ಗೆ ಬೆಳ್ಳಿ :
ಬಂಗಾರ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಹರಿಯಾಣದ ರವಿಕುಮಾರ್ ದಹಿಯ 57 ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್‌ನಲ್ಲಿ ರಷ್ಯಾದ ಝಾವುರ್ ಉಗ್ವೆ ಎದುರು ಸೋತರು. ಭಾರತಕ್ಕೆ ಬೆಳ್ಳಿ ಪದಕ ಲಭಿಸಿತು. ಇದು ಒಲಿಂಪಿಕ್ಸ್ ಕುಸ್ತಿ ಇತಿಹಾಸದಲ್ಲೇ ಭಾರತಕ್ಕೊಲಿದ 2ನೇ ಬೆಳ್ಳಿ ಪದಕ. ದಹಿಯ ಹರಿಯಾಣದ ನಹ್ರಿ ಎಂಬ ಹಳ್ಳಿಯವರು.
65 ಕೆಜಿ ಕುಸ್ತಿ ಭಜರಂಗ್‌ಗೆ ಕಂಚು :
ವಿಶ್ವಶ್ರೇಷ್ಠ ಕುಸ್ತಿಪಟು ಭಜರಂಗ್ ಪುನಿಯಗೆ ಟೋಕಿಯೊದಲ್ಲಿ ಮಂಡಿನೋವು ಬಲವಾಗಿ ಕಾಡಿತು. ಟೋಕಿಯೊದಲ್ಲಿ ಚಿನ್ನವನ್ನೇ ಗೆಲ್ಲುವ ಬಲವಾದ ಭರವಸೆ ಮೂಡಿಸಿದ್ದರೂ, ಸೆಮಿಫೈನಲ್‌ನಲ್ಲಿ ಹಠಾತ್ತಾಗಿ ಸೋತರು. ಆದರೆ ಕಂಚಿನ ಪದಕದ ಹೋರಾಟದಲ್ಲಿ ಕಜಕಿಸ್ಥಾನದ ನಿಯಾಜ್ ಬೆಕೊವ್ ವಿರುದ್ಧ ಏಕಪಕ್ಷೀಯವಾಗಿ ಗೆದ್ದರು. ಅಲ್ಲಿಗೆ ಭಾರತಕ್ಕೆ ಕುಸ್ತಿಯಲ್ಲಿ ಇನ್ನೊಂದು ಪದಕ ಲಭಿಸಿತು.
ಹಾಕಿ ಪುರುಷರಿಗೆ ಐತಿಹಾಸಿಕ ಕಂಚು :
1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ ನಂತರದ ಒಲಿಂಪಿಕ್ಸ್‌ಗಳಲ್ಲಿ ಪದಕದ ಹತ್ತಿರವೂ ಸುಳಿದಿರಲಿಲ್ಲ. ಈ ಬಾರಿ ಸೆಮಿಫೈನಲ್‌ಗೇರಿದ್ದ ತಂಡ ಅಲ್ಲಿ ಸೋಲ ನುಭವಿಸಿತು. ಅನಂತರ ಕಂಚಿನ ಪದಕದ ಹೋರಾಟದಲ್ಲಿ ವಿಶ್ವದ ಬಲಿಷ್ಠ ತಂಡ ಗಳ ಲ್ಲೊಂದಾದ ಜರ್ಮನಿ ವಿರುದ್ಧ 5-4 ಗೋಲುಗಳಿಂದ ಗೆಲುವು ಸಾಧಿಸಿತು. 41 ವರ್ಷ ಗಳ ಅನಂತರ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೊಲಿದ ಪದಕವಿದೆನ್ನುವುದು ಮಹತ್ವದ ಸಂಗತಿ. ಭಾರತ ಹಾಕಿ ಪುನರುತ್ಥಾನಗೊಂಡ ಪ್ರಬಲ ಸಂದೇಶವನ್ನು ಈ ಪದಕ ಸಾರಿದೆ.
ಬ್ಯಾಡ್ಮಿಂಟನ್ ಸಿಂಧುಗೆ ಕಂಚು :
ಹಾಲಿ ವಿಶ್ವ ಚಾಂಪಿಯನ್, ರಿಯೋ ಒಲಿಂಪಿಕ್ಸ್‌ನಲ್ಲಿ ರಜತ ಗೆದ್ದಿದ್ದ ಪಿ.ವಿ.ಸಿಂಧು ಈ ಬಾರಿ ಚಿನ್ನವನ್ನೇ ಗೆಲ್ಲುತ್ತಾರೆಂಬ ನಿರೀಕ್ಷೆಯಿತ್ತು. ಆದರೆ ಅವರು ಸೆಮಿಫೈನಲ್‌ನಲ್ಲಿ ಚೀನ ತೈಪೆಯ ತೈ ಜು ಯಿಂಗ್ ವಿರುದ್ಧ ಆಘಾತಕಾರಿಯಾಗಿ ಸೋತು ಹೋದರು. ಅನಂತರ ಕಂಚಿನ ಪದಕದ ಹೋರಾಟದಲ್ಲಿ ಚೀನಾದ ಹೆ ಬಿಂಗ್ ಜಿಯಾವೊ ವಿರುದ್ಧ ಮೆರೆದರು. ಒಲಿಂಪಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಎರಡು ಪದಕ ದೇಶದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದರು.
ಬಾಕ್ಸಿಂಗ್ 69 ಕೆಜಿ ಲವ್ಲಿನಾಗೆ ಕಂಚು :
ಅಸ್ಸಾಂನ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ 69 ಕೆಜಿ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಸೋತರು. ಅಲ್ಲಿಗೆ ಕಂಚು ಖಚಿತಪಡಿಸಿಕೊಂಡರು. ಈ ಬಾರಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಏಕೈಕ ಬಾಕ್ಸಿಂಗ್ ಪದಕವನ್ನು ಗೆದ್ದು ಕೊಟ್ಟಿದ್ದು ಲವ್ಲಿನಾ. ಈ ಹಿಂದಿನ ಒಲಿಂಪಿಕ್ಸ್‌ಗಳಲ್ಲಿ ವಿಜೇಂದರ್ ಸಿಂಗ್ ಮತ್ತು ಮೇರಿ ಕೋಮ್ ಕಂಚು ಗೆದ್ದಿದ್ದರು.
ಜಾವೆಲಿನ್ ನೀರಜ್ ಎಂಬ ಪ್ರಥಮ ಬಂಗಾರ :
ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಸ್ಪರ್ಧೆಯ ಫೈನಲ್‌ನಲ್ಲಿ ನೀರಜ್ ಚೋಪ್ರಾ 87.58 ಮೀ. ದೂರದ ಎಸೆದು ಬಂಗಾರದ ಪದಕ ಗೆದ್ದರು. ಇದು ಟೋಕಿಯೊದಲ್ಲಿ ಭಾರತಕ್ಕೆ ಮೊದಲ ಪದಕ, ಹಾಗೆಯೇ ಆ್ಯತ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಚಿನ್ನದ ಪದಕವಿದು. ಭಾರತೀಯ ಸೇನೆಯ ಸುಬೇದಾರ್ ಹುದ್ದೆಯಲ್ಲಿರುವ ನೀರಜ್ ಚೋಪ್ರಾ, ಹರ್ಯಾಣದ ಪಾಣಿಪತ್ ಸಮೀಪದ ಖಾಂದ್ರಾ ಎಂಬ ಹಳ್ಳಿಯವರು.
ವಿಶ್ವ ದಾಖಲೆಗಳು :
ಚೀನಾ: 4 x 200 ಫ್ರೀಸ್ಟೈಲ್ ಈಜು :
4×200 ಮೀ. ಫ್ರೀಸ್ಟೈಲ್ ಈಜು ರಿಲೇಯಲ್ಲಿ ಚೀನ ಮಹಿಳಾ ತಂಡ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದೆ. ಝಾಂಗ್ ಯೂಫಿ, ಯಾಂಗ್ ಜಂಕ್ಷುವಾನ್, ತಾಂಗ್ ಮುಹಾನ್, ಲೀ ಬಿಂಗಿjà 7:40:33 ನಿಮಿಷದಲ್ಲಿ ಗುರಿ ಮುಟ್ಟಿದರು. ಆಸ್ಟ್ರೇಲಿಯ ಮಹಿಳಾ ತಂಡ 2019ರಲ್ಲಿ 7:41:50 ನಿಮಿಷದಲ್ಲಿ ಗುರಿಮುಟ್ಟಿದ್ದು ಹಿಂದಿನ ವಿಶ್ವದಾಖಲೆಯಾಗಿತ್ತು.
ಆಸ್ಟ್ರೇಲಿಯ: 4×100 ಫ್ರೀಸ್ಟೈಲ್ ಈಜು:
4 x 100 ಫ್ರೀಸ್ಟೈಲ್ ಈಜು ರಿಲೇಯಲ್ಲಿ ಬ್ರಾಂಟೆ ಕ್ಯಾಂಪ್‌ಬೆಲ್, ಕೇಟ್, ಎಮ್ಮಾ ಮೆಕಾನ್ ಮತ್ತು ಮೆಗ್ ಹ್ಯಾರಿಸ್ ಅವರ ಆಸ್ಟ್ರೇಲಿಯ ಮಹಿಳಾ ತಂಡ 3:29:69 ನಿಮಿಷಗಳಲ್ಲಿ ಗುರಿ ಮುಟ್ಟಿ ವಿಶ್ವದಾಖಲೆ ನಿರ್ಮಿಸಿದೆ. ಈ ಮೂಲಕ ತನ್ನದೇ ಹೆಸರಿನಲ್ಲಿದ್ದ 3:30:05 ನಿಮಿಷಗಳ ಹಿಂದಿನ ದಾಖಲೆ ಮೀರಿದೆ.
ಮೆಕ್ಲಾಫ್ಲಿನ್: 400 ಮೀ. ಹರ್ಡಲ್ಸ್ :
400 ಮೀ. ಹರ್ಡಲ್ಸ್ ಓಟದಲ್ಲಿ ಅಮೆರಿಕದ ಸಿಡ್ನಿ ಮೆಕ್ಲಾಫ್ಲಿನ್ 51.46 ಸೆಕೆಂಡ್‌ಗಳಲ್ಲಿ ಗುರಿಮುಟ್ಟುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 400 ಮೀ. ಹರ್ಡಲ್ಸ್‌ನಲ್ಲಿ ಮೆಕ್ಲಾಫ್ಲಿನ್ ತನ್ನದೇ ಹೆಸರಿ ನಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಲಾಶಾ ತಲಖಝೆ: ವೇಟ್‌ಲಿಫ್ಟಿಂಗ್ :
ಜಾರ್ಜಿಯಾದ ಲಾಶಾ ತಲಖಝೆ ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಲಾಶಾ ಒಟ್ಟು 488 ಕೆಜಿ ತೂಕ ಎತ್ತಿದ್ದಾರೆ. ಸ್ನ್ಯಾಚ್‌ನಲ್ಲಿ 223, ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 265 ಕೆಜಿ ಎತ್ತಿದ್ದಾರೆ. 109 ಕೆಜಿಗಿಂತ ಹೆಚ್ಚಿನ ತೂಕದ ಸೂಪರ್ ಹೆವಿವೇಟ್ ಪುರುಷರ ವಿಭಾಗದ ಎಲ್ಲಾ ಮೂರು ಮಾದರಿಯಲ್ಲಿ ತಮ್ಮದೇ ವಿಶ್ವ ದಾಖಲೆಗಳನ್ನು ಮುರಿದರು.
ಆನ್ ಸ್ಯಾನ್: ಬಿಲ್ಗಾರಿಕೆ :
ದಕ್ಷಿಣ ಕೊರಿಯದ ಮಿಶ್ರ ತಂಡಗಳು ಹಾಗೂ ಮಹಿಳಾ ತಂಡಗಳ ಚಿನ್ನದ ಸಾಧನೆಯಲ್ಲಿ ತಮ್ಮ ಪಾಲನ್ನೂ ನೀಡಿದ್ದ ಆನ್ ಸ್ಯಾನ್, ವೈಯಕ್ತಿಕ ಸುತ್ತಿನಲ್ಲೂ ಬಂಗಾರ ಗೆಲ್ಲುವ ಮೂಲಕ, ಬಿಲ್ಗಾರಿಕೆಯಲ್ಲಿ ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
ಡ್ರೆಸೆಲ್: 100 ಮೀ. ಬಟರ್‌ಫ್ಲೈ :
100 ಮೀ. ಪುರುಷರ ಬಟರ್‌ಫ್ಲೈನಲ್ಲಿ ನಿಗದಿತ ಗುರಿಯನ್ನು 49.45 ಸೆಕೆಂಡ್‌ಗಳಲ್ಲಿ ಈಜಿದ ಸೆಲೆಬ್, ಈ ಹಿಂದೆ ಅಮೆರಿಕದವರೇ ಆದ ಮೈಕಲ್ ಪೆಲ್ಫ್$Õ ಅವರು 2004ರ ಒಲಿಂಪಿಕ್ಸ್‌ನಲ್ಲಿ ಮಾಡಿದ್ದ ದಾಖಲೆಯನ್ನು ಮುರಿದರು.
ಟಾಟ್ಜಾನಾ : 200 ಮೀ. ಬ್ರೆಸ್ಟ್ ಸ್ಟ್ರೋಕ್ :
ದ.ಆಫ್ರಿಕಾದ ಈಜುಗಾರ್ತಿ ಟಾಟ್ಜಾನಾ ಶುಮಾಕರ್, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಈಕೆ ನಿಗದಿತ ದೂರವನ್ನು 2 ನಿಮಿಷ 18.95 ಸೆಕೆಂಡ್‌ಗಳಲ್ಲಿ ಕ್ರಮಿಸಿ, 2013ರಲ್ಲಿ ಡೆನ್ಮಾರ್ಕ್‌ನ ರಿಕ್ಕಿ ಮೊಲ್ಲೆರ್ ಎಂಬುವರು ಸೃಷ್ಟಿಸಿದ್ದ ವಿಶ್ವದಾಖಲೆಯನ್ನು (2 ನಿಮಿಷ 19.11 ಸೆಕೆಂಡ್) ಮುರಿದರು.
ಕ್ರೀಡಾಸ್ಫೂರ್ತಿ :
ಚಿನ್ನ ಹಂಚಿಕೊಂಡ ಇಟಲಿ-ಕತಾರ್ ಸ್ಪರ್ಧಿಗಳು! :
ಇಟಲಿಯ ಗಿಯಾನ್ಮಾರ್ಕೊ ತಾಂಬೆರಿ, ಕತಾರ್‌ನ ಮುತಾಝ್ ಬಾರ್ಶಿಮ್ ಹೈಜಂಪ್ ಅಂತಿಮ ಸುತ್ತಿನಲ್ಲಿ ಸಮಬಲ ಸಾಧಿಸಿದ್ದರು. ಇಬ್ಬರೂ 2.39 ಮೀಟರ್ ಎತ್ತರ ಜಿಗಿದು ತಪ್ಪೇ ಇಲ್ಲದ ಸಾಧನೆ ಮಾಡಿದ್ದರು. ಫಲಿತಾಂಶ ನಿರ್ಧರಿಸಲು ಅಧಿಕಾರಿಗಳು ಟೈಬ್ರೇಕರ್‌ಗೆ ಚಿಂತಿಸಿದರು. ಈ ಹೊತ್ತಿಗೆ ತಾಂಬೆರಿ ಗಾಯಗೊಂಡಿದ್ದರಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಈ ಹೊತ್ತಿನಲ್ಲಿ ಕ್ರೀಡಾ ಮನೋಭಾವ ಪ್ರದರ್ಶಿಸಿದ ಬಾರ್ಶಿಮ್, ತಾನೂ ಹಿಂದೆ ಸರಿಯುತ್ತೇನೆ. ಚಿನ್ನದ ಪದಕ ಹಂಚಿಕೊಡಿ ಎಂದು ಮನವಿ ಮಾಡಿದರು. ಒಲಿಂಪಿಕ್ಸ್ ಇತಿಹಾಸದಲ್ಲಿ 109 ವರ್ಷಗಳ ಅನಂತರ ಹೀಗೆ ಪದಕವನ್ನು ಹಂಚಲಾಯಿತು.
40ನೇ ವರ್ಷದಲ್ಲಿ ಚಿನ್ನ ಗೆದ್ದ ಸಾಂಡ್ರಾ :
ಸ್ಪೇನ್ ದೇಶದ 40 ವರ್ಷದ ಕರಾಟೆಪಟು ಸ್ಪೇನಿನ ಸಾಂಡ್ರಾ ಸ್ಯಾಂಚೆಜ್ ಟೋಕಿಯೊದಲ್ಲಿ ಚಿನ್ನ ಗೆದ್ದರು. ಅಂತಿಮಪಂದ್ಯದಲ್ಲಿ ಸಾಂಡ್ರಾ 28.06 ಅಂಕಗಳನ್ನು ಗಳಿಸಿ ಜಪಾನ್‌ನ ಕಿಯೌ ಶಿಮಿಝು ವಿರುದ್ಧ ಜಯಗಳಿಸಿದರು. ವಿಶೇಷವೆಂದರೆ ಸಾಂಡ್ರಾ ಸ್ಯಾಂಚೆಜ್‌ಗೆ ಆಕೆಯ ಪತಿಯೇ ಕೋಚ್!
ಹೊಂಗನಸಿಗೆ ನಾಂದಿ ಹಾಡಿದವರು :
ಸೋತರೂ ಮೆರೆದ ಮಹಿಳಾ ಹಾಕಿ ತಂಡ:
ತನ್ನ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡ ಸೆಮಿಫೈನಲ್ ತಲುಪಿತ್ತು. ಅಲ್ಲಿ ಅರ್ಜೆಂಟೀನಾ ವಿರುದ್ಧ ಸೋತು ಹೋಗಿತ್ತು. ಅನಂತರ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ಕಾದಾಡಿದ ಭಾರತೀಯ ವನಿತೆಯರು ಅಮೋಘ ಹೋರಾಟ ಸಂಘಟಿಸಿದರು. ಆದರೂ 3-4 ಗೋಲುಗಳಿಂದ ಸೋಲನುಭವಿಸಿದರು. ಇಲ್ಲಿ ಸೋತರೂ ಹೋರಾಡಿದ ರೀತಿ, ಭವಿಷ್ಯದ ಭರವಸೆಯನ್ನು ಮೂಡಿಸಿದೆ. ಅಂದಹಾಗೆ ಭಾರತ ಮಹಿಳಾ ತಂಡ ಒಲಿಂಪಿಕ್ಸ್ ನಲ್ಲಿ ಆಡಿದ್ದು ಇದು ಕೇವಲ ಮೂರನೇ ಬಾರಿ.
ಶ್ರೀಜೇಶ್, ಹಾಕಿ ಗೋಲ್‌ಕೀಪರ್ :
ಭಾರತೀಯ ಪುರುಷರ ಹಾಕಿ ತಂಡದ ಗೋಲ್‌ಕೀಪರ್ ಆಗಿರುವ ಶ್ರೀಜೇಶ್, ತಂಡದ ಹಿರಿಯ ಆಟಗಾರರಲ್ಲೊಬ್ಬರು. ಮೂಲತಃ ಕೇರಳದ ಎರ್ನಾಕುಳಂನವರು. 2004ರಲ್ಲಿ ರಾಷ್ಟ್ರೀಯ ಕಿರಿಯರ ತಂಡಕ್ಕೆ ಆಯ್ಕೆಯಾಗಿ ಅಲ್ಲಿಂದ ಹಿರಿಯರ ತಂಡಕ್ಕೆ ಕಾಲಿಟ್ಟ ಇವರು 2006ರಲ್ಲಿ ಹಿರಿಯರ ತಂಡಕ್ಕೆ ನಾಯಕನಾಗಿದ್ದರು. ರಿಯೋದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಕ್ವಾರ್ಟರ್ ಫೈನಲ್‌ವರೆಗೆ ನಾಯಕರಾಗಿ ಮುನ್ನಡೆಸಿದ್ದರು. ಈ ಬಾರಿಯಂತೂ ಅವರ ಗೋಲ್‌ಕೀಪಿಂಗ್ ಕೌಶಲವೇ ಭಾರತಕ್ಕೆ ವರವಾಯಿತು.
ಡಿಸ್ಕಸ್‌ನಲ್ಲಿ ಕಮಲ್‌ಪ್ರೀತ್‌ಗೆ 6ನೇ ಸ್ಥಾನ :
ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಪದಕದ ಭರವಸೆ ಮೂಡಿಸಿದ್ದ ಕಮಲ್‌ಪ್ರೀತ್ ಕೌರ್, ಟೋಕಿಯೊದಲ್ಲಿ 6ನೇ ಸ್ಥಾನ ಪಡೆದಿದ್ದಾರೆ. 63.70 ಮೀ.ಡಿಸ್ಕ್ ಎಸೆದರೂ, ಪದಕ ದಕ್ಕಲಿಲ್ಲ. ಆದರೂ ಅವರು ಪಡೆದ 6ನೇ ಸ್ಥಾನ ಬಹಳ ದೊಡ್ಡ ಸಾಧನೆಯೇ ಹೌದು.
ರಾಣಿ ರಾಂಪಾಲ್, ಮಹಿಳಾ ಹಾಕಿ ನಾಯಕಿ :
2010ರ ಹಾಕಿ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದ ಹಿರಿಯ ತಂಡದಲ್ಲಿ ಇದ್ದ ಈಕೆಗೆ ಆಗಿನ್ನೂ 15 ವರ್ಷ ವಯಸ್ಸು! ಅವರು ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡಿದ್ದೇ ಇಲ್ಲ. ಇಂದು ಮಹಿಳಾ ಹಾಕಿ ತಂಡದ ನಾಯಕಿಯಾಗಿ ಈ ಬಾರಿ ಭಾರತವನ್ನು ಸೆಮಿಫೈನಲ್‌ಗೆ ಮುನ್ನಡೆಸಿ ಐತಿಹಾಸಿಕ ಸಾಧನೆಗೆ ಕಾರಣವಾಗಿದ್ದಾರೆ.
ಮಹಿಳಾ ಗಾಲ್ಫ್: ಅದಿತಿ ಅದ್ಭುತ :
ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಗಾಲ್ಫ್ನಲ್ಲಿ ಕರ್ನಾಟಕದ ಅದಿತಿ ಅಶೋಕ್ ಅದ್ಭುತ ಆರಂಭ ಮಾಡಿ ಕೊನೆ ಕ್ಷಣದಲ್ಲಿ ಎಡವಿದರು. ಸಣ್ಣ ಅಂತರದಲ್ಲಿ ಪದಕ ತಪ್ಪಿಸಿಕೊಂಡರೂ, ನಾಲ್ಕನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆಯನ್ನೇ ಮಾಡಿದ್ದಾರೆ.
ಈ ಬಾರಿಯ ಮೊದಲುಗಳು: ಹೊಸ ಕ್ರೀಡೆಗಳು :
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನಾಲ್ಕು ಹೊಸ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿತ್ತು. ಅವು – ಸ್ಕೇಟ್ ಬೋರ್ಡಿಂಗ್, ಸರ್ಫಿಂಗ್, ನ್ಪೋರ್ಟ್ಸ್ ಕ್ಲೈಂಬಿಂಗ್, ಕರಾಟೆ. ಇದಲ್ಲದೆ, ಸಾಫ್ಟ್ ಬಾಲ್ ಹಾಗೂ ಬೇಸ್‌ಬಾಲ್ ಕ್ರೀಡೆಗಳು 13 ವರ್ಷಗಳ ಅನಂತರ ಒಲಿಂಪಿಕ್ಸ್‌ಗೆ ಮರು ಪ್ರವೇಶ ಪಡೆದವು.
ತೃತೀಯಲಿಂಗಿಗಳಿಗೆ ಪ್ರವೇಶ :
ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಅವಕಾಶ ಕೊಟ್ಟ ಒಲಿಂಪಿಕ್ಸ್ ಇದಾಗಿತ್ತು. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಗೆ ಒತ್ತು ನೀಡಲಾಗಿತ್ತು. ಹಾಗಿದ್ದರೂ, 2016ರಲ್ಲಿ ಯಾವ ತೃತೀಯ ಲಿಂಗಿ ಕ್ರೀಡಾಳುವೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿ, ಕೆನಡಾದ ಫುಟ್‌ಬಾಲ್ ಆಟಗಾರ್ತಿ ಕ್ವಿನ್, ಅಮೆರಿಕದ ಸ್ಕೇಟ್ ಬೋರ್ಡ್ ಆಟಗಾರ್ತಿ ಅಲಾನಾ ಸ್ಮಿತ್ ಅವರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು. ಕೆನಡಾದ ಕ್ವಿನ್ ಬಂಗಾರ ಗೆದ್ದು, ಈ ಸಾಧನೆ ಮಾಡಿದ ಮೊದಲ ತೃತೀಯ ಲಿಂಗಿ ಎನಿಸಿಕೊಂಡರು.
ಮರೆಯಲಾಗದ್ದು: ಏಳು ಪದಕ ಗೆದ್ದ ಎಮ್ಮಾ :
ಒಲಿಂಪಿಕ್ಸ್ ವೊಂದರಲ್ಲಿ ಏಳು ಪದಕ ಗೆದ್ದ 2ನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಆಸ್ಟ್ರೇಲಿಯಾದ ಈಜುಪಟು ಎಮ್ಮಾ ಮೆಕಾನ್ ಅವರದ್ದು. ಈ 7 ಪದಕದಲ್ಲಿ ನಾಲ್ಕು ಚಿನ್ನದ ಪದಕಗಳಿರುವುದು ವಿಶೇಷ. ಹಾಗೆಯೇ ಮೂರು ಕಂಚಿನ ಪದಕಗಳನ್ನು ಕೂಡ ಮೆಕಾನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಮರಿಯ ಗೊರೊಖೊಸ್ಕಯಾ ಏಳು ಪದಕಗಳನ್ನು ಜಯಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್ ನ ಪುರುಷರ ವಿಭಾಗದಲ್ಲಿ ಮೈಕೆಲ್ ಫೆಲ್ಪ್ಸ್ ಒಟ್ಟು 8 ಪದಕಗಳನ್ನು ಚಿನ್ನ ಗೆದ್ದಿದ್ದರು.