Advertisement

ಇವತ್ತಿನ ಫಿಲಂ ಹೀರೋ ನೀವೇ ಸಾರ್‌…

03:45 AM Apr 25, 2017 | |

ನಾವು ಅವರನ್ನೇ ನೋಡುತ್ತಾ ಕುಳಿತಿದ್ದೆವು. ವಿಡಿಯೋದಲ್ಲಿ ಒಬ್ಬರಾದ ಮೇಲೆ ಒಬ್ಬರು ಬರುತ್ತಿದ್ದಂತೆ ಅವರ ಮುಖದಲ್ಲಿ ಕಾಣಿಸುತ್ತಿದ್ದ ಕುತೂಹಲ, ಆಶ್ಚರ್ಯ, ಸಂತೋಷ ನಮ್ಮ ಒಂದು ತಿಂಗಳ ಶ್ರಮಕ್ಕೆ ಸಾರ್ಥಕತೆ ನೀಡಿದವು.

Advertisement

ಅಂದು ನನ್ನ ನೆಚ್ಚಿನ ಲೆಕ್ಚರರ್‌ ಒಬ್ಬರ ಬರ್ತ್‌ಡೇ. ನಮ್ಮ ವಿಭಾಗದ ಎಲ್ಲರಿಗೂ ಅವರೆಂದರೆ ಅಚ್ಚುಮೆಚ್ಚು. ಅವರು ಕಾಲೇಜಿಗೆ ಬರುತ್ತಿದ್ದಂತೆ ವಿದ್ಯಾರ್ಥಿಗಳೆಲ್ಲರೂ ಮುಗಿಬಿದ್ದು ಬರ್ತ್‌ಡೇ ವಿಶ್‌ ಮಾಡಿದರು. ನಮ್ಮ ಸೀನಿಯರ್ ಅವರಿಗೆಂದು ದೊಡ್ಡ ಕೇಕ್‌ ಕೂಡಾ ತರಿಸಿ, ಲಘು ಉಪಹಾರದ ವ್ಯವಸ್ಥೆಯನ್ನೂ ಮಾಡಿದ್ದರು. ಸಾಮಾನ್ಯವಾಗಿ ಎಲ್ಲರಂತೆ ವಿಶ್‌ ಮಾಡುವುದು ಬೇಡ ಎಂದುಕೊಂಡಿದ್ದ ನಾನು ಮತ್ತು ನನ್ನ ಗೆಳೆಯ ಅನಿಲ್‌, ಅವರ ಬರ್ತ್‌ಡೇಗೂ ಒಂದು ತಿಂಗಳ ಮುಂಚಿನಿಂದ ಯೋಚಿಸುತ್ತಿದ್ದೆವು.

 ವಿಭಿನ್ನವಾಗಿ ವಿಶ್‌ ಮಾಡಬೇಕೆಂದು ಒಂದು ಉಪಾಯ ಮಾಡಿ ಸಕಲ ಸಿದ್ಧತೆ ಮಾಡಿಕೊಂಡೇ ಅಂದು ಕಾಲೇಜಿಗೆ ಹೋಗಿದ್ದೆವು. ಸರ್‌ ಕೇಕ್‌ ಕಟ್‌ ಮಾಡಿ ಉಪಹಾರ ಸೇವಿಸುತ್ತಾ ಕುಳಿತಿದ್ದರು. ಅಲ್ಲಿಯವರೆಗೂ ನಾವಿಬ್ಬರೂ ಸರ್‌ಗೆ ವಿಶ್‌ ಕೂಡಾ ಮಾಡಿರಲಿಲ್ಲ, ಅವರಿಗೂ ಅನ್ನಿಸಿರಬೇಕು, ಯಾಕೆ ಇವರಿಬ್ಬರೂ ವಿಶ್‌ ಮಾಡುತ್ತಿಲ್ಲವೆಂದು.

ಎಲ್ಲರೂ ಉಪಾಹಾರ ಮುಗಿಸಿ ಒಂದು ಹಾಲ್‌ನಲ್ಲಿ ಕುಳಿತಿದ್ದರು. ನಾವು ಮೀಡಿಯಾ ಸ್ಟೂಡೆಂಟ್‌ಗಳಾಗಿದ್ದರಿಂದ ಫಿಲ್ಮ್ ಸ್ಟಡೀಸ್‌ಗೆಂದು ವಾರಕ್ಕೊಂದು ಫಿಲ್ಮ್ ನೋಡುತ್ತಿದ್ದೆವು. ಆ ರೀತಿಯಲ್ಲೇ ಸರ್‌ ಬಳಿ ಹೋಗಿ,- “ಸಾರ್‌, ಒಂದು ಫಿಲ್ಮ್ ನೋಡೋಣ ಬನ್ನಿ’ ಎಂದು ಅವರನ್ನು ಆ ಹಾಲ್‌ಗೆ ಕರೆತಂದೆವು. ಬಂದವರೇ “ಯಾವ ಫಿಲ್ಮ್? ಯಾರು ಡೈರೆಕ್ಟರ್‌? ಯಾರು ಹೀರೋ?’ ಎಂದರು. ಆ ಮಾತಿಗೆ ನಾವು “ಇವತ್ತಿನ ಫಿಲಂ ಹೀರೋ ನೀವೇ ಸಾರ್‌…’ ಎಂದು ವಿಡಿಯೋ ಪ್ಲೇ ಮಾಡಿದೆವು.

ವಿಡಿಯೋದಲ್ಲಿ ಚಿಕ್ಕ ವಯಸ್ಸಿನ ಹುಡುಗನೊಬ್ಬನ ಹಳೇ ಬ್ಲಾಕ್‌ ಅಂಡ್‌ ವೈಟ್‌ ಫೋಟೋಗಳು ಬರುತ್ತಿದ್ದಂತೆ ಅವರಿಗೆ ತಿಳಿದು ಹೋಯಿತು; ಇದು ತನ್ನ ಫೋಟೋ ಎಂದು. ಏನು ನಡೆಯುತ್ತಿದೆಯೆಂದು ಯೋಚಿಸುವಷ್ಟರಲ್ಲಿ ವಿಡಿಯೋದಲ್ಲಿ ಪ್ರ„ಮರಿ ಸ್ಕೂಲ್‌ನಿಂದ ಪಿ.ಎಚ್‌.ಡಿ ವರೆಗಿನ ಅವರಿಗೆ ಪಾಠ ಹೇಳಿದ ನೆಚ್ಚಿನ ಶಿಕ್ಷಕರು, ಉಪನ್ಯಾಸಕರು, ಪೊ›ಫೆಸರ್‌ಗಳು, ಗೈಡ್‌ ಅವರ ಕುರಿತಾಗಿ ಮೆಚ್ಚುಗೆಯ ಮಾತನಾಡಿದ್ದ ದೃಶ್ಯಗಳು ಬಂದವು. ಅವರ ಬಾಲ್ಯದ ಗೆಳೆಯರು ಅವರ ಜೊತೆಗೆ ಮಾಡಿದ ತರಲೆಗಳು, ಅಂದಿನ ಕಾಲದ ಅವರ ಸವಿನೆನಪುಗಳನ್ನು ಹಂಚಿಕೊಂಡರು.

Advertisement

ವಿಡಿಯೋ ಮುಂದುವರೆದು ಅವರ ಪ್ಯಾಮಿಲಿಯವರು ಮಾತನಾಡುವಾಗ, ಅವರ ತಂದೆ ಹಿಂದಿನ ಯಾವುದೋ ಕಾರಣಕ್ಕೆ ಅವರಿಗೆ ಬೇಸರ ತಂದಿದ್ದನ್ನು ನೆನೆದು ಕ್ಷಮೆ ಕೇಳುತ್ತಿದ್ದಂತೆ ನಮ್ಮ ಸರ್‌ ಕಣ್ಣು ಒದ್ದೆಯಾದವು. ಅವರ 90 ವರ್ಷದ ತಾತ ಇಂಗ್ಲಿಷ್‌ನಲ್ಲಿ “ಹ್ಯಾಪಿ ಬರ್ತ್‌ಡೇ ಟು ಯು ಮೈ ಡಿಯರ್‌’ ಎಂದು ವಿಶ್‌ ಮಾಡಿದಾಗ ಅವರನ್ನೂ ಸೇರಿ ಎಲ್ಲರೂ  ನಗೆಗಡಲಲ್ಲಿ ತೇಲಿದರು. ವಿಡಿಯೋದಲ್ಲಿ ಸರ್‌ನ ಕೈಕೆಳಗೆ ಓದಿ ಉತ್ತಮ ಜೀವನ ರೂಪಿಸಿಕೊಂಡ ಅವರ ಹಳೆಯ ವಿದ್ಯಾರ್ಥಿಗಳು ಮತ್ತು ಅವರ ಇಂದಿನ ಕೊಲೀಗ್ಸ್‌ ಅವರಿಗೆ ವಿಶ್‌ ಮಾಡಿದರು. ಜೊತೆಗೆ ಅವರ ಕುರಿತಾದ ಒಂದಿಷ್ಟು ವಿಶೇಷ ಅಂಶಗಳು, ಅವರ ಸಾಧನೆಗಳು ಅದರಲ್ಲಿದ್ದವು.

ಎಲ್ಲರೂ ಆ ವಿಡಿಯೋವನ್ನು ನೋಡುತ್ತಿದ್ದರೆ ನಾವು ಅವರನ್ನೇ ನೋಡುತ್ತಾ ಕುಳಿತಿದ್ದೆವು. ವಿಡಿಯೋದಲ್ಲಿ ಒಬ್ಬರಾದ ಮೇಲೆ ಒಬ್ಬರು ಬರುತ್ತಿದ್ದಂತೆ ಅವರ ಮುಖದಲ್ಲಿ ಕಾಣಿಸುತ್ತಿದ್ದ ಕುತೂಹಲ, ಆಶ್ಚರ್ಯ, ಸಂತೋಷ ನಮ್ಮ ಒಂದು ತಿಂಗಳ ಶ್ರಮಕ್ಕೆ ಸಾರ್ಥಕತೆ ನೀಡಿದವು.ವಿಡಿಯೋ ಮುಗಿದ ಮೇಲೆ ನಾವು ವಿಶ್‌ ಮಾಡಲು ಮುಂದಾದಾಗ “ಹೇಗೆ ಮಾಡಿದಿರೋ ಇವನ್ನೆಲ್ಲಾ? ಒಂದಿಷ್ಟೂ ಸುಳಿವು ನೀಡಲಿಲ್ಲ ನನಗೆ. ಎಲ್ಲಿ ಹುಡುಕಿದಿರೀ ಅವರನ್ನೆಲ್ಲಾ’ ಎಂದು ಸಂತಸ ಪಟ್ಟರು.

ವಿಡಿಯೋದಲ್ಲಿ ಮಾತನಾಡಿದವರಿಗೆಲ್ಲಾ, ಅದನ್ನು ತೋರಿಸುವವರೆಗೂ ದಯವಿಟ್ಟು ಸರ್‌ಗೆ ಫೋನ್‌ ಮಾಡಿ ವಿಶ್‌ ಮಾಡಬೇಡಿ ಎಂದು ಮೊದಲೇ ಮನವಿ ಮಾಡಿಕೊಂಡಿದ್ದೆವು. ಆನಂತರ ಮನೆಯವರು, ಪ್ರಂಡ್ಸ್‌ ಫೋನ್‌ಗಳು ಬರತೊಡಗಿದವು. ಎಲ್ಲರ ಸಂದರ್ಶನ ಮಾಡಲು 
ನಾವು ಅವರ ಊರಿಗೆ ಹೋಗಿದ್ದು ಅಲ್ಲಿ ಎಲ್ಲರನ್ನೂ ಹುಡುಕಿದ್ದು, ನಾವು ಪಟ್ಟ ಪಾಡನ್ನೆಲ್ಲಾ ಫೋನ್‌ ಮಾಡಿದ ಪರಿಚಿತರು ಹೇಳಿದರು.

ಅಂದು ಸಂಜೆ ನನ್ನ ಮೊಬೈಲ್‌ಗೆ ನಮ್ಮ ಸರ್‌ನ ನಂಬರ್‌ನಿಂದಒಂದು ಮೆಸೇಜ್‌ ಬಂತು. ಅದರಲ್ಲಿ “Thank  you. You made my day wonderfull. I never forget your effort. Thanks a lot once again’  ಎಂದಿತ್ತು. ಇಂದಿಗೂ ಆ ಮೆಸೇಜ್‌ಅನ್ನು ಡಿಲೀಟ್‌ ಮಾಡದೇ ಹಾಗೆಯೇ ಇಟ್ಟುಕೊಂಡಿರುವೆ…

– ಜಯಪ್ರಕಾಶ್‌ ಬಿರಾದಾರ್‌, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next