ನವದೆಹಲಿ: ಟೋಕ್ಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತೀಯ ಹಾಕಿ ತಂಡದ ತಾರೆಗಳಾದ ಡ್ರ್ಯಾಗ್‌ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಮತ್ತು ಡಿಫೆಂಡರ್ ಬೀರೇಂದ್ರ ಲಾಕ್ರಾ ಗುರುವಾರ ಅಂತಾರಾಷ್ಟ್ರೀಯ ಹಾಕಿಗೆ ಬೆನ್ನು ಬೆನ್ನಿಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಯುವಕರಿಗೆ ಅವಕಾಶ ಸಿಗಬೇಕೆನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂಬುದಾಗಿ ರೂಪಿಂದರ್ ಹೇಳಿದ್ದಾರೆ.
ರೂಪಿಂದರ್ ವಿದಾಯ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಬೀರೇಂದ್ರ ಲಾಕ್ರಾ ಕೂಡ ಹಾಕಿಗೆ ವಿದಾಯ ಹೇಳಿದರು. 31 ವರ್ಷದ ಲಾಕ್ರಾ ಭಾರತದ ಪರ 201 ಪಂದ್ಯಗಳನ್ನಾಡಿದ್ದಾರೆ. 2014ರ ಬಂಗಾರ ವಿಜೇತ ಹಾಗೂ 2018ರ ಕಂಚು ವಿಜೇತ ಏಷ್ಯಾಡ್ ಹಾಕಿ ತಂಡದ ಸದಸ್ಯನೆಂಬುದು ಲಾಕ್ರಾ ಹೆಗ್ಗಳಿಕೆ
13 ವರ್ಷದ ಪಯಣ…: ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ರೂಪಿಂದರ್ ಪಾಲ್, ನಾನು ಭಾರತೀಯ ಹಾಕಿ ತಂಡದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಕಳೆದ ಎರಡು ತಿಂಗಳುಗಳು ನಿಸ್ಸಂದೇಹವಾಗಿ ನನ್ನ ಜೀವನದ ಅತ್ಯುತ್ತಮ ದಿನಗಳಾಗಿದ್ದವು. ಟೋಕ್ಯೊದಲ್ಲಿ ಪೋಡಿಯಂ ಮೇಲೆ ನಿಂತದ್ದು ಅವಿಸ್ಮರಣೀಯ ಅನುಭವ. ಯುವ ಮತ್ತು ಪ್ರತಿಭಾವಂತ ಆಟಗಾರರಿಗೆ ತಂಡದದಲ್ಲಿ ಅವಕಾಶ ನೀಡಲು ಇದೀಗ ಸಮಯ ಬಂದಿದೆ. ನಾನು ಈ 13 ವರ್ಷಗಳಲ್ಲಿ ಭಾರತೀಯ ತಂಡ ಪ್ರತಿನಿಧಿಸಿ ಅನುಭವಿಸಿದ ಖುಷಿ ಉಳಿದ ಆಟಗಾರರಿಗೂ ಸಿಗಲಿ. ಅದಕ್ಕೆ ದಾರಿ ಬಿಟ್ಟುಕೊಡುತ್ತಿದ್ದೇನೆ’ ಎಂದಿದ್ದಾರೆ.
ಕನಸು ನನಸಾದ ದಿನ: ಒಲಿಂಪಿಕ್ಸ್ ಪದಕ ಗೆಲ್ಲುವ ಬಹುದೊಡ್ಡ ಕನಸು ನನಸಾಗಿದೆ. ಹೀಗಾಗಿ ನಾನು ಸಂತೋಷದಿಂದ ತಂಡವನ್ನು ತೊರೆಯುತ್ತಿದ್ದೇನೆ. ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಆಡಿದ ನೆನಪು ನನ್ನ ಜತೆಯಲ್ಲಿದೆ. 223 ಪಂದ್ಯಗಳಲ್ಲಿ ಭಾರತದ ಜೆರ್ಸಿಯನ್ನು ಧರಿಸಿದ ಹೆಮ್ಮೆ ನನ್ನ ಪಾಲಿಗಿದೆ. ಭವಿಷ್ಯದ ಆಟಗಾರರು ದೊಡ್ಡ ಶಕ್ತಿಯಾಗಿ ಭಾರತಕ್ಕೆ ಮತ್ತಷ್ಟು ಪದಕಗಳನ್ನು ಗೆದ್ದು ಕೊಡುವ, ಭಾರತೀಯ ಹಾಕಿಯನ್ನು ಎತ್ತರಕ್ಕೆ ಕೊಂಡೊಯ್ಯವ ವಿಶ್ವಾಸವಿದೆ’ ಎಂದೂ ರೂಪಿಂದರ್ ಹೇಳಿದರು.