Advertisement

ಮನೋಸ್ಥೈರ್ಯದ ಶಿಕ್ಷಣ ಇಂದಿನ ಅಗತ್ಯ

12:27 PM May 01, 2019 | Team Udayavani |

ದ್ವಿತೀಯ ಪಿಯುಸಿ ಫ‌ಲಿತಾಂಶ ಹೊರಬಿದ್ದ ಸಂದರ್ಭ, ಎಲ್ಲ ವಿಷಯಗಳಲ್ಲಿಯೂ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಕನ್ನಡದಲ್ಲಿ ಅನುತ್ತೀರ್ಣಳಾದಳು ಎಂಬ ಕಾರಣವನ್ನಿಟ್ಟುಕೊಂಡು ಹಿಂದು- ಮುಂದು ಯೋಚಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಎಲ್ಲ ವಿಷಯಗಳಲ್ಲಿಯೂ ಉತ್ತಮ ಅಂಕ ಪಡೆದ ತನಗೆ ಕನ್ನಡದಲ್ಲಿ ಕಡಿಮೆ ಅಂಕ ಬಂದದ್ದು ಕಣ್ತಪ್ಪಿನಿಂದ ಆಗಿರಬಹುದೇ ಅಥವಾ ತಾಂತ್ರಿಕ ದೋಷಗಳಿರಬಹುದೇ ಎನ್ನುವುದನ್ನು ಯೋಚಿಸುವಷ್ಟು ವ್ಯವಧಾನವೂ ಆ ಹುಡುಗಿಯಲ್ಲಿ ಸುಳಿದಿಲ್ಲ ಎಂದಾದರೆ ಯೋಚಿಸಿ, ಮಕ್ಕಳನ್ನು ನಾವು ಪುಸ್ತಕದ ಹುಳುಗಳನ್ನಾಗಿ ಅಥವಾ ಕೇವಲ ಅಂಕ ಪಡೆಯುವುದಷ್ಟೇ ಬದುಕಿನ ಪರಮೋಚ್ಛ ಗುರಿ ಎಂಬಂತೆ ಬೆಳೆಸುತ್ತಿರುವುದು ಸರಿಯೇ ಎಂದು. ಜೀವ, ಜೀವನ ಪ್ರೀತಿಯನ್ನು ಬೆಳೆಸುವುದನ್ನು ಬಿಟ್ಟು ಕೇವಲ ಅಂಕದ ವಿಚಾರಕ್ಕೆ ಬದುಕನ್ನೇ ಮುಗಿಸಿಕೊಳ್ಳುವ ಮಕ್ಕಳ ಮನಸ್ಸಿನ ಮೇಲೆ ಹಿರಿಯರು ಹೇರುವ ಒತ್ತಡ ಎಷ್ಟರ ಮಟ್ಟಿಗೆ ದುಷ್ಪರಿಣಾಮನ್ನು ಬೀರುತ್ತಿದೆ ಎಂದು.

Advertisement

ಶಿಕ್ಷಣ ಅಂದ ಕೂಡಲೇ ಶಾಲೆ, ಪಠ್ಯಗಳಷ್ಟೇ ನಮ್ಮ ಮುಂದೆ ಬಂದು ಹೋಗುತ್ತವೆ. ಕೇವಲ ಅದಷ್ಟೇ ನಮ್ಮ ಜೀವನವನ್ನು ಬೆಳಗಬಲ್ಲದು ಎಂದು ಯೋಚಿಸುವ ಚಿತ್ತವನ್ನು ಹೊಂದಿರುವ ಸಮಾಜದ ಮಧ್ಯೆ ನಾವಿದ್ದೇವೆ. ಇಲ್ಲಿ ಜೀವನ ನಡೆಸುವುದಕ್ಕೆ ಪೂರಕವಾಗುವ ಶಿಕ್ಷಣವನ್ನು ನೀಡುವ ಶಿಕ್ಷಕರೂ ಇಲ್ಲ. ಅವುಗಳ ಬಗ್ಗೆ ಜ್ಞಾನ ಹೊಂದಿ ಜೀವನವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕಲಿತುಕೊಂಡು ಬದುಕುವ ವಿದ್ಯಾರ್ಥಿಗಳೂ ಇಲ್ಲ. ಕೇವಲ ಅಂಕ ಪಡೆಯುವ ನಿಟ್ಟಿನಲ್ಲಿ ಮಾತ್ರವೇ ಮಕ್ಕಳು, ಹೆತ್ತವರು, ಮತ್ತು ಶಿಕ್ಷಕರ ಚಿತ್ತ ನೆಟ್ಟಿರುವುದರಿಂದ ವಿದ್ಯಾರ್ಥಿಗಳು ಬದುಕಿನ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಸಂಕುಚಿತ ಮನಸ್ಥಿತಿ ಹೊಂದಿದ ಮಕ್ಕಳು ಪರೀಕ್ಷೆಯಲ್ಲಿ ನಪಾಸಾದ ಅಥವಾ ಕಡಿಮೆ ಅಂಕ ಪಡೆದ ಸಂದರ್ಭದಲ್ಲಿ ಆತ್ಮಹತ್ಯೆಯ ಮೊರೆ ಹೋಗುವ ಘಟನೆಗಳು ನಡೆಯುತ್ತವೆ.

ಇದಕ್ಕೆ ಕಾರಣ ಮಕ್ಕಳನ್ನು ನಾವು ಪರಿಪಕ್ವಗೊಳಿಸಲು ಪ್ರಯತ್ನಿಸುವಲ್ಲಿ ವೈಫ‌ಲ್ಯತೆಯನ್ನು ಕಂಡಿರುವುದು. ಕೇವಲ ಓದು ಮಾತ್ರವೇ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಕಾರಿ ಎನ್ನುವ ಸುಳ್ಳನ್ನು ತುಂಬುವ ಮೂಲಕ ಅವರನ್ನು ಕೇವಲ ಪುಸ್ತಕದ ಹುಳುಗಳಾಗಿ ಮಾಡಿರು ವುದು. ಅನುತ್ತೀರ್ಣ ಗೊಳ್ಳುವುದು ಅಥವಾ ಕಡಿಮೆ ಅಂಕ ಪಡೆಯುವುದರಿಂದ ಎಂಜಿನಿಯರ್‌, ಡಾಕ್ಟರ್‌ ಆಗದೇ ಹೋದರೆ ನಮ್ಮ ಬದುಕೇ ಮುಗಿಯಿತು ಎಂದುಕೊಳ್ಳುವವರು, ಕಲಾ ವಿಭಾಗದಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ ಕೇವಲ ವಿಜ್ಞಾನ, ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡಾಗಲಷ್ಟೇ ಉತ್ತಮ ಉದ್ಯೋಗ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಸಾಧ್ಯ ಎಂದು ತಿಳಿದುಕೊಳ್ಳುತ್ತಿರುವುದೇ ಈ ದುರಂತಗಳಿಗೆಲ್ಲ ಕಾರಣ.

ಈ ಮನಸ್ಥಿತಿಯಿಂದ ಮಕ್ಕಳನ್ನು ಹೊರ ತರಬೇಕಾದರೆ ಅವರಿಗೆ ಇತರ ಸಾಧ್ಯತೆಗಳ ಬಗ್ಗೆಯೂ ಮಾಹಿತಿ ನೀಡುವ ಕೆಲಸ ಮಾಡಬೇಕು. ಬದುಕು ರೂಪಿಸಬಲ್ಲ ಸ್ವೋದ್ಯೋಗ, ಮಾನಸಿಕ ನೆಮ್ಮದಿಗೆ ಕಾರಣವಾಗಬಲ್ಲ ಸಂಗೀತ, ನಾಟ್ಯ, ಯಕ್ಷಗಾನ ಮುಂತಾದ ಕಲಾತ್ಮಕ ರಸಗಳ ಬಗ್ಗೆಯೂ ಅವರಿಗೆ ತಿಳಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಕೆಲಸ ಮಾಡಬೇಕು. ಅದರ ಜತೆಗೆ ಕೆಎಎಸ್‌, ಐಎಎಸ್‌ ಸಹಿತ ಕಲಾ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳಿಗಿರುವ ಬೇರೆ ಬೇರೆ ಕ್ಷೇತ್ರಗಳಲ್ಲಿನ ಅವಕಾಶಗಳ ಬಗ್ಗೆ ಬೆಳಕು ತೋರಿ, ಬದುಕುವ ದಾರಿಗೆ ಬೆಳಕು ತೊರಿಸಿದಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗುವುದರಲ್ಲಿ ಸಂದೇಹವಿಲ್ಲ.

ಭುವನ ಬಾಬು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next