Advertisement

ಜೇವರ್ಗಿ ತಾಲೂಕಿನಲ್ಲಿ “ಶೌಚಕ್ರಾಂತಿ’

12:22 PM Feb 23, 2021 | Team Udayavani |

ಜೇವರ್ಗಿ: ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳ ಸಮರ್ಪಕ ಸದ್ಭಳಕೆ ಹಾಗೂ ಯೋಜನೆ ಜಾರಿಯಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದ ರಾಜ್ಯದ ಹಲವಾರು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಸರ್ಕಾರ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಸಾರಿ ಸಾರಿ ಹೇಳುತ್ತಿದ್ದರೂ ಈ ಯೋಜನೆ ಈ ತಾಲೂಕಿನಲ್ಲಿ ಇದುವರೆಗೂ ಕಾರ್ಯಗತವಾಗಿರಲಿಲ್ಲ. ಆದರೆ ಜೇವರ್ಗಿ ತಾಲೂಕನ್ನು ಬಯಲು ಮುಕ್ತ ಶೌಚಕ್ಕಾಗಿ ಪಣ ತೊಟ್ಟ ಶಾಸಕ ಡಾ|ಅಜಯಸಿಂಗ್‌ ಜೇವರ್ಗಿ ತಾಲೂಕಿನ 42 ಗ್ರಾಮಗಳಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ 42 ಹೈಟೆಕ್‌ ಮಹಿಳಾ ಶೌಚಾಲಯಗಳನ್ನು ನಿರ್ಮಿಸುವುದರ ಮೂಲಕ ಕ್ರಾಂತಿ ಆರಂಭಿಸಿದ್ದಾರೆ.

Advertisement

10 ಲಕ್ಷ ರೂ ಅನುದಾನದಲ್ಲಿ 11 ಶೌಚ ಕೋಣೆಗಳು, 1 ಸ್ನಾನಗೃಹ ಕೋಣೆ, ಒಂದು ಬೋರ್‌ ವೆಲ್‌ ಕೊರೆಯಿಸಿ ಸಿಂಟೆಕ್ಸ್‌ ಅಳವಡಿಸಲಾಗಿದೆ. ಕೋಣೆಯ ಗೋಡೆಗಳಿಗೆ ಟೈಲ್ಸ್‌ ಹಾಗೂ ಪ್ರತಿ ಕೋಣೆಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ.

ಅದರಂತೆ ಯಡ್ರಾಮಿ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ಹೈಟೆಕ್‌ ಮಹಿಳಾ ಶೌಚಾಲಯ ನಿರ್ಮಿಸಲಾಗಿದ್ದು, ಕಳೆದೆರಡು
ವರ್ಷಗಳಿಂದ ಗ್ರಾಮದ ಮಹಿಳೆಯರು ಶೌಚಾಲಯ ಬಳಸುತ್ತಿದ್ದಾರೆ. ಇದಕ್ಕೆ ಬಳಬಟ್ಟಿ ಗ್ರಾಪಂ ಸಂಪೂರ್ಣ ಸಹಕಾರ ನೀಡಿದ್ದು, ನಿರ್ವಹಣಾ ವೆಚ್ಚ ಭರಿಸುತ್ತಿದೆ.
ಹೀಗಾಗಿ ಬಯಲು ಮುಕ್ತ ಶೌಚಾಲಯಕ್ಕೆ ಮಲ್ಲಾಬಾದ ಗ್ರಾಮ ಸಂಕಲ್ಪ ತೊಟ್ಟಂತಾಗಿದೆ.

1600 ಜನಸಂಖ್ಯೆ ಹೊಂದಿರುವ ಮಲ್ಲಾಬಾದ ಎಂಬ ಪುಟ್ಟ ಗ್ರಾಮದಲ್ಲಿ 300 ಮನೆಗಳಿದ್ದು, 250 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ಥಳದ ಸಮಸ್ಯೆಯಿಂದ ಕೆಲವರು ಶೌಚಾಲಯ ನಿರ್ಮಿಸಿಕೊಂಡಿಲ್ಲ. ಅವರಿಗಾಗಿ ಈ ಹೈಟೆಕ್‌ ಶೌಚಾಲಯ ಬಳಕೆಯಾಗುತ್ತಿದೆ. ಶೌಚಾಲಯ ನಿರ್ವಹಣೆಗೆ ಮಹಿಳೆಯೊಬ್ಬರನ್ನು ನೇಮಿಸಿ ಸಂಬಳ ನೀಡಲಾಗುತ್ತಿದೆ. ಹೀಗಾಗಿ ಶೌಚಾಲಯ ಬಳಕೆಯಾಗುವ ಮೂಲಕ ಮಲ್ಲಾಬಾದ ಗ್ರಾಮ ತಾಲೂಕಿಗೆ ಮಾದರಿ ಎನಿಸಿದೆ.

ಕ್ಷೇತ್ರದ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಪ್ರತಿ ಹಳ್ಳಿಗಳಲ್ಲಿ ಮಹಿಳೆಯರು ರಸ್ತೆ ಬದಿಯಲ್ಲಿ ಅಥವಾ ಮರಗಿಡಗಳ ಆಸರೆಯಲ್ಲಿ ಮಲಮೂತ್ರ ವಿಸರ್ಜನೆ
ಮಾಡುವ ದೃಶ್ಯ ಕಂಡು ಬರುತ್ತಿತ್ತು. ಆದ್ದರಿಂದ ನಾನು ಗುಡಿ-ಗುಂಡಾರಗಳಿಗೆ ಹಣ ನೀಡುವ ಬದಲು ಪ್ರತಿ ಹಳ್ಳಿಗಳಲ್ಲಿ 10 ಲಕ್ಷ ರೂ ವೆಚ್ಚದ ಹೈಟೆಕ್‌ ಶೌಚಾಲಯ
ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದೇನೆ. ಈ ಯೋಜನೆ ಯಶಸ್ವಿಯಾಗಲು ಪ್ರತಿ ಹಳ್ಳಿಯ ಜನರ ಸಹಕಾರ ಕೂಡ ಅಷ್ಟೇ ಮುಖ್ಯವಾಗಿದೆ.
ಡಾ|ಅಜಯಸಿಂಗ್‌, ಶಾಸಕರು.

Advertisement

ನಾನು ಬಳಬಟ್ಟಿ ಗ್ರಾಪಂಗೆ ವರ್ಗವಾಗಿ ಬಂದ ಮೇಲೆ ಶೌಚಾಲಯಕ್ಕೆ ಹೆಚ್ಚು ಮಹತ್ವ ನೀಡಿದ್ದೇನೆ. ಬೆಳಗಿನ ಜಾವ 6 ಗಂಟೆಗೆಲ್ಲಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬಯಲು ಕಡೆ ಹೋಗುತ್ತಿದ್ದ ಜನರಲ್ಲಿ ಶೌಚಾಲಯಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯವಿರುವ ಅನುದಾನ ಪಡೆದು ನೂತನವಾಗಿ ಶೌಚಾಲಯಗಳನ್ನು ನಿರ್ಮಿಸುವವರಿಗೆ ಸಹಾಯಧನ ಒದಗಿಸಲಾಗಿದೆ.
ಮಹಾಂತೇಶ ಹಿರೇಮಠ, ಬಳಬಟ್ಟಿ ಪಿಡಿಒ.

*ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next