Advertisement

ಯುವಿ ಬಿಕರಿಯಾಗುವುದೇ ಅನುಮಾನ

06:00 AM Dec 18, 2018 | Team Udayavani |

ಜೈಪುರ: 2019ನೇ ಸಾಲಿನ 12ನೇ ಐಪಿಎಲ್‌ಗಾಗಿ ಡಿ.18ರಂದು ಜೈಪುರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್‌ನಲ್ಲಿ ಭಾಗವಹಿಸಲಿರುವ 8 ತಂಡಗಳಿಗೆ ಬೇಕಿರುವುದು ಇನ್ನು 70 ಆಟಗಾರರು ಮಾತ್ರ. ಇಷ್ಟು ಸ್ಥಾನಗಳಿಗಾಗಿ ಹರಾಜು ನಡೆಯಲಿದೆ. 

Advertisement

ಒಟ್ಟು 1003 ಆಟಗಾರರು ಹರಾಜಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪಟ್ಟಿಯನ್ನು ಬಿಸಿಸಿಐ ಪರಿಷ್ಕರಿಸಿ 346ಕ್ಕಿಳಿಸಿದೆ.

ಯುವಿ ಮೂಲಬೆಲೆ 1 ಕೋಟಿ ರೂ.: ಮಂಗಳವಾರದ ಹರಾಜಿನಲ್ಲಿ ಅತ್ಯಂತ ಕುತೂಹಲದ ಹೆಸರು ಯುವರಾಜ್‌ ಸಿಂಗ್‌ ಅವರದ್ದು. 2018ರ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದ ಅವರನ್ನು ಪಂಜಾಬ್‌ ತಂಡದಿಂದ ಕೈಬಿಡಲಾಗಿದೆ. ಈ ಬಾರಿ ಆಡಿದ 8 ಪಂದ್ಯಗಳಲ್ಲಿ ಪೂರ್ಣ ವಿಫ‌ಲರಾಗಿ ಕೇವಲ 65 ರನ್‌ ಗಳಿಸಿದ್ದರು. ಆದ್ದರಿಂದ ಪಂಜಾಬ್‌ ಅವರನ್ನು ಕೈಬಿಟ್ಟಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಈ ಹಿಂದೆ ಐಪಿಎಲ್‌ನಲ್ಲಿ ಅತಿ ಗರಿಷ್ಠ ಅಂದರೆ 16 ಕೋಟಿ ರೂ.ಗೆ ಹರಾಜಾಗಿ ದಾಖಲೆ ಮಾಡಿರುವ ಯುವರಾಜ್‌ ಸಿಂಗ್‌ ಈ ಬಾರಿ ಮಾರಾಟವೇ ಆಗದೇ ಉಳಿಯುವ ಸಾಧ್ಯತೆಯೇ ದಟ್ಟವಾಗಿದೆ. ಇದನ್ನು ಮನಗಂಡೇ ಯುವರಾಜ್‌ ಸಿಂಗ್‌ ತಮ್ಮ ಮೂಲಬೆಲೆಯನ್ನು 1 ಕೋಟಿ ರೂ.ಗಿಳಿಸಿಕೊಂಡಿದ್ದಾರೆ. ಇದೇ ಪಟ್ಟಿಯಲ್ಲಿ ವೃದ್ಧಿಮಾನ್‌ ಸಹಾ, ಮೊಹಮ್ಮದ್‌ ಶಮಿ, ಅಕ್ಷರ್‌ ಪಟೇಲ್‌ ಕೂಡ ಇದ್ದಾರೆ.

ವಿದೇಶಿಗರತ್ತ ಫ್ರಾಂಚೈಸಿಗಳ ಆಸಕ್ತಿ: ಅನುಭವಿ ವಿದೇಶಿ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಹೆಚ್ಚು ಆಸಕ್ತಿ ಹೊಂದಿವೆ. ಭಾರತೀಯ ಆಟಗಾರರು ಫ್ರಾಂಚೈಸಿಗಳ ಆದ್ಯತಾ ಪಟ್ಟಿಯಲ್ಲಿದ್ದಂತಿಲ್ಲ. ವಿದೇಶದ ಡೇಲ್‌ ಸ್ಟೇನ್‌, ಮಾರ್ನೆ ಮಾರ್ಕೆಲ್‌, ಜಾನಿ ಬೇರ್‌ಸ್ಟೋ, ಅಲೆಕ್ಸ್‌ ಹೇಲ್ಸ್‌ 1.5 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಇನ್ನು ಭಾರತದ ಜೈದೇವ್‌ ಉನಾಡ್ಕತ್‌ ಕೂಡಾ 1.5 ಕೋಟಿ ರೂ. ಬೆಲೆ ಹೊಂದಿದ್ದಾರೆ. 11.5 ಕೋಟಿ ರೂ.ಗೆ ಮಾರಾಟವಾಗಿದ್ದ ಜೈದೇವ್‌ ಈ ವರ್ಷ ರಾಜಸ್ಥಾನ್‌ ರಾಯಲ್ಸ್‌ ಪರ ಆಡಿದ್ದರು!

ಇನ್ನು ಭಾರತ ಟೆಸ್ಟ್‌ ತಂಡದಲ್ಲಿಯಷ್ಟೇ ಸ್ಥಾನ ಹೊಂದಿರುವ ಖ್ಯಾತ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ, ವೇಗಿ ಇಶಾಂತ್‌ ಶರ್ಮ ತಮ್ಮ ಮೂಲಬೆಲೆಯನ್ನು ಕ್ರಮವಾಗಿ 50 ಲಕ್ಷ ರೂ., 70 ಲಕ್ಷ ರೂ.ಗೆ ಇಳಿಸಿಕೊಂಡಿದ್ದಾರೆ. ಆದರೆ ಇವರಿಬ್ಬರು ಫ್ರಾಂಚೈಸಿಗಳ ಆದ್ಯತೆಯಲ್ಲ. ಹಾಗಿದ್ದರೂ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಆಟಗಾರರು ನಿರ್ಧರಿಸಿದಂತಿದೆ.

Advertisement

ಈ ಖ್ಯಾತ ಹೆಸರಿನ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ಭಾರತೀಯ ಆಟಗಾರರೂ ಸ್ಪರ್ಧೆಯಲ್ಲಿದ್ದಾರೆ. ಹಿಂದಿನ ಹರಾಜಿನ ವೇಳೆಯಲ್ಲಿ ಈ ಅನಾಮಿಕ ಆಟಗಾರರು ಭಾರೀ ಮೊತ್ತಕ್ಕೆ ಮಾರಾಟವಾಗಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ಈ ಬಾರಿ ಅಂತಹ ಖ್ಯಾತಿ ಯಾರಿಗೆ ಬರುತ್ತದೆಂದು ಕಾದು ನೋಡಬೇಕು. ಆದರೆ ಹೀಗೆ ದುಬಾರಿ ಬೆಲೆಗೆ ಮಾರಾಟವಾದ ಬಹುತೇಕ ಅನಾಮಿಕ ಆಟಗಾರರು ತಮ್ಮ ಬೆಲೆಗೆ ತಕ್ಕಂತೆ ಆಡಿಲ್ಲವೆನ್ನುವುದು ಅಷ್ಟೇ ಸತ್ಯ.

ಆಸ್ಟ್ರೇಲಿಯ, ಇಂಗ್ಲೆಂಡ್‌ ಆಟಗಾರರ ಕಥೆಯೇನು?
ಇಂಗ್ಲೆಂಡ್‌ನ‌ಲ್ಲಿ 2019ರ ಮೇ ಅಂತ್ಯದ ಹೊತ್ತಿಗೆ ಏಕದಿನ ವಿಶ್ವಕಪ್‌ ಆರಂಭವಾಗಲಿದೆ. ಆದ್ದರಿಂದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯದ ಪ್ರಮುಖ ಆಟಗಾರರು ಈ ಬಾರಿ ಆಡುವುದು ಅನುಮಾನ. ಐಪಿಎಲ್‌ ಮಧ್ಯಭಾಗದ ಹೊತ್ತಿಗೆ ಎರಡೂ ದೇಶಗಳು ತರಬೇತಿ ಶಿಬಿರ ನಡೆಸುವುದರಿಂದ, ವಿಶ್ವಕಪ್‌ಗೆ ಆಯ್ಕೆಯಾದ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಆದ್ದರಿಂದ ಈ ಆಟಗಾರರನ್ನು ಖರೀದಿ ಮಾಡಿದರೂ ಅವರಿಂದ ಫ್ರಾಂಚೈಸಿಗಳಿಗೆ ಲಾಭವಿರುವುದಿಲ್ಲ. ಹಾಗಾಗಿ ಫ್ರಾಂಚೈಸಿಗಳ ನಡೆ ಈಗ ಕುತೂಹಲ ಮೂಡಿಸಿದೆ. ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಏರಾನ್‌ ಫಿಂಚ್‌ ತಾವೇ ಸ್ವತಃ ಹರಾಜಿನಿಂದ ಹಿಂದೆ ಸರಿದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

2 ಕೋಟಿ ರೂ. ಮೂಲಬೆಲೆ: ಭಾರತೀಯರೇ ಇಲ್ಲ!
ಅಚ್ಚರಿಯೆಂದರೆ ಒಟ್ಟು 346 ಮಂದಿ ಆಟಗಾರರ ಪಟ್ಟಿಯಲ್ಲಿ 2 ಕೋಟಿ ರೂ. ಮೂಲಬೆಲೆ ಹೊಂದಿರುವ ಯಾವುದೇ ಭಾರತೀಯ ಕ್ರಿಕೆಟಿಗರಿಲ್ಲ. ಆದರೆ 9 ವಿದೇಶಿ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ನ್ಯೂಜಿಲೆಂಡ್‌ನ‌ ಬ್ರೆಂಡನ್‌ ಮೆಕಲಂ, ಕೋರಿ ಆ್ಯಂಡರ್ಸನ್‌, ಆಸ್ಟ್ರೇಲಿಯದ ಶಾನ್‌ ಮಾರ್ಷ್‌, ಡಿ ಆರ್ಸಿ ಶಾರ್ಟ್‌, ಇಂಗ್ಲೆಂಡ್‌ನ‌ ಸ್ಯಾಮ್‌ ಕರನ್‌, ಕ್ರಿಸ್‌ ವೋಕ್ಸ್‌, ದ.ಆಫ್ರಿಕಾದ ಕಾಲಿನ್‌ ಇಂಗ್ರಾಮ್‌, ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್‌, ಲಸಿತ್‌ ಮಾಲಿಂಗ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next