Advertisement

ಇಂದಿನ ಪೀಳಿಗೆಗೆ “ಕುರುಕ್ಷೇತ್ರ’ಅಗತ್ಯ

05:38 PM Aug 05, 2019 | Team Udayavani |

ದರ್ಶನ್‌ ನಾಯಕರಾಗಿರುವ “ಕುರುಕ್ಷೇತ್ರ’ ಚಿತ್ರ ಆಗಸ್ಟ್‌ 09 ರಂದು ತೆರೆಕಾಣುತ್ತಿದೆ. ಪೌರಾಣಿಕ, ಐತಿಹಾಸಿಕ ಚಿತ್ರಗಳಿಗೆ ಮೊದಲ ಆದ್ಯತೆ ನೀಡುವ ದರ್ಶನ್‌, “ಕುರುಕ್ಷೇತ್ರ’ದಲ್ಲಿ ದುರ್ಯೋಧನನಾಗಿ ಅಬ್ಬರಿಸಿದ್ದಾರೆ. ಆ ಚಿತ್ರ, ಅದರ ತಯಾರಿ ಸೇರಿದಂತೆ ಹಲವು ವಿಚಾರಗಳ ಕುರಿತು “ಉದಯವಾಣಿ’ಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ…

Advertisement

* “ಕುರುಕ್ಷೇತ್ರ’ದ‌ ಆಫ‌ರ್‌ ಬಂದಾಗ ಹೇಗನಿಸಿತು?
ಮುನಿರತ್ನ ಅವರು ಈ ಸಿನಿಮಾ ಮಾಡುತ್ತೇನೆಂದು ಮುಂದೆ ಬಂದಾಗ ಖುಷಿಯಿಂದಲೇ ಒಪ್ಪಿಕೊಂಡೆ. ಅವರು ಈ ತರಹದ ಸಿನಿಮಾ ಮಾಡ್ತೀನಿ ಎಂದು ಬಂದಾಗ, ನಾನು ಮಾಡಲ್ಲ ಅಂದಿದ್ರೆ ನನ್ನಂಥ ಮುಠ್ಠಾಳ ಇರಲ್ಲ.

* ದುರ್ಯೋಧನ ಪಾತ್ರಕ್ಕೆ ನೆಗೆಟಿವ್‌ ಶೇಡ್‌ ಕೂಡಾ ಇದೆಯಲ್ಲ?
ನಿಜ ಹೇಳಬೇಕೆಂದರೆ ಮಹಾಭಾರತದಲ್ಲಿ ರಿಯಲ್‌ ಹೀರೋ ದುರ್ಯೋಧನ. ಅವನು ಯಾರಿಗೂ ದ್ರೋಹ ಮಾಡಿಲ್ಲ , ಮೋಸ ಮಾಡಿಲ್ಲ. ಅವನು ಹುಟ್ಟಿದ್ದು ಅಹಂನಲ್ಲಿ ಸತ್ತಿದ್ದು ಅಹಂನಲ್ಲಿ. ಪಾಂಡವರೆಲ್ಲರೂ ಮೊದಲು ನರಕಕ್ಕೆ ಹೋದರೆ, ದುರ್ಯೋಧನ ನೇರ ಸ್ವರ್ಗ ಸೇರಿದ್ದ.

* ಈ ಪಾತ್ರ ಮಾಡುವ ಮುನ್ನ ನೀವು ಹಳೆಯ ಪೌರಾಣಿಕ ಸಿನಿಮಾಗಳನ್ನು ನೋಡಿದ್ರಾ?
ಹೌದು, “ಭಕ್ತಪ್ರಹ್ಲಾದ’ ಸಿನಿಮಾವನ್ನು ತುಂಬಾ ಸಾರಿ ನೋಡಿದ್ದೇನೆ. ಅಲ್ಲಿನ ಪಾತ್ರಕ್ಕೆ ಸಾಮ್ಯತೆ ಇದೆ. ಎನ್‌ಟಿಆರ್‌ ಅವರ ಸಿನಿಮಾಗಳನ್ನೂ ನೋಡಿದ್ದೇನೆ. ಅವರೆಲ್ಲರಿಂದಲೂ ಸಾಕಷ್ಟು ಅಂಶಗಳನ್ನು ತಗೊಂಡು, ಅಂತಿಮವಾಗಿ ಅದನ್ನು ನನ್ನ ಶೈಲಿಯಲ್ಲಿ ಹೇಗೆ ಮಾಡಬಹುದೋ ಹಾಗೆ ಮಾಡಿದ್ದೇನೆ.

* ನೀವು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ ಹೇಗೆ?
ಈ ತರಹದ ಸಿನಿಮಾಗಳ ಮಾಡಿಲೇಶನ್‌ ಬೇರೆಯೇ ಇರುತ್ತದೆ. ಹಾಗಾಗಿ, ಯಾರೇ ಈ ತರಹದ ಸಿನಿಮಾ ಮಾಡಲು ಬಂದಾಗಲೂ, ಮೊದಲು ಸ್ಕ್ರಿಪ್ಟ್ ಕೊಡಿ ಎಂದು ಕೇಳುತ್ತೇನೆ. ಅದನ್ನು ಸಂಪೂರ್ಣವಾಗಿ ಓದಿ, ಆ ನಂತರ ನನಗೆ ಆ ಪಾತ್ರ ಮಾಡಲು ಸಾಧ್ಯ, ನ್ಯಾಯ ಕೊಡಬಹುದೆಂಬ ನಂಬಿಕೆ ಬಂದರಷ್ಟೇ ಒಪ್ಪಿಕೊಳ್ಳುತ್ತೇನೆ. ಅವಕಾಶ ಬಂತೆಂಬ ಕಾರಣಕ್ಕೆ ಸುಮ್ಮನೆ ಒಪ್ಪೋದಿಲ್ಲ.

Advertisement

* “ಕುರುಕ್ಷೇತ್ರ’ ಚಿತ್ರ ಮಾಡುವಾಗಿನ ನಿಮ್ಮ ದಿನಚರಿ ಹೇಗಿತ್ತು?
ಬೆಳಗ್ಗೆ 5 ಗಂಟೆಗೆ ಎದ್ದು 7.30ವರೆಗೆ ಜಿಮ್‌ ಮಾಡ್ತಾ ಇದ್ದೆ. ಅಲ್ಲಿಂದ ರೆಡಿಯಾಗಿ 9 ಗಂಟೆಗೆ ಸೆಟ್‌. 9 ರಿಂದ ಸಂಜೆ 6ರವರೆಗೆ ಶೂಟಿಂಗ್‌. 6 ಗಂಟೆಯಿಂದ ಮತ್ತೆ ಜಿಮ್‌. ಅಲ್ಲಿ ಎಲ್ಲಾ ಕಲಾವಿದರು ಸಿಗೋರು. ಆ ನಂತರ ಎಲ್ಲರೂ ಒಂದು ರೂಮ್‌ನಲ್ಲಿ ರಾತ್ರಿ 12 ರಿಂದ 01 ಗಂಟೆವರೆಗೆ ಸೇರುತ್ತಿದ್ದೆವು. ಅವರೆಲ್ಲಾ ಹೋದ ಮೇಲೆ ನಾನು ಸ್ಕ್ರಿಪ್ಟ್ ಓದುತ್ತಿದ್ದೆ. ಅಲ್ಲಿಂದ ಎರಡೂವರೆ ಗಂಟೆವರೆಗೆ ಓದಿ ಮಲಗುತ್ತಿದ್ದೆ. ಬೆಳಗ್ಗೆ ಎದ್ದು ರಾತ್ರಿ ಓದಿದ್ದನ್ನು ರೀಕಾಲ್‌ ಮಾಡುವೆ. ಇಂತಹ ಸಿನಿಮಾ ಮಾಡೋದು ತಮಾಷೆಯಲ್ಲ. ತಯಾರಿ ಇಲ್ಲದೇ ಮಾಡಲು ಸಾಧ್ಯವಿಲ್ಲ.

* ಸೆಟ್‌ನಲ್ಲಿ ಅಂಬರೀಶ್‌ ಜೊತೆಗಿನ ನೆನಪು?
ಅವರ ಪ್ರೋತ್ಸಾಹ ಯಾವತ್ತೂ ಇತ್ತು. ಕೆಲವೊಮ್ಮೆ ಅವರ ಶೂಟಿಂಗ್‌ ಮುಗಿದ ಬಳಿಕವೂ ಸೆಟ್‌ನಲ್ಲಿ ಇರುತ್ತಿದ್ದರು. ಇಂತಹ ಸಿನಿಮಾಗಳು ಸಿಗೋದು ಅಪರೂಪ. ಸಿಕ್ಕಾಗ ಚೆನ್ನಾಗಿ ಮಾಡಬೇಕು ಎನ್ನುತ್ತಿದ್ದರು.

* ಡಬ್ಬಿಂಗ್‌ ಕಷ್ಟ ಅನಿಸಿತಾ?
ಸ್ವಲ್ಪ ಕಷ್ಟವೇ. ಏಕೆಂದರೆ ಚಿತ್ರೀಕರಣದ ಸಮಯದಲ್ಲಿ ಎಲ್ಲಾ ಡೈಲಾಗ್‌ಗಳು ನಾಲಗೆ ಮೇಲಿರುತ್ತದೆ. ಆದರೆ, ಡಬ್ಬಿಂಗ್‌ ಮಾಡೋದು ಶೂಟಿಂಗ್‌ ಆದ ನಂತರ. ಅಷ್ಟೊತ್ತಿಗಾಗಲೇ ಸಂಭಾಷಣೆಗಳು ಮರೆತಿರುತ್ತವೆ. ಈ ಸಿನಿಮಾದ ಡಬ್ಬಿಂಗ್‌ ಮಾಡಲು 28 ದಿನ ತಗೊಂಡೆ.

* ಬಹುತಾರಾಗಣದಿಂದ ನಿಮಗಾದ ಲಾಭವೇನು?
ಚಿತ್ರದಲ್ಲಿ ಸಾಕಷ್ಟು ಮಂದಿ ಅನುಭವಿ, ಹಿರಿಯ ನಟರಿದ್ದಾರೆ. ಹಾಗಾಗಿ, ಈ ತರಹದ ಸಿನಿಮಾಗಳಲ್ಲಿ ತುಂಬಾ ಕಲಿಯಲು ಸಿಗುತ್ತದೆ. ನಾನು ಶಾಟ್‌ ಮುಗಿದ ಕೂಡಲೇ ಹಿರಿಯ ನಟರನ್ನು ನೋಡುತ್ತಿದ್ದೆ. ಏನಾದರೂ ಕರೆಕ್ಷನ್‌ ಇದ್ದರೆ ಹೇಳ್ಳೋರು.

* ಐತಿಹಾಸಿಕ-ಪೌರಾಣಿಕ ಸಿನಿಮಾದ ಕುರಿತು ನಿಮ್ಮ ಮುಂದಿನ ಕನಸು?
ನಾನು ಕನಸು ಕಾಣಲ್ಲ. ಈ ತರಹದ ಸಿನಿಮಾಗಳಿಗೆ ನಿರ್ಮಾಪಕ ಕನಸು ಕಾಣಬೇಕು. ನಿರ್ಮಾಪಕ ಕಂಡಾಗ ಮಾತ್ರ ಈ ತರಹದ ಸಿನಿಮಾ ಆಗುತ್ತದೆ. ಸುಖಾಸುಮ್ಮನೆ ಇಂತಹ ಸಿನಿಮಾ ಮಾಡೋಕ್ಕಾಗಲ್ಲ. ನಿರ್ಮಾಪಕನಿಗೆ ನಾಲ್ಕು ಗುಂಡಿಗೆ ಬೇಕು.

ದರ್ಶನ್‌ ಹೇಳಿದ ಹೈಲೈಟ್ಸ್‌
* ಚಿತ್ರದಲ್ಲಿ ಎನ್‌ಟಿಆರ್‌ ಅವರ ಸಿನಿಮಾದ ಹಳೆಯ ಸೆಟ್‌ವೊಂದನ್ನು ಬಳಸಿದ್ದೇವೆ. ಅವರ ಸಿನಿಮಾದ ಸೆಟ್‌ವೊಂದನ್ನು ಹೈದರಾಬಾದ್‌ನಲ್ಲಿ ಉಳಿಸಿಕೊಂಡಿದ್ದಾರೆ. ಅಲ್ಲಿ ಶೂಟಿಂಗ್‌ ಮಾಡಿದ್ದೇವೆ.

* 2017 ಆಗಸ್ಟ್‌ 09ರಂದು ಶೂಟಿಂಗ್‌ ಸ್ಟಾರ್ಟ್‌- 2019 ಆಗಸ್ಟ್‌ 09ರಂದು ರಿಲೀಸ್‌.

* ಸಾಮಾನ್ಯವಾಗಿ ನನ್ನ ಸಿನಿಮಾ ಅನೌನ್ಸ್‌ ಆದಾಗ, “ಚಾಲೆಂಜಿಂಗ್‌ ಸ್ಟಾರ್‌ ಅದು.. ಇದು…’ ಎಂದು ಹಾಕ್ತಾರೆ. ಇದರಲ್ಲಿ “ಮುನಿರತ್ನ ಕುರುಕ್ಷೇತ್ರ’ ಅಂತಿದೆ. ಅನೇಕರು ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದರು. ಈ ಸಿನಿಮಾದ ನಿಜವಾದ ಹೀರೋ ಅವರೇ. ಕ್ರೆಡಿಟ್‌ ಯಾರಿಗೆ ಹೋಗಬೇಕೋ ಅವರಿಗೆ ಕೊಡಬೇಕು. ಇವತ್ತಿನ ಬಜೆಟ್‌ಗೆ, ಇಷ್ಟೊಂದು ಕಲಾವಿದರನ್ನು ಸೇರಿಸಿ ಸಿನಿಮಾ ಮಾಡೋದು ಸುಲಭವಲ್ಲ. ಕಾಸ್ಟೂéಮ್‌ನಿಂದ ಹಿಡಿದು ಗದೆವರೆಗೆ ಅವರೇ ಮಾಡಿಸಿರೋದು.

* “ಅನಾಥರು’ ಸಿನಿಮಾ ಮಾಡುತ್ತಿದ್ದಾಗಲೇ ನಿರ್ಮಾಪಕ ಮುನಿರತ್ನ ಅವರು, “ಕುರುಕ್ಷೇತ್ರ’ ಮಾಡೋಣ ಅಂದಾಗ, ನಾನು ನಕ್ಕುಬಿಟ್ಟು, ಹೋಗಣ್ಣ ಅಂದಿದ್ದೆ. ಆದರೆ ಈಗ ಅವರೇ ಬಂದು ಮಾಡಿದ್ದಾರೆ.

* ನನ್ನ ಸಿನಿಮಾ ವಿಚಾರದಲ್ಲಿ ನಾನು ಎರಡೇ ಸಲ ಕ್ಯೂ ಜಂಪ್‌ ಮಾಡೋದು. ಐತಿಹಾಸಿ ಹಾಗೂ ಪೌರಾಣಿಕ ಸಿನಿಮಾ ಬಂದಾಗ. ಈ ತರಹ ಸಿನಿಮಾ ಮಾಡಲು ಬರುವವರಿಗೆ ಪ್ರೋತ್ಸಾಹ ಕೊಡಬೇಕು ಇವತ್ತಿನ ಕಾಲಘಟ್ಟಕ್ಕೆ ಇಂತಹ ಸಿನಿಮಾದ ಅಗತ್ಯವಿದೆ.

* 3ಡಿಯಲ್ಲಿ 10 ಸಲ ನೋಡಿದ್ದೇವೆ. ಅದ್ಭುತವಾಗಿ ಬಂದಿದೆ.

* ಇಲ್ಲಿ ಕೇವಲ ದುರ್ಯೋಧನ ಪಾತ್ರ ಮಾತ್ರ ಮಿಂಚೋದಿಲ್ಲ. ಪ್ರತಿಯೊಂದು ಸೀನ್‌ನಲ್ಲಿ ಒಬ್ಬೊಬ್ಬ ಆರ್ಟಿಸ್ಟ್‌ ಸ್ಕೋರ್‌ ಮಾಡ್ತಾರೆ.

* ಅಪ್ಪ ಸಾಯುವ ಮುಂಚೆ 15 ದಿನ ಮುಂಚೆ ಮುಖಕ್ಕೆ ಬಣ್ಣ ಹಾಕದೇ ತುಂಬಾ ದಿನ ಆಯ್ತು ಎಂದು ಬೇಸರಿಸಿಕೊಳ್ಳುತ್ತಿದ್ದರು. ಆದರೆ, ಆಗ ಅದರ ಬಗ್ಗೆ ಅರ್ಥವಾಗಿರಲಿಲ್ಲ. ಅಂಬರೀಶ್‌ ಅವರು ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ, ಬಣ್ಣ ಹಾಕಿ, ಮೈಮೇಲೆ ಕಾಸ್ಟೂಮ್‌ ಬಿದ್ದ ಕೂಡಲೇ ಎದೆಯುಬ್ಬಿಸಿ ನಿಂತಾಗ ನಮ್ಮ ಅಪ್ಪನ ಭಾವನೆ, ಅವರು ಅಂದಿನ ಮಾತಿನ ಅರ್ಥವಾಯಿತು.

* 2ಡಿಯಲ್ಲಿ ನೋಡಿದ್ದೇನೆ ಎಂದು ಸುಮ್ಮನಿರಬೇಡಿ, 3ಡಿಯ ಮಜಾನೇ ಬೇರೆ

Advertisement

Udayavani is now on Telegram. Click here to join our channel and stay updated with the latest news.

Next