Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಪೊಲೀಸ್ ಠಾಣೆಗಳಿಗೆ ಹತ್ತಾರು ಮಂದಿ ಭೇಟಿ ತಮ್ಮ ಸಮಸ್ಯೆ ಪರಿಹರಿಸುವಂತೆ ಅರ್ಜಿ ಅಥವಾ ಪ್ರಕರಣ ದಾಖಲಿಸುತ್ತಾರೆ. ಈ ವೇಳೆ ನಿಯಮದ ಪ್ರಕಾರ ಸ್ವೀಕೃತಿ ರಸೀದಿ ನೀಡಲಾಗುತ್ತದೆ. ಅದರೊಂದಿಗೆ ಇನ್ಮುಂದೆ ಟೋಕನ್ ಕೂಡಲು ನಿರ್ಧರಿಸಲಾಗಿದೆ.
Related Articles
Advertisement
ಮಾದರಿ ಜನಸ್ನೇಹಿ ಪೊಲೀಸ್ ಠಾಣೆ: ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿರುವ ಭಾವನೆಯನ್ನು ತೆಗೆದುಹಾಕಲು ನಗರದಲ್ಲಿ “ಮಾದರಿ ಜನಸ್ನೇಹಿ ಪೊಲೀಸ್ ಠಾಣೆ’ ಆಯ್ಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಠಾಣೆಗೆ ಬರುವಾಗ ಭಯದಿಂದ ಬರುತ್ತಾರೆ. ಹೀಗಾಗಿ ಮಾದರಿ ಪೊಲೀಸ್ ಠಾಣೆ ಹಾಗೂ ಆವರಣವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುತ್ತದೆ.
ಸಣ್ಣ ಉದ್ಯಾನವನ ಮತ್ತು ಮಕ್ಕಳ ಆಟಿಕೆ ಅಳವಡಿಸುವುದು ಸೇರಿ ಶಾಂತಿಯುತ ವಾತಾವರಣ ಸೃಷ್ಟಿಸಲಾಗುತ್ತದೆ. ಸದ್ಯ ಆಗ್ನೇಯ ವಿಭಾಗದಲ್ಲಿ ಕೋರಮಂಗಲ ಪೊಲೀಸ್ ಠಾಣೆ ಆಯ್ಕೆ ಮಾಡಲಾಗಿದ್ದು, ಇನ್ನುಳಿದ ವಿಭಾಗಗಳಲ್ಲಿ ಶೀಘ್ರದಲ್ಲಿ ಆಯ್ಕೆ ಮಾಡಲಾಗುವುದು ಎಂದು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಹೇಳಿದರು.
ನೊಂದವರ ದಿನಾಚರಣೆ: ಅತ್ಯಾಚಾರ, ಪೋಕ್ಸೋ ಹಾಗೂ ಕೊಲೆಗೀಡಾದ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ನೊಂದವರ ದಿನಾಚರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ, ಇತ್ತೀಚೆಗೆ ಪ್ರಕರಣಗಳ ಸಾಕ್ಷ್ಯಗಳ ಮೇಲೆ ಆರೋಪಿಗಳು ಹೆಚ್ಚು ಪ್ರಭಾವ ಬೀರುತ್ತಿದ್ದಾರೆ. ಅಂತಹವರಿಗೆ ಸೂಕ್ತ ಭದ್ರತೆ ಹಾಗೂ ಅವರ ಮನೆಗಳ ಬಳಿ ಹೆಚ್ಚಾಗಿ ಬೀಟ್ ವ್ಯವಸ್ಥೆ ಹಾಗೂ ಗಸ್ತು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಬೀಟ್ ಸಿಬ್ಬಂದಿ: ಸರಗಳ್ಳತನ ಸೇರಿ ಇತರೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಬೀಟ್ ವ್ಯವಸ್ಥೆ ಗಟ್ಟಿಯಾಗಬೇಕು. ಪ್ರತಿ ಠಾಣಾ ವ್ಯಾಪ್ತಿಯಲ್ಲಿರುವ ಬೀಟ್ ಸಿಬ್ಬಂದಿಗೆ ಪ್ರತಿ ತಿಂಗಳು ಬೇರೆ ಬೇರೆ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗುತ್ತಿದ್ದು, ಸಿಬ್ಬಂದಿಗೆ ನಿರ್ದಿಷ್ಟ ಪ್ರದೇಶದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಬ್ಬ ಸಿಬ್ಬಂದಿಗೆ ಸೂಚಿಸಿದ ಪ್ರದೇಶವನ್ನು ಆತ ಬೇರೆ ಠಾಣೆಗೆ ವರ್ಗಾವಣೆ ಆಗುವವರೆಗೂ ಬದಲಾವಣೆ ಮಾಡುವಂತಿಲ್ಲ. ಇದರಿಂದ ಸಿಬ್ಬಂದಿ ತನ್ನ ಪ್ರದೇಶದಲ್ಲಿರುವ ರೌಡಿಗಳು, ಅಪರಾಧ ಹಿನ್ನೆಲೆಯುಳ್ಳವರು ಸೇರಿ ಎಲ್ಲರ ಮಾಹಿತಿ ಪಡೆದುಕೊಳ್ಳಲು ಸಹಾಯ ಆಗುತ್ತದೆ ಎಂದು ಹೇಳಿದರು.
ಸಾರ್ವಜನಿಕರ ಸಮಸ್ಯೆ ಆಲಿಸಿ: ನಗರ ಪೊಲೀಸ್ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು ಸಾರ್ವಜನಿಕ ಭೇಟಿಗೆ ಸಮಯ ನಿಗದಿಪಡಿಸಿಕೊಂಡಂತೆ ಠಾಣಾಧಿಕಾರಿಗಳು ಸಹ ಸಾರ್ವಜನಿಕರ ಸಮಸ್ಯೆ ಆಲಿಸಲು ಸೂಚಿಸಲಾಗಿದೆ. ತುರ್ತು ಸಂದರ್ಭ ಹೊರತು ಪಡಿಸಿ ಪ್ರತಿ ನಿತ್ಯ ಸಂಜೆ 4.30ರಿಂದ 6 ಗಂಟೆವರೆಗೆ ಠಾಣಾಧಿಕಾರಿ ಠಾಣೆಯಲ್ಲೇ ಇದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಸಾಧ್ಯವಾದರೆ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿದೆ ಎಂದರು
ಹೆಲ್ಮೆಟ್ ಧರಿಸಿ ಪ್ರಯಾಣಿಸಿ: ಸರ್ಕಾರದ ಸೂಚನೆ ಮೇರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಹೆಚ್ಚುವರಿ ದಂಡ ಸಂಗ್ರಹಿಸಲಾಗುತ್ತಿದೆ. ಆದರೆ, ವಾಹನ ಸವಾರರಿಂದ ದಂಡ ಸಂಗ್ರಹಿಸುವುದಷ್ಟೇ ನಮ್ಮ ಕೆಲಸ ಅಲ್ಲ. ಸಂಚಾರ ನಿಯಮದ ಬಗ್ಗೆ ಅರಿವು ಕಾರ್ಯಕ್ರಮ ಸಹ ಮಾಡಲಾಗುತ್ತಿದೆ.ವಾಹನ ಸವಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಸಾರ್ವಜನಿಕರು ಸಹ ಸಂಚಾರ ನಿಯಮ ಪಾಲನೆ ಮಾಡಿ, ಪೊಲೀಸರಿಗೆ ಸಹಕಾರ ನೀಡಬೇಕು. ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಪ್ರಯಾಣಿಸಬೇಕು ಎಂದು ಅಲೋಕ್ ಕುಮಾರ್ ಮನವಿ ಮಾಡಿದರು.
ನಿರ್ಲಕ್ಷ್ಯವಹಿಸಿದವರ ವಿರುದ್ಧ ಕ್ರಮ: ಭದ್ರತಾ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ, ಲೋಹಪರಿಶೋಧಕ ಯಂತ್ರ ಸೇರಿ ಕೆಲ ಭದ್ರತಾ ಉಪಕರಣಗಳನ್ನು ಅಳವಡಿಸಿಕೊಳ್ಳದೆ ನಿರ್ಲಕ್ಷ್ಯವಹಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಧಾರ್ಮಿಕ ಕೇಂದ್ರಗಳಾದ ಮಸೀದಿ, ಚರ್ಚ್ ಹಾಗೂ ದೇವಸ್ಥಾನ ಮತ್ತು ಮಾಲ್, ಬಸ್‌ನಿಲ್ದಾಣ ಸೇರಿ ಮುಂತಾದ ಜನನಿಬೀಡ ಸ್ಥಳಗಳ ಅಕ್ಕ-ಪಕ್ಕ ಸಿಸಿಕ್ಯಾಮರಾ ಅಳವಡಿಸುವಂತೆ ಸೂಚಿಸಲಾಗಿತ್ತು.
ಆದರೆ, ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಜೂನ್ 7 ಅಥವಾ 10ರವರೆಗೆ ಕಾಲವಕಾಶ ನೀಡಲಾಗಿದೆ. ಒಂದು ವೇಳೆ ಸುರಕ್ಷತಾ ಕ್ರಮಕೈಗೊಳ್ಳದೆ ಇದ್ದರೆ, ಕಾನೂನು ಕ್ರಮಜರುಗಿಸಲಾಗುವುದು. ಇದರೊಂದಿಗೆ ದಂಡ ಹಾಗೂ ಸಂಬಂಧಿಸಿದ ಇಲಾಖೆಗೆ ಪರವಾನಿಗೆ ರದ್ದು ಮಾಡುವಂತೆ ಮನವಿ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.