Advertisement

ಕೋವಿಡ್ 19: ಒಲಿಂಪಿಕ್ಸ್‌ ಮುಂದೂಡಿಕೆ, ಪರಿಸ್ಥಿತಿ ವಿಷಮ ; ಜಪಾನ್‌ ಪರಿಸ್ಥಿತಿ ನಿಜಕ್ಕೂ ಘೋರ

09:49 AM Mar 28, 2020 | Hari Prasad |

ಟೋಕಿಯೊ: ಹೆಚ್ಚು ಕಡಿಮೆ ಎರಡು ತಿಂಗಳ ಲೆಕ್ಕಾಚಾರದ ಅನಂತರ ಜು.24ರಿಂದ ಆ.9ರ ವರೆಗೆ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್‌ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಜಾಗತಿಕವಾಗಿ ಹೆಚ್ಚಿದ ತೀವ್ರ ಒತ್ತಡದ ಅನಂತರ ಐಒಸಿ ಮತ್ತು ಜಪಾನ್‌ ಸರಕಾರ ಈ ನಿರ್ಧಾರಕ್ಕೆ ಬಂದಿವೆ. ಈ ನಿರ್ಧಾರದಿಂದ ಜಪಾನ್‌ ಪರಿಸ್ಥಿತಿ ಅಯೋಮಯವಾಗಿದೆ. ಅದರಲ್ಲೂ ಪ್ರಧಾನಿ ಶಿಂಜೊ ಅಬೆ ಭಾರೀ ಒತ್ತಡ ಅನುಭವಿಸುತ್ತಿದ್ದಾರೆ.

Advertisement

ಕೋವಿಡ್ 19 ಕಾರಣಕ್ಕೆ ಉಂಟಾಗಿರುವ ಹಲವಾರು ಸವಾಲನ್ನು ನಿಭಾಯಿಸುವುದರ ಜತೆಗೆ, ಆರ್ಥಿಕ ಕುಸಿತ, ರಾಜಕೀಯ ಪ್ರತಿರೋಧಗಳಿಗೂ ಉತ್ತರ ನೀಡಬೇಕಿದೆ. ಈಗಾಗಲೇ ಟಿಕೆಟ್‌ ಕೊಂಡಿರುವ ಅಭಿಮಾನಿಗಳಿಗೆ ಪರಿಹಾರ ಏನು ಎನ್ನುವುದನ್ನು ನಿರ್ಧರಿಸಬೇಕು. ಒಟ್ಟಿನಲ್ಲಿ ಜಪಾನ್‌ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ.

ಹೆಚ್ಚುವರಿ ನಷ್ಟ ಅಗಾಧ
ಈಗಾಗಲೇ ಒಟ್ಟು 93 ಸಾವಿರ ಕೋಟಿ ರೂ.ಗಳನ್ನು ಜಪಾನ್‌ ಹೂಡಿಕೆ ಮಾಡಿದೆ. ಇದಲ್ಲದೇ ಇನ್ನೂ ಸಾವಿರಾರು ಕೋಟಿ ರೂ.ಗಳನ್ನು ಜಪಾನಿನ ರಸ್ತೆ, ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿ ಮೇಲೆ ಹೂಡಿಕೆ ಮಾಡಿದೆ. ಈಗ ಕೂಟ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಅಲ್ಲಿಗೆ ಜಪಾನ್‌ ಸರಕಾರದ ಮೇಲೆ ಕೂಟ ನಡೆಸಲಿಕ್ಕಾಗಿಯೇ ಹೆಚ್ಚುವರಿ 20,371 ಕೋಟಿ ರೂ. ನೀಡಬೇಕಾದ ಅನಿವಾರ್ಯತೆಯಿದೆ, ಇದು ಖಾಸಗಿ ಸಂಸ್ಥೆಗಳ ಅಂದಾಜು. ಇನ್ನು ದೇಶದ ಆರ್ಥಿಕತೆ ಮೇಲೆಯೂ 14,926 ಕೋಟಿ ರೂ. ನಷ್ಟದ ಹೊರೆ ಬೀಳಲಿದೆ. ಮುಂದಿನ ವರ್ಷದವರೆಗೆ ಬರೀ 45 ಮೈದಾನ ನಿರ್ವಹಣೆ ಮಾಡಲಿಕ್ಕಾಗಿಯೇ 1507 ಕೋಟಿ ರೂ. ಖರ್ಚು ತಗುಲುತ್ತದೆ.

ಮುಂದಿನ ಕೂಟ ಯಾವಾಗ?
ಕೂಟ ಮುಂದೂಡಲ್ಪಟ್ಟ ಅನಂತರ ಉದ್ಭವಿಸಿರುವ ಪ್ರಶ್ನೆ, ಮುಂದಿನ ಕೂಟ ಯಾವಾಗ ಎನ್ನುವುದು. ಇದಕ್ಕೆ ಕೂಡಲೇ ಉತ್ತರ ಕಂಡುಕೊಳ್ಳಬೇಕಿದೆ. ಆದರೆ ಇದು ಅಷ್ಟು ಸುಲಭವಿಲ್ಲ. ವೈರಸ್‌ ಹಾವಳಿ ಯಾವಾಗ ಮುಗಿಯುತ್ತದೆ ಎನ್ನುವುದು ಯಾರಿಗೆ ಗೊತ್ತು? ಈ ವರ್ಷಾಂತ್ಯಕ್ಕೆ ಹಿಡಿತಕ್ಕೆ ಬಂದರೆ ಸರಿ. ಇಲ್ಲವಾದರೆ ಮತ್ತೆ ಮುಂದಿನ ವರ್ಷವೂ ಕೂಟ ಅತಂತ್ರಕ್ಕೆ ಸಿಲುಕುತ್ತದೆ. ಆಗ ಜಪಾನ್‌ ಪರಿಸ್ಥಿತಿ ಘೋರವಾಗುತ್ತದೆ. ಅದಕ್ಕಾಗುವ ನಷ್ಟ, ಅವಮಾನ, ಊಹಿಸಿಕೊಳ್ಳಲೂ ಕಷ್ಟ.

ಕೂಟ ಮತ್ತೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ನೀಡಿ ಎಂದು ವಿಶ್ವಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ, ಆ್ಯತ್ಲೀಟ್‌ಗಳು ನಿರೀಕ್ಷೆಯಿಂದ ನೋಡುತ್ತಿದ್ದಾರೆ. ಪ್ರಾಯೋಜಕರು, ಹೊಟೇಲ್‌ ಮಾಲಕರು, ಕ್ರೀಡಾ ಗ್ರಾಮವನ್ನು ಅಪಾರ್ಟ್‌ಮೆಂಟ್‌ಗಳನ್ನಾಗಿ ಬದಲಾಯಿಸುವ ಹೊಣೆ ಹೊತ್ತಿರುವ ಸಂಸ್ಥೆ ಎಲ್ಲರಿಗೂ ಈ ಪ್ರಶ್ನೆಗೆ ಉತ್ತರ ಬೇಕಿದೆ.

Advertisement

ಟಿಕೆಟ್‌ ಏನು ಮಾಡುವುದು?
15 ದಿನಗಳ ಒಲಿಂಪಿಕ್ಸ್‌ಗಾಗಿ 70 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿತ್ತು. 10 ಡಾಲರ್‌ನಿಂದ ಹಿಡಿದು ಸಾವಿರ ಡಾಲರ್‌ವರೆಗೆ ಇರುವ ಮೌಲ್ಯದ ಟಿಕೆಟ್‌ ಖರೀದಿ ಮಾಡಿ ಕೂಟಕ್ಕಾಗಿ ಜನ ಕಾಯುತ್ತಿದ್ದರು. ಮುಂದಿನ ವರ್ಷ ಅದೇ ಟಿಕೆಟ್‌ ಬಳಸಬಹುದೆಂದು ಅಮೆರಿಕದಲ್ಲಿ ಟಿಕೆಟ್‌ ಮಾರಾಟ ಮಾಡಿರುವ ಕ್ಯೂನ್ಪೋರ್ಟ್ಸ್ ಹೇಳಿದೆ. ಆದರೆ ಆ ಹೊತ್ತಿಗೆ ಜನರಿಗೆ ಒಲಿಂಪಿಕ್ಸ್‌ಗೆ ತೆರಳಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಖಚಿತತೆಯೇನು? ಇದು ಬಹಳ ದೊಡ್ಡ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next