Advertisement

ಶೌಚಾಲಯ, ನೀರಿನ ಅವ್ಯವಸ್ಥೆ: ಅಧಿಕಾರಿಗೆ ತರಾಟೆ

06:15 PM Jan 20, 2022 | Team Udayavani |

ಕುಣಿಗಲ್‌: ಪಟ್ಟಣದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿದ ಪಿಕಾರ್ಡ್‌ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌, ಅಲ್ಲಿನ ಶೌಚಾಲಯ, ಕುಡಿಯುವ ನೀರಿನ ಅವ್ಯವಸ್ಥೆಯನ್ನು ಕಂಡು ಸಾರಿಗೆ ನಿಯಂತ್ರಕ ರನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

Advertisement

ಇಲ್ಲಿನ ಸಾರಿಗೆ ಬಸ್‌ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿದ ಡಿ.ಕೃಷ್ಣಕುಮಾರ್‌, ಶೌಚಾಲಯಗಳನ್ನು ಪರಿ ಶೀಲಿಸಿದರು. ಶೌಚಾಲಯಗಳ ಟೈಲ್ಸ್‌, ಟಾಯ್ಲೆಟ್‌ ಬೇಸಿನ್‌ ಹಾಗೂ ಬೇಸಿನ ಪೈಪ್‌ಗ್ಳು ಹೊಡೆದು ಗಬ್ಬೆದ್ದು ನಾರುತ್ತಾ, ಕಲುಷಿತ ನೀರು ಪ್ರಯಾಣಿಕರು ತಿರುಗಾಡುವ ನಿಲ್ದಾಣದ ಹೊರಗೆ ಹರಿಯುತ್ತಿತ್ತು. ಶೌಚಾಲ ಯದ ವಾಸನೆ ಹೊರಕ್ಕೂ ಬರುತ್ತಿತ್ತು. ಇದರಿಂದ ಆಕ್ರೋಶಗೊಂಡ ಕೃಷ್ಣಕುಮಾರ್‌, ಸಂಸ್ಥೆಯ ನಿಯಂತ್ರಕ ಬಿ.ಎಲ್‌.ಪಾತಲಿಂಗರೆಡ್ಡಿ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಇದೇನು ಬಸ್‌ ನಿಲ್ದಾಣದ ಶೌಚಾಲಯವೋ, ಕೊಳಚೆ ಚರಂಡಿಯೋ, ನಿಮ್ಮ ಮನೆಯ ಶೌಚಾಲಯವನ್ನು ನೀವು ಹೀಗೆ ಇಟ್ಟು ಕೊಳ್ಳುತ್ತೀರ ಎಂದು ಕಾರವಾಗಿ ಪ್ರಶ್ನಿಸಿದರು.

ಕೊರೊನಾ ಸಂದರ್ಭದಲ್ಲಿ ಶೌಚಾಲಯ ಹಾಗೂ ನಿಲ್ದಾಣವನ್ನು ಸ್ವತ್ಛವಾಗಿ ಇಟ್ಟುಕೊಳ್ಳಬೇಕು, ನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಬಂದು ಪ್ರಯಾಣಿಸುತ್ತಾರೆ. ನಿಮ್ಮ ಬೇಜವಾಬ್ದಾರಿಯಿಂದ ಪ್ರಯಾಣಿಕ ರಿಗೆ ಸಾಂಕ್ರಾಮಿಕ ರೋಗ ಅಂಟುಕೊಳ್ಳಲಿದೆ. ಇದರ ಹೊಣೆಯನ್ನು ನೀವೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಲುಷಿತ ಕುಡಿಯುವ ನೀರು: ಬಳಿಕ ಶುದ್ಧ ಕುಡಿವ ನೀರಿನ ಘಟಕವನ್ನು ಕೃಷ್ಣಕುಮಾರ್‌ ಪರಿಶೀಲಿಸದರು. ನೆಪಕ್ಕೆ ಮಾತ್ರ ಶುದ್ಧ ನೀರಿನ ಘಟಕವಿದೆ. ಆದರೆ, ಶುದ್ಧಕುಡಿಯುವ ನೀರಿನ ಬದಲಿಗೆ ಕಲುಷಿತ ನೀರು ಬರುತ್ತಿದೆ. ಇದರ ಸುತ್ತಾ ಜಾಡು ಕಟ್ಟಿದೇ ಸ್ವಚ್ಛತೆ ಮಾಡಿಲ್ಲ. ಪ್ರಯಾಣಿಕರು ಈ ನೀರು ಕುಡಿದರೇ ಅವರ ಆರೋಗ್ಯ ಏನಾಗಬಹುದು ಎಂದು ಸಂಸ್ಥೆಯ ನಿಯಂತ್ರಕ ಬಿ.ಎಲ್‌. ಪಾತಲಿಂಗರೆಡ್ಡಿ ಅವರನ್ನು ಪ್ರಶ್ನಿಸಿದರು.

ಕೂಡಲೇ ಈ ಅವ್ಯವಸ್ಥೆಯನ್ನು ವಾರದೊಳಗಾಗಿ ಸರಿಪಡಿಸಬೇಕು. ಸಮಯಕ್ಕೆ ಸರಿಯಾಗಿ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳನ್ನು ಬಿಟ್ಟು ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮಕ್ಕೆ ಸಚಿವರಿಗೆ ದೂರು ನೀಡುವುದ್ದಾಗಿ ಎಚ್ಚರಿಕೆ ನೀಡಿದರು.

Advertisement

ಹಾಸ್ಟೆಲ್‌ ಪರಿಶೀಲನೆ: ಬಸ್‌ ನಿಲ್ದಾಣ ಪರಿಶೀಲಿಸಿದ ಬಳಿಕ ಪಟ್ಟಣದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಯಲಯಕ್ಕೆ ಭೇಟಿ ನೀಡಿದ ಕೃಷ್ಣಕುಮಾರ್‌, ಹಾಸ್ಟೆಲ್‌ ಸ್ವತ್ಛತೆ, ಅಡುಗೆ ಕೊಠಡಿ, ಗುಣಮಟ್ಟದ ಆಹಾರ ತಯಾರಿಕೆಯನ್ನು ಪರಿಶೀಲಿಸಿದರು. ಹಾಸ್ಟೆಲ್‌ನಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಊಟ, ತಿಂಡಿ, ಏನೇನು ಕೊಡುತ್ತೀದ್ದೀರ ಎಂದು ಅಡಿಗೆ ತಯಾರಕರನ್ನು ಕೇಳಿದರು. 200 ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ದಾಖಲಾಗಿದ್ದಾರೆ. ಆದರೆ, ಕೊರೊನಾ ಹಿನ್ನಲೆಯಲ್ಲಿ 80 ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದಾರೆ. ಅವರಿಗೆ ಆಹಾರದ ಪಟ್ಟಿ ಪ್ರಕಾರ ಊಟ ನೀಡಲಾಗುತ್ತಿದೆ ಎಂದು ಅಡಿಗೆ ತಯಾರಕಿ ತಿಳಿಸಿದರು.

ಆಹಾರದ ಪಟ್ಟಿಯಲ್ಲಿ ಮಧ್ಯಾಹ್ನದ ಊಟಕ್ಕೆ ಮುದ್ದೆ ಕೊಡಲಾಗುವುದೆಂದು ಹಾಕಲಾಗಿದೆ. ಆದರೆ, ಮುದ್ದೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿ ಅನ್ನ ಸಾಂಬರ್‌ ಸವಿದರು. ಸಾಂಬರ್‌ ಚನ್ನಾಗಿದೆ. ಹೀಗೆ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ತಿಳಿಸಿದರು. ಸರ್ಕಾರ ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಸುವಂತಹ ಕೆಲಸವನ್ನು ಇಲಾಖೆಯ ವಿಸ್ತರಣಾಧಿಕಾರಿ ಮಾಡುವಂತೆ ತಿಳಿಸಬೇಕೆಂದು ಸೂಚಿಸಿದರು.

ಕೊರೊನಾ ಬಗ್ಗೆ ಎಚ್ಚರವಹಿಸಿ: ಕೊರೊನಾ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕೈಗಳಿಗೆ ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು ಎಂದು ಹೇಳಿದರು. ಪುರಸಭಾ ಸದಸ್ಯ ಆನಂದ್‌ಕುಮಾರ್‌, ಗ್ರಾಪಂ ಸದಸ್ಯ ಜೆಸಿಬಿ ನಾಗರಾಜು, ಮುಖಂಡ ತಿಮ್ಮೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next