ಹೊಸದಿಲ್ಲಿ : ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಸ್ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮನೆ ಮನೆಗೆ ತೆರಳಿ ಪೊಲಿಯೋ ಡ್ರಾಪ್ಸ್ ನೀಡುವ ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಒಂದೂವರೆ ವರ್ಷ ಪ್ರಾಯದ ಬಾಲಕನಿಗೆ ಪೊಲೀಯೋ ಡ್ರಾಪ್ಸ್ ನೀಡಿದ ಅರ್ಧ ತಾಸಿನೊಳಗೆ ಆತನ ಬಾಯಲ್ಲಿ ನೊರೆ ಹೊರಬರಲು ಆರಂಭವಾಯಿತು. ಒಡನೆಯೇ ಬಾಲಕನನ್ನು ಕೃಷ್ಣ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಷ್ಟರೊಳಗಾಗಿಯೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು.
ಬಾಲಕನ ಮನೆಯವರು ಮೂಲತಃ ಆಗ್ರಾದವರು. ಅವರು ತಮ್ಮ ಬಂಧುಗಳನ್ನು ಕಾಣಲು ಫೌಜಿ ಮೊಹಲ್ಲಾಗೆ ಬಂದಿದ್ದರು. ನತದೃಷ್ಟ ಬಾಲಕನು ಮನೆಯಲ್ಲಿ ಮಲಗಿದ್ದಾಗ ಆತನನ್ನು ಎಬ್ಬಿಸಿ ಆತನಿಗೆ ಆಶಾ ಕಾರ್ಯಕರ್ತೆಯರು ಪೊಲೀಯೋ ಡ್ರಾಪ್ಸ್ ನೀಡಿದರು ಎಂದು ವರದಿಗಳು ತಿಳಿಸಿವೆ.
ಜಿಲ್ಲಾ ಪೊಲೀಯೋ ಅಭಿಯಾನದ ಅಧಿಕಾರಿಯಾಗಿರುವ ಡಾ. ಜಸ್‌ಬೀರ್ ಸಿಂಗ್ ಈ ಬಗ್ಗೆ ಹೇಳಿರುವುದು ಇಷ್ಟು :
ನಾವು ಐದು ದಿನಗಳ ಈ ಪೋಲಿಯೋ ನಿರ್ಮೂಲನ ಅಭಿಯಾನದಲ್ಲಿ 3.75 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕಿದ್ದೇವೆ; ಆದರೆ ಯಾವುದೇ ಮಗುವಿಗೆ ಯಾವುದೇ ರೀತಿಯ ಅನಾರೋಗ್ಯ, ತೊಂದರೆ ಕಾಣಿಸಿದ್ದಿಲ್ಲ. ಈ ಪ್ರಕರಣದಲ್ಲಿ ಬಾಲಕನ ಸಾವಿಗೆ ಬೇರೇನೋ ಕಾರಣ ಇರಬೇಕು. ಪೋಲಿಯೋ ಡ್ರಾಪ್ಸ್ ಹಾಕಿದ ಅರೆ ತಾಸಿನೊಳಗೆ ಬಾಲಕನು ಸತ್ತಿರುವುದು ಏನೋ ಕಾಕತಾಳೀಯವಾಗಿರಬೇಕು. ವೈದ್ಯರ ತಂಡವು ಮೃತ ಬಾಲಕನ ಮರಣೋತ್ತರ ಪರೀಕ್ಷೆಯನ್ನು ನಡೆಸಲಿದ್ದಾರೆ ಮತ್ತು ಆವರ ವರದಿಯಿಂದ ಬಾಲಕನ ಸಾವಿನ ನಿಜವಾದ ಕಾರಣವೇನು ಎಂಬುದು ಗೊತ್ತಾಗಲಿದೆ.
“ಬಾಲಕನ ಸಾವಿಗೂ ಪೋಲಿಯೋ ಡ್ರಾಪ್ಸ್ ಗೂ ಯಾವುದೇ ಸಂಬಂಧವಿಲ್ಲ; 1995ರಿಂದಲೂ ನಾವು ಈ ಅಭಿಯಾನವನ್ನು ಯಾವುದೇ ಚ್ಯುತಿ, ಹುಳಕು, ವ್ಯತಿರಿಕ್ತ ಪರಿಣಾಮವಿಲ್ಲದೇ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಡಾ. ಜಸ್‌ಬೀರ್ ಸಿಂಗ್ ಹೇಳಿದ್ದಾರೆ.