Advertisement

ಶೌಚಾಲಯ ನಿರ್ಮಾಣ ಸಮರ್ಪಕವಾಗಿರಲಿ

01:02 PM Sep 30, 2018 | Team Udayavani |

ಬೀದರ: ಶೌಚಾಲಯ ನಿರ್ಮಾಣ ಸಮರ್ಪಕವಾಗಿ ನಡೆಯಬೇಕಿದ್ದು, ಬಳಕೆ ವಿಷಯದಲ್ಲೂ ಜಾಗೃತಿ ಮೂಡಿಸಬೇಕು. ಪರಿಸರ ನೈರ್ಮಲ್ಯ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಇದಕ್ಕೆ ಗ್ರಾಮಸ್ಥರು ಕೂಡ ಸಹಕಾರ ನೀಡಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಂಡೆಪ್ಪ ಖಾಶೆಂಪೂರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬಗದಲ್‌ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿದ ಸಚಿವರು, ಬಗದಲ್‌ ಗ್ರಾಮದ ಸರ್ವಾಂಗೀಣ ವಿಕಾಸಕ್ಕಾಗಿ ಮಾಸ್ಟರ್‌ ಪ್ಲಾನ್  ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ರಸ್ತೆ, ಕುಡಿಯುವ ನೀರು, ಚರಂಡಿ ಮುಂತಾದ ಬೇಡಿಕೆಗಳನ್ನು ಜನರು ಮುಂದಿಟ್ಟಿದ್ದಾರೆ. ಬೇಡಿಕೆ ಬಂದಿರುವ ಬಡಾವಣೆಗಳಲ್ಲಷ್ಟೇ ಕಾಮಗಾರಿ ಕೈಗೊಳ್ಳುವ ಬದಲು ಇಡೀ ಗ್ರಾಮದಲ್ಲಿ ಪರಿಶೀಲನೆ ನಡೆಸಿ ಪ್ರಗತಿ ಕಾರ್ಯ, ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಸಮರ್ಪಕವಾಗಿ ನಡೆಯುತ್ತಿಲ್ಲ. ಕೆಲವೆಡೆ ಸೆಪ್ಟಿಕ್ ಟ್ಯಾಂಕ್‌ ನಿರ್ಮಿಸಲಾಗಿಲ್ಲ ಎಂದು ಗ್ರಾಮಸ್ಥರು ಸಚಿವರ ಎದುರಿಗೆ ದೂರಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ಸ್ಥಳದಲ್ಲಿದ್ದ ತಾಲೂಕು
ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಧನರಾಜ್‌ ಬೋರಾಳೆ ಅವರಿಗೆ ನಿರ್ದೇಶನ ನೀಡಿದರು.

ಗ್ರಾಮದಲ್ಲಿನ ಚರ್ಚ್‌ನಿಂದ ಬಸ್‌ ನಿಲ್ದಾಣದವರೆಗೆ ಸಿಸಿ ರಸ್ತೆ, ಚರಂಡಿ ನಿರ್ಮಿಸಬೇಕು ಎಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದರು. ಹನುಮಾನ ಮಂದಿರ ಬಳಿಯ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ಓಡಾಡಲು ತೊಂದರೆಯಾಗುತ್ತಿದೆ.
ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಚರಂಡಿ ಸಹಿತ ರಸ್ತೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಕ್ಕಾಗಿ ಸೂಕ್ತ ಯೋಜನೆ ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಸ್‌ ಸೌಲಭ್ಯ ಒದಗಿಸಲು ವಿದ್ಯಾರ್ಥಿಗಳು ಸಚಿವರಿಗೆ ಒತ್ತಾಯಿಸಿದರು. ಬೆಳಗ್ಗೆ ಮತ್ತು ಮಧ್ಯಾಹ್ನ ಬಸ್‌ ಸೌಲಭ್ಯ ಇಲ್ಲ. ಮಧ್ಯಾಹ್ನ 2ಕ್ಕೆ ಕಾಲೇಜು ಬಿಡುತ್ತದೆ. ಆದರೆ, 4 ಗಂಟೆ ವರೆಗೆ ವಿದ್ಯಾರ್ಥಿನಿಯರು ಬೀದರ್‌ ಬಸ್‌ ನಿಲ್ದಾಣದಲ್ಲಿ
ಕಾಯುತ್ತ ಕೂಡುವ ಕಷ್ಟದ ಸ್ಥಿತಿ ಇದೆ ಎಂದು ದೂರಿದರು. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಸಚಿವರು ಈ ಕುರಿತು ಬಸ್‌ ವ್ಯವಸ್ಥಾಕರಿಗೆ ಸೂಚಿಸಿ ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸುವುದಾಗಿ ತಿಳಿಸಿದರು.

Advertisement

ಇದಕ್ಕೂ ಮುನ್ನ ಸಚಿವ ಬಂಡೆಪ್ಪ ಖಾಶೆಂಪೂರ ಬಗದಲ್‌ ಗ್ರಾಮದ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಗ್ರಾಮದಲ್ಲಿನ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜ ಸಂಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದರು. ಸಂಸ್ಥಾನದ ಪೀಠಾಧಿಪತಿ ಶ್ರೀಪತಾನಂದ ಮಹಾರಾಜರು ಶಾಲು ಹೊದಿಸಿ ಸನ್ಮಾನಿಸಿದರು.

ಜಿಲ್ಲಾ ಪಂಚಾಯತ ಸದಸ್ಯ ಆಫ್ರೋಜಾಖಾನ್, ತಾಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮುಲು, ಸದಸ್ಯೆ ಲಲಿತಾಬಾಯಿ, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಕಿಶೋರಕುಮಾರ ದುಬೆ ಸೇರಿದಂತೆ ಅನೇಕರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next