Advertisement

ತಿಮ್ಮಪ್ಪನ ದರ್ಶನಕ್ಕೆ ಟೋಕನ್‌! ಕೊರೊನಾಕ್ಕೆ ಹೆದರಿ ಟಿಟಿಡಿಯಿಂದ ಹೊಸ ವ್ಯವಸ್ಥೆ

12:08 AM Mar 21, 2020 | sudhir |

ಹೊಸದಿಲ್ಲಿ: ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಧರ್ಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನಿಗದಿತ ಸಮಯದಲ್ಲಿ ಮಾತ್ರ ದೇವರ ದರ್ಶನ ಮಾಡುವ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜತೆಗೆ ನಿಗದಿತ ಸಮಯಕ್ಕೆ ದೇಗುಲಕ್ಕೆ ಬಾರದ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿರಲೂ ತೀರ್ಮಾನಿಸಲಾಗಿದೆ.

Advertisement

ಜನಸಂದಣಿಯಿಂದಾಗಿ ಕೊರೊನಾ ಹರಡುವ ಭೀತಿ ಇರುವುದರಿಂದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ (ಟಿಟಿಡಿ) ಈ ನಿರ್ಧಾರ ಕೈಗೊಂಡಿದೆ. 1,700 ವರ್ಷಗಳ ದೇಗುಲದ ಇತಿಹಾಸದಲ್ಲೇ ಇಂಥದ್ದೊಂದು ಕಟ್ಟುನಿಟ್ಟಾದ ವ್ಯವಸ್ಥೆ ಜಾರಿ ಇದೇ ಮೊದಲು.

ಹೇಗಿರುತ್ತದೆ ಹೊಸ ವ್ಯವಸ್ಥೆ?
ಈವರೆಗೆ ದೇವರ ಧರ್ಮ ದರುಶನಕ್ಕೆ ಬರುವ ಭಕ್ತರನ್ನು ದೇಗುಲದ ಹತ್ತಿರದಲ್ಲೇ ಇರುವ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ಗಳ ಕಂಪಾರ್ಟ್‌ಮೆಂಟ್‌ಗಳಲ್ಲಿ ಕೂರಿಸುವ ಬದಲು ಅವರಿಗೆ ಟೋಕನ್‌ ನೀಡಲಾಗುತ್ತದೆ. ಅದರಲ್ಲಿ ಯಾವ ಸಮಯದಲ್ಲಿ ದೇಗುಲಕ್ಕೆ ಬರಬೇಕೆಂದು ನಮೂದಿಸಿರಲಾಗುತ್ತದೆ. ಈ ಮೂಲಕ ದೇಗುಲದಲ್ಲಿ ದಿನದ ಯಾವುದೇ ಘಳಿಗೆಯಲ್ಲಿ ಅಂದಾಜು 4,000ದಷ್ಟು ಜನರು ಮಾತ್ರವೇ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಟಿಟಿಡಿಯ ಆಡಳಿತಾಧಿಕಾರಿ ಅನಿಲ್‌ ಕುಮಾರ್‌ ಸಿಂಘಲ್‌ ತಿಳಿಸಿದ್ದಾರೆ.

ತಿರುಮಲ ಬೆಟ್ಟದ ತಪ್ಪಲಿನಲ್ಲಿರುವ ತಿರುಪತಿ ಮತ್ತು ತಿರುಮಲದಲ್ಲಿ ತೆರೆಯಲಾಗಿರುವ ವಿಶೇಷ ಕೇಂದ್ರಗಳಲ್ಲಿ ಈ ಟೋಕನ್‌ಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಲ್ಯಾಣ ಕಾರ್ಯಕ್ರಮಕ್ಕೆ ನಿರ್ಬಂಧ
ದೇಗುಲದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತಿದ್ದ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವಕ್ಕೆ ಈ ಬಾರಿ ನಿರ್ಬಂಧ ವಿಧಿಸಲಾಗಿದೆ. ಎ.7ರಂದು ಈ ಕಲ್ಯಾಣೋತ್ಸವ ನಡೆಯಲಿದ್ದು, ಈ ಬಾರಿ ದೇಗುಲದ ಪೂಜಾರಿಗಳು ಮಾತ್ರ ಭಾಗಿಯಾಗಲಿದ್ದಾರೆ. ಈ ಕಲ್ಯಾಣೋತ್ಸವದಲ್ಲಿ ಪ್ರತಿ ಬಾರಿ 6-7 ಲಕ್ಷ ಮಂದಿ ಭಾಗಿಯಾಗುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next