Advertisement

ಇಂದು ಬಜೆಟ್‌ ,ಗರಿಗೆದರಿವೆ ನಿರೀಕ್ಷೆಗಳು

12:30 AM Feb 01, 2019 | Team Udayavani |

ಬೆಂಗಳೂರು: ಚುನಾವಣಾ ಹೊಸ್ತಿಲಲ್ಲಿ ಮಂಡನೆ ಆಗುತ್ತಿರುವ ಕೇಂದ್ರ ಬಜೆಟ್‌ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿವೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ತನ್ನ ಕೊನೆಯ ಬಜೆಟ್‌ನಲ್ಲಿ ಮತದಾರರ ಓಲೈಕೆ ಕಸರತ್ತು ಕೂಡ ನಡೆಸಲಿದೆ.

Advertisement

ಇದು ಮಧ್ಯಂತರ ಬಜೆಟ್‌ ಆಗಿರುವುದರಿಂದ ರೈತರ ಸಾಲಮನ್ನಾದಂತಹ ಪ್ರಮುಖ ಘೋಷಣೆಗಳನ್ನು ಇಲ್ಲಿ ಕಾಣಲು ಸಾಧ್ಯವಾಗದಿದ್ದರೂ, ಆ ಸಾಲದ ಮೇಲಿನ ಬಡ್ಡಿಯಾದರೂ ಮನ್ನಾ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಸರಕು ಸೇವಾ ತೆರಿಗೆಗೆ ಕೈಹಾಕಲು ಆಗದಿದ್ದರೂ, ಆದಾಯ ತೆರಿಗೆ ಮಿತಿಯನ್ನು ವಿಸ್ತರಿಸುವ ಮೂಲಕ ತೆರಿಗೆದಾರರನ್ನು ಖುಷಿಪಡಿಸಬಹುದು. ಈ ನಿಟ್ಟಿನಲ್ಲಿ ಬಜೆಟ್‌ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ತಜ್ಞರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕತೆಯ ಬೆನ್ನೆಲುಬು. ಸರ್ಕಾರದ ಬೊಕ್ಕಸಕ್ಕೆ ಬರುವ ಒಟ್ಟಾರೆ ಆದಾಯದಲ್ಲಿ ಕೈಗಾರಿಕೆ ಪಾಲು ಶೇ. 30ರಷ್ಟಿದ್ದು, ಅದರಲ್ಲಿ ಶೇ. 40ರಷ್ಟು ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳದ್ದಾಗಿದೆ. ಇದರಲ್ಲಿ ರಾಜ್ಯದ ಕೊಡುಗೆಯೂ ದೊಡ್ಡದಿದೆ. ಹಾಗಾಗಿ, ಸಹಜವಾಗಿಯೇ ರಾಜ್ಯದ ಸಣ್ಣ ಕೈಗಾರಿಕೋದ್ಯಮದ ನಿರೀಕ್ಷೆಗಳು ಹೆಚ್ಚಿವೆ. ನಮಗೆ ಮುಖ್ಯವಾಗಿ ಬೇಕಾಗಿರುವುದು “ತಂತ್ರಜ್ಞಾನ ಮೇಲ್ದರ್ಜೆಗೆ ನೀಡುವ ಸಾಲದ ಸಬ್ಸಿಡಿ ನೀತಿ’ಗೆ ಮರುಚಾಲನೆ ನೀಡಬೇಕು. ಇದರಡಿ ಈ ಹಿಂದೆ ಭಾರಿ ಯಂತ್ರೋಪಕರಣ ಖರೀದಿಸುವಾಗ ನೀಡುವ ಸಾಲಕ್ಕೆ ಶೇ. 15ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಕಳೆದೆರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ)ಯ ಹಿರಿಯ ಉಪಾಧ್ಯಕ್ಷ ಸಿ.ಆರ್‌. ಜನಾರ್ದನ ತಿಳಿಸುತ್ತಾರೆ.

ಬ್ಯಾಂಕ್‌ಗಳಲ್ಲಿ ಶೇ. 8.5ರಷ್ಟು ಬಡ್ಡಿದರದಲ್ಲಿ ಗೃಹ ಸಾಲ ನೀಡಲಾಗುತ್ತಿದೆ. ಇದೇ ಬಡ್ಡಿದರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಸಾಲ ಯಾಕೆ ನೀಡುವುದಿಲ್ಲ. ಅಷ್ಟೇ ಅಲ್ಲ, ನಮಗೆ ನೀಡಿದ ಸಾಲದಲ್ಲಿ ಶೇ. 97ರಷ್ಟು ಸಾಲ ಮರುಪಾವತಿ ಆಗುತ್ತದೆ. ಸೆಕ್ಯುರಿಟಿ ಇದ್ದರೂ ಯಾಕೆ ಸಾಲ ಕೊಡುವುದಿಲ್ಲ ಅಂತಾರೆ? ಶುಕ್ರವಾರ ಮಂಡನೆ ಆಗಲಿರುವ ಬಜೆಟ್‌ನಲ್ಲಿ ಉತ್ತರ ಎದುರುನೋಡುತ್ತಿದ್ದೇವೆ.

ಜಿಲ್ಲೆಗೊಂದು ಕ್ಲಸ್ಟರ್‌ಗಳನ್ನು ರೂಪಿಸಬೇಕು. ಇದರಿಂದ ಪ್ರೋತ್ಸಾಹಧನ ಸಿಗುತ್ತದೆ. ಸಣ್ಣ ಕೈಗಾರಿಕೋದ್ಯಮದ ವೃದ್ಧಿಗೆ ಇದು ದೊಡ್ಡ ಕೊಡುಗೆ ಆಗಲಿದೆ. ಗುಣಮಟ್ಟ ಸುಧಾರಣೆ ಆಗುತ್ತದೆ. ಆವಿಷ್ಕಾರದ ಮಂತ್ರ ಜಪಿಸಿದರೂ ಸಂಶೋಧನೆಗೆ ಆದ್ಯತೆ ಸಿಕ್ಕಿಲ್ಲ. ಕೌಶಲ್ಯಾಭಿವೃದ್ಧಿ ಸಚಿವರು ನಮ್ಮವರೇ ಆಗಿದ್ದರೂ, ನಿರೀಕ್ಷೆಗಳು ಹುಸಿಯಾಗಿವೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂಬ ನಿಯಮದಿಂದ ಸಣ್ಣ ಕೈಗಾರಿಕೆಗಳನ್ನು ಹೊರಗಿಡಬೇಕು. ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಸೇರಿದಂತೆ ಹಲವು ನಿರೀಕ್ಷೆಗಳಿವೆ ಎಂದು ಜನಾರ್ದನ ಹೇಳಿದರು.

Advertisement

“ಸ್ಟಾರ್ಟ್‌ಅಪ್‌ಗ್ಳಿಗೆ ಒತ್ತು ಕೊಡಲಿ’
ದೇಶದ ಆರ್ಥಿಕತೆಯಲ್ಲಿ ಸ್ಟಾರ್ಟ್‌ಅಪ್‌ಗ್ಳು ಗಮನಾರ್ಹ ಪಾತ್ರ ನಿರ್ವಹಿಸುತ್ತಿವೆ. ಇವುಗಳನ್ನು ಸೆಳೆಯಲು ಷೇರು ಬಂಡವಾಳ ಹೂಡಿಕೆಗೆ ಪೂರಕ ಯೋಜನೆಗಳನ್ನು ಘೋಷಿಸಬೇಕು. ವೈಯಕ್ತಿಕ ತೆರಿಗೆ ವಿನಾಯ್ತಿ ಎರಡೂವರೆ ಲಕ್ಷ ರೂ. ಇದೆ. ಇದರ ಮಿತಿಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಇದರಿಂದ ಹೆಚ್ಚು ಹೂಡಿಕೆ ನಿರೀಕ್ಷಿಸಬಹುದು. ಅಂತಿಮವಾಗಿ ಇದು ಸರ್ಕಾರಕ್ಕೂ ಆದಾಯ ತಂದುಕೊಡಲಿದೆ ಎಂದು ಆರ್ಥಿಕ ತಜ್ಞ ಎನ್‌. ನಿತ್ಯಾನಂದ ವಿಶ್ಲೇಷಿಸುತ್ತಾರೆ.

ಮಧ್ಯಂತರ ಬಜೆಟ್‌ ಇದಾಗಿರುವುದರಿಂದ ಮುಂದಿನ ಮೂರ್‍ನಾಲ್ಕು ತಿಂಗಳಿಗೆ ಮಾಡಬಹುದಾದ ಖರ್ಚು-ವೆಚ್ಚಗಳ ಅಂದಾಜು ಇಲ್ಲಿ ಇರುತ್ತದೆ. ಹಾಗಾಗಿ, ಪ್ರಮುಖ ಘೋಷಣೆಗಳನ್ನು ಇಲ್ಲಿ ನಿರೀಕ್ಷಿಸಲಾಗದು. ಆದರೆ, ಜನಸಾಮಾನ್ಯರ ಹಿತದೃಷ್ಟಿಯಿಂದ ಆದಾಯ ತೆರಿಗೆ ವಿನಾಯ್ತಿ ಪ್ರಮಾಣ ವಿಸ್ತರಿಸಬಹುದು. ಹಿರಿಯ ನಾಗರಿಕರಿಗೆ ಇರುವ ತೆರಿಗೆ ವಿನಾಯ್ತಿ ಮಿತಿಯನ್ನೂ ವಿಸ್ತರಿಸಿದರೆ ಉತ್ತಮ. ಇದೆಲ್ಲವೂ ಪಿಂಚಣಿ, ಭವಿಷ್ಯನಿಧಿಯಂತಹ ವಿವಿಧ ರೂಪದಲ್ಲಿ ಪುನಃ ಸರ್ಕಾರದ ಬೊಕ್ಕಸಕ್ಕೆ ಹರಿದುಬರುತ್ತದೆ ಎಂದು ತೆರಿಗೆ ತಜ್ಞ ಬಿ.ಟಿ. ಮನೋಹರ್‌ ಅಭಿಪ್ರಾಯಪಡುತ್ತಾರೆ.

ಆದಾಯ ದುಪ್ಪಟ್ಟಿಗೆ ಬೇಕು ಯೋಜನೆ
ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಈ ಹಿಂದೆಯೇ ಘೋಷಿಸಿದೆ. ಈಗ ಅದಕ್ಕೆ ಪೂರಕವಾದ ಯೋಜನೆಗಳನ್ನು ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ. ಸಮಗ್ರ ಕೃಷಿ ರೈತನ ಬದುಕಿಗೆ ಆಸರೆ ಆಗಬಲ್ಲದು ಎಂಬುದು ಈಗಾಗಲೇ ಸಾಬೀತಾಗಿದೆ. ಇದನ್ನು ಒಂದು ಮಿಷನ್‌ ರೀತಿಯಲ್ಲಿ ಕೊಂಡೊಯ್ಯಬೇಕು. ಈ ಮಾದರಿಗೆ ಮುಖ್ಯವಾಗಿ ಬೇಕಾಗಿರುವುದು ನೀರಿನ ಸೌಲಭ್ಯ. ಕೃಷಿ ಹೊಂಡದಂತಹ ಕಾರ್ಯಕ್ರಮಗಳನ್ನು ಘೋಷಿಸುವ ಅವಶ್ಯಕತೆ ಇದೆ. ಅಲ್ಲದೆ, ಈಗಾಗಲೇ ಇರುವ ಗ್ರಾಮ ಸಡಕ್‌ ಯೋಜನೆ, ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಸೇರಿದಂತೆ ಹತ್ತುಹಲವು ಯೋಜನೆಗಳನ್ನು ಫ‌ಲಾನುಭವಿಗಳ ಮನೆಬಾಗಿಲಿಗೆ ಕೊಂಡೊಯ್ಯಲು ಸಂಯೋಜಕರನ್ನು ನೇಮಿಸುವ ಅವಶ್ಯಕತೆ ಇದೆ ಎಂದು ಸಾಮಾಜಿಕ-ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಜಿ. ಚಂದ್ರಕಾಂತ್‌ ಹೇಳುತ್ತಾರೆ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next