Advertisement

ಅರಸು ಕಾಲೋನಿಯಲ್ಲಿ  ಅಭಿವೃದ್ಧಿ ಅಧ್ವಾನ!

04:51 PM Oct 04, 2018 | |

ಕೊಪ್ಪಳ: ಹಿಂದುಳಿದ ಸಮುದಾಯಗಳ ಹರಿಕಾರ ಎಂದೇ ಹೆಸರು ಪಡೆದ ಡಿ. ದೇವರಾಜ ಅರಸು ಅವರ ನಾಮಧೇಯದ ಅರಸು ಕಾಲೋನಿಯಲ್ಲಿ ಅಭಿವೃದ್ಧಿ ಸಂಪೂರ್ಣ ಅಧ್ವಾನವಾಗಿದೆ. ಇಲ್ಲಿ ಮಹಿಳೆಯರಿಗೆ ಇಂದಿಗೂ ಬಯಲು ಬಹಿರ್ದೆಸೆಗೆ ಮುಳ್ಳಿನ ಪೊದೆಗಳೇ ಆಸರೆಯಾಗಿವೆ. ಇದ್ದ ಎರಡು ಸಾರ್ವಜನಿಕ ಮಹಿಳಾ ಶೌಚಾಲಯ ಬಂದ್‌ ಆಗಿದ್ದರೆ, ಹೈಟೆಕ್‌ ಶೌಚಾಲಯದಲ್ಲಿ ಹಣ ಕೊಟ್ಟು ತೆರಳುವಂತ ದುಸ್ಥಿತಿಯಿದೆ.

Advertisement

ಹೌದು. ನಗರದ ಹೃದಯ ಭಾಗದಲ್ಲಿರುವ ದೇವರಾಜ ಅರಸು ಕಾಲೋನಿಯ ಕೆಲ ಭಾಗ ಹಾಳು ಕೊಂಪೆಯಂತಿದೆ. ತಾಪಂ ಕಚೇರಿ ಹಿಂಭಾಗದಲ್ಲಿ ಖಾಸಗಿ ನಿವೇಶನಗಳಿದ್ದು, ಸ್ವಚ್ಛತೆಯನ್ನಿಟ್ಟುಕೊಂಡಿಲ್ಲ. ವಿವಿಧೆಡೆ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಇದೇ ಪ್ರದೇಶದಲ್ಲಿ ವರ್ಷದ ಹಿಂದೆ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಆದರೆ ನಗರಸಭೆ ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ದುರ್ವಾಸನೆ ಹಿಂಸೆಯಾಗಿದೆ. ಹಾಗಾಗಿ ವರ್ಷದ ಹಿಂದೆಯೇ ಬಂದ್‌ ಆಗಿದೆ. ಇದೇ ವಾರ್ಡ್‌ನಲ್ಲಿ ಇನ್ನೊಂದು ಶೌಚಗೃಹ ನಿರ್ಮಿಸಿದ್ದು, ಅಲ್ಲಿಯೂ ಬಂದ್‌ ಆಗಿದೆ.

ಹಣ ಕೊಟ್ಟು  ಶೌಚಕ್ಕೆ  ತೆರಳಬೇಕು
ಈ ವಾರ್ಡ್‌ ಬಹುದೊಡ್ಡ ವಿಸ್ತಾರ ಹೊಂದಿದ್ದರಿಂದ 14, 29, 30 ಹಾಗೂ 31 ವಾರ್ಡ್‌ನ ನಿವಾಸಿಗಳು ಬಯಲು ಬಹಿರ್ದೆಸೆಗೆ ತೆರಳುತ್ತಿದ್ದಾರೆ. ಉಳ್ಳವರು ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೆ, ಬಡವರಿಗೆ ಜಾಗದ ಸಮಸ್ಯೆಯಿಂದ ಸಾರ್ವಜನಿಕ ಶೌಚಾಲಯಗಳೇ ಆಸರೆಯಾಗಬೇಕಿತ್ತು. ಆದರೆ ನಗರಸಭೆಯ ನಿರ್ಲಕ್ಷ್ಯ ಸೇರಿದಂತೆ ನಾನಾ ಕಾರಣಗಳಿಂದ ಬಂದ್‌ ಆಗಿವೆ. ಈ ವಾರ್ಡ್‌ನಲ್ಲಿ 40 ಲಕ್ಷ ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಿದ್ದು, ಜನರು ನಿತ್ಯ ಹಣ ಕೊಟ್ಟು ಶೌಚಕ್ಕೆ ತರಬೇಕಾದ ಅನಿವಾರ್ಯತೆ ಬಂದಿದೆ.

ಬಡವರಿಗೆ ಮುಳ್ಳಿನ ಪೊದೆ ಆಸರೆ 
ತಾಪಂ ಹಿಂಭಾಗದಲ್ಲಿನ ನಿವಾಸಿಗಳಿಗೆ ಹೈಟೆಕ್‌ ಶೌಚಾಲಯ ದೂರವಾಗಲಿದೆ. ಹಾಗಾಗಿ ಪಕ್ಕದಲ್ಲೇ ಖಾಸಗಿ ನಿವೇಶನಗಳಲ್ಲಿನ ಮುಳ್ಳಿನ ಪೊದೆಗಳೇ ಆಸರೆಯಾಗಿವೆ. ರಾತ್ರಿ ಹಾಗೂ ಸಂಜೆ ವೇಳೆ ಇಲ್ಲಿ ಮಹಿಳೆಯರು ಶೌಚಕ್ಕೆ ತೆರಳುವ ಪರಿಸ್ಥಿತಿ ಇಂದಿಗೂ ಜೀವಂತವಿದೆ. ಆದರೆ, ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಇನ್ನೂ ಸಕಾಲಕ್ಕೆ ಕಸದ ವಾಹನ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅಷ್ಟೊಂದುಗಬ್ಬೆದ್ದು ನಾರುತ್ತಿದೆ. ಅರಸು ಕಾಲೋನಿ ಎಂದು ಹೆಸರು ಪಡೆದರೂ ಅಧ್ವಾನದ ಸ್ಥಿತಿ ಇಂದಿಗೂ ಜನರ ಕಣ್ಣಿಗೆ ಗೋಚರವಾಗುತ್ತಿದೆ.

ನೀರಿನ ವ್ಯವಸ್ಥೆಯಿಲ್ಲ 
ವಿವಿಧ ವಾರ್ಡ್‌ಗಳಿಗೆ ಹೋಲಿಕೆ ಮಾಡಿದರೆ ಈ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅಚ್ಚರಿಯಂದರೆ ನಗರದ ಹೃದಯ ಭಾಗದಲ್ಲಿರುವ ಈ ವಾರ್ಡ್‌ ದೊಡ್ಡ ವಾರ್ಡ್‌ ಎಂದೆನಿಸಿದರೂ ಅಭಿವೃದ್ಧಿಯಾಗಿಲ್ಲ. ಇಲ್ಲಿವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿಲ್ಲ.

Advertisement

ಶಾಲೆ ಮುಂದೆ ಚರಂಡಿ ತ್ಯಾಜ್ಯ 
ವಾರ್ಡ್‌ನಲ್ಲಿನ ಸರ್ಕಾರಿ ಶಾಲೆಯ ಮುಂದೆ ದೊಡ್ಡ ಚರಂಡಿ ಹಾದು ಹೋಗಿದೆ. ಕೆಲವು ಬಾರಿ ಜನರು ಕೆಟ್ಟ ಆಹಾರ ಪದಾರ್ಥಗಳನ್ನು ಚರಂಡಿಗೆ ಚೆಲ್ಲುತ್ತಿದ್ದು, ಶಾಲೆ ಸುತ್ತ ದುರ್ವಾಸನೆ ಬೀರುತ್ತಿದೆ. ಶಾಲಾ ಮಕ್ಕಳು ನಿಂತು ಪ್ರಾರ್ಥನೆ ಮಾಡದಷ್ಟು ಕಷ್ಟದ ಪರಿಸ್ಥಿತಿಯಿದೆ. ವಾರ್ಡ್‌ ಹೆಸರಿಗೆ ಅಭಿವೃದ್ಧಿಯಾಗಿದೆ ಎಂದೇ ಹೇಳುಕೊಳ್ಳುತ್ತಿದ್ದರೂ ಜನ ನಾಯಕರು, ವಾರ್ಡ್‌ನಲ್ಲಿನ ಸದಸ್ಯರು, ನಗರಸಭೆ ಅಧಿಕಾರಿಗಳು ವಾರ್ಡ್‌ನಲ್ಲಿ ಪಾದಯಾತ್ರೆ ನಡೆಸಿದರೆ ಎಲ್ಲ ಸಮಸ್ಯೆಗಳು ಅವರ ಗಮನಕ್ಕೆ ಬರಲಿವೆ.

ನಮ್ಮದು ಅತಿ ದೊಡ್ಡ ವಾರ್ಡ್‌. ಆದರೆ ಇಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಎರಡು ಸಾರ್ವಜನಿಕ ಮಹಿಳಾ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಎರಡು ವರ್ಷಗಳಿಂದ ಬಂದ್‌ ಇವೆ. ವಾರ್ಡ್ ನಲ್ಲಿ ಕುಡಿಯುವ ನೀರು 10 ದಿನಕ್ಕೊಮ್ಮೆ ಪೂರೈಕೆ ಮಾಡಲಾಗುತ್ತದೆ. ಇಲ್ಲಿವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿಲ್ಲ. ಚರಂಡಿ ಮೇಲೆ ಅತಿಕ್ರಮಣ ನಡೆದಿದೆ.
ನಾಸೀರ್‌ ಕಂಠಿ,
ವಾರ್ಡ್‌ನ ನಿವಾಸಿ.

ವಾರ್ಡ್‌ನಲ್ಲಿನ ಶೌಚಾಲಯಗಳನ್ನು ವಿವಿಧ ಕಾರಣಕ್ಕೆ ಬಂದ್‌ ಮಾಡಲಾಗಿದೆ. ಬೇಸಿಗೆಯಲ್ಲಿ ತುಂಬ ದುರ್ವಾಸನೆ ಬರುತ್ತದೆ. ಅದನ್ನು ಯಾರೂ ನಿರ್ವಹಣೆ ಮಾಡುವವರಿಲ್ಲ. ಹಾಗಾಗಿ ನಾವು ಪಕ್ಕದ ಮುಳ್ಳಿನ ಪೊದೆಗಳಲ್ಲಿಯೇ ಶೌಚಾಲಯಕ್ಕೆ ತೆರಳುವಂತ ಪರಿಸ್ಥಿತಿಯಿದೆ. ಇಲ್ಲವೇ ದೂರದಲ್ಲಿನ ಹೈಟೆಕ್‌ ಶೌಚಾಲಯಕ್ಕೆ ತೆರಳಬೇಕು.
ಫಾತೀಮಾ
ಟಾಂಗಾದಾರ್‌, ಸ್ಥಳೀಯ ನಿವಾಸಿ

„ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next