Advertisement

ಆಧುನಿಕ ಕೃಷಿಯಲ್ಲಿ ಸ್ಮಾರ್ಟ್ ತಂತ್ರಜ್ಞಾನಗಳ ಬಳಕೆ

07:47 PM May 17, 2021 | ಶ್ರೀರಾಜ್ ವಕ್ವಾಡಿ |

ಕೋವಿಡ್ ಲಗ್ಗೆಯ ಬಳಿಕ ಸಮಸ್ತವೂ ವರ್ಚುವಲ್‌ ಜಗತ್ತಿನತ್ತ ಹೊರಳುತ್ತಿದೆ. ಶಾಲಾ ತರಗತಿಗಳು ಮಾತ್ರವಲ್ಲ ಕೃಷಿ ಮೇಳವೂ  ವರ್ಚುವಲ್‌ ರೂಪ ತಾಳುವಷ್ಟು ಮಾಹಿತಿ ತಂತ್ರಜ್ಞಾನದ ಅನಿವಾರ್ಯತೆ ಆವರಿಸಿದೆ.

Advertisement

ಇತ್ತೀಚಿಗೆ ಟಿವಿ ಚಾನಲ್ ಗಳು, ಯೂಟ್ಯೂಬ್ ಚಾನಲ್ ಗಳನ್ನು ಹಿಂದಿಕ್ಕಿ ಮೊಬೈಲ್ ಆ್ಯಪ್ ಗಳು ಕೃಷಿಯ ರೂಪವನ್ನು ಬದಲಿಸಲು ಹೊರಟಿವೆ.

2011ರಲ್ಲಿ 50 ಲಕ್ಷವಿದ್ದ ಸ್ಮಾರ್ಟ್ ಫೋನ್ ಸಂಖ್ಯೆ ಇಂದಿಗೆ 40 ಕೋಟಿ ದಾಟಿದೆ ಎನ್ನುತ್ತದೊಂದು ಅಂಕಿ ಅಂಶ. ಈ ಸಂಖ್ಯೆ ಬರುವ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಹೆಚ್ಚಾಗಲಿದೆ. ಅಲ್ಲದೆ  ಭಾರತದಲ್ಲಿ ಅತ್ಯಂತ ಅಗ್ಗವಾಗಿ ಮೊಬೈಲ್ ಡಾಟಾ ಸಿಗುತ್ತಿದೆ. ಇವೆರಡನ್ನೂ ಭಾರತ ರೂರಲ್ ಇಂಡಿಯಾದ ಅಭಿವೃದ್ಧಿಗೆ ಸರಿಯಾಗಿ ಬಳಸಿದ್ದೇ ಆದರೆ ಭಾರತದ ರೈತರ ಆದಾಯ 2022-23 ರ ವೇಳೆಗೆ ದುಪ್ಪಟ್ಟು ಆಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಜಿಐಎಸ್ ಆಧಾರಿತ ಕೃಷಿ:

ಆಧುನಿಕ ರೈತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಜಿಐಎಸ್ ಸಾಫ್ಟ್ ವೇರ್ ಗಳನ್ನು ಪರಿಚಯಿಸಲಾಗಿದೆ. ಇದರ ಮುಖಾಂತರ ಮಳೆ, ತಾಪಮಾನ, ಬೆಲೆ ಇಳುವರಿ, ಸಸ್ಯ ಆರೋಗ್ಯ ಹಾಗೂ ಭವಿಷ್ಯದ  ಕೃಷಿ ಕ್ಷೇತ್ರದ  ಬದಲಾವಣೆಗಳ ನಕ್ಷೆಯನ್ನು ತಯಾರಿಸಲು ರೈತರಿಗೆ ಸಹಕಾರಿಯಗಲಿದೆ. ಇದರಿಂದ  ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ಸ್ಮಾರ್ಟ್ ಯಂತ್ರೋಪಕರಣಗಳಿಗೆ ಅನುಗುಣವಾಗಿ ಜಿಪಿಎಸ್ ಆಧಾರಿತ ಅಪ್ಲಿಕೇಶನ್ ಬಳಕೆ ಮಾಡಲು ಸಾಧ್ಯ. ಈ ತಂತ್ರಜ್ಞಾನದಿಂದ ಒಬ್ಬ ಕೃಷಿಕ ತನ್ನ ಜಮೀನಿನ ಯಾವ ಭಾಗದಲ್ಲಿ ಯಾವ ತೊಂದರೆ ಇದೆ ಎಂಬುದನ್ನು ಗಮನಿಸಿ ಅದಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

Advertisement

ಉಪಗ್ರಹಗಳಿಂದ ಡಾಟಾ ಸಂಗ್ರಹಣೆ:

ಸಾಮಾನ್ಯವಾಗಿ ಕೃಷಿ ಜಮೀನು ಮತ್ತು ಬೆಳೆಯಲ್ಲಾಗುವ ಬದಲಾವಣೆಗಳನ್ನು ಆಗಿಂದಾಗ್ಗೆ ಗಮನಿಸುವುದರಿಂದ ಉಪಗ್ರಹಗಳ ಮೇಲ್ವಿಚಾರಣೆಯು ಅಷ್ಟೊಂದು ಚಾಲ್ತಿಯಲ್ಲಿಲ್ಲ. ಆದರೆ ಉಪಗ್ರಹಗಳಿಂದ ಡಾಟಾ ಸಂಗ್ರಹಣೆ ಸುಲಭ ಕಾರ್ಯವಲ್ಲ. ಮಣ್ಣಿನ ಪರಿಸ್ಥಿತಿ, ಹವಾಮಾನ ಮತ್ತು ಭೂಪ್ರದೇಶದ ಬಗ್ಗೆ ಅಮೂಲ್ಯವಾದ ದತ್ತಾಂಶವನ್ನು ಸಂಗ್ರಹಿಸಲು ಉಪಗ್ರಹಗಳು ಮತ್ತು ಡ್ರೋನ್‌ ಗಳನ್ನು ಬಳಸಲಾಗುತ್ತದೆ.

ಉಪಗ್ರಹದಿಂದ ಪಡೆದ ಇಮೇಜ್ ಡಾಟಾ ಮೂಲಕ ಇಳುವರಿಯನ್ನು ಹೆಚ್ಚಿಸಲು ಅಗತ್ಯವಾದ  ನಾರ್ಮಲೈಸ್ಡ್ ಡಿಫರೆನ್ಸ್ ವೆಜಿಟೇಶನ್ ಇಂಡೆಕ್ಸ್ (ಎನ್‌ ಡಿ ವಿ ಐ)ನನ್ನು ತಿಳಿದುಕೊಳ್ಳಬಹುದು. ಸಸ್ಯವರ್ಗಗಳು, ಸಸ್ಯಗಳ ಪ್ರಮಾಣ ಮತ್ತು ಒಟ್ಟಾರೆ ಸಸ್ಯದ ಆರೋಗ್ಯವನ್ನು ಕಂಡುಹಿಡಿಯಲು ಎನ್‌ ಡಿ ವಿ ಐ ನಿಂದ ಸಾಧ್ಯ.

ಸಸ್ಯಕ್ಕೆ ಅಗತ್ಯ ಪ್ರಮಾಣದ  ಪೌಷ್ಠಿಕಾಂಶದ ಅಂಕಿ ಅಂಶಗಳನ್ನು   ಕ್ಲೋರೊಫಿಲ್ ಕಂಟೆಂಟ್ ಇಂಡೆಕ್ಸ್  (ಸಿಸಿಸಿಐ)ಮುಖಾಂತರ ತಿಳಿಯಬಹುದು. ವಿವಿಧ ಹಂತಗಳಲ್ಲಿ ಸಸ್ಯದ ಬೆಳವಣಿಗೆ ಮಣ್ಣಿನ ಫಲವತ್ತತೆಯನ್ನು ತಿಳಿದುಕೊಳ್ಳಲು ಈ ತಂತ್ರಜ್ಞಾನವನ್ನು  ವಿನ್ಯಾಸಗೊಳಿಸಲಾಗಿದೆ.

ಕೃಷಿಯಲ್ಲಿ ಡ್ರೋನ್ ಬಳಕೆ:

ಡ್ರೋನ್‌ ಗಳ ಸಹಾಯದಿಂದ ರೈತರಿಗೆ ಬೆಳೆರಾಶಿ, ಸಸ್ಯಗಳ ಎತ್ತರ, ಕಳೆಗಳ ಇರುವಿಕೆ ಮತ್ತು  ನೀರಿನ ಶುದ್ಧತೆಯ ಮಾಹಿತಿಯನ್ನು ನಿಖರವಾಗಿ ಪಡೆಯಲು ಸಾಧ್ಯ.  ಉಪಗ್ರಹಗಳಿಗೆ ಹೋಲಿಸಿದರೆ ಹೆಚ್ಚಿನ ರೆಸಲ್ಯೂಶನ್‌ನೊಂದಿಗೆ ಉತ್ತಮ ಮತ್ತು  ಸ್ಪಷ್ಟ ಡಾಟಾವನ್ನು ಡ್ರೋನ್ ಮೂಲಕ ಪಡೆಯಬಹುದು. ವಿಸ್ತಾರವಾದ ಕೃಷಿ ಜಮೀನಿಗೆ ಕೀಟನಾಶಕ ಅಥವಾ ರಾಸಾಯನಿಕಗಳ ಸಿಂಪಡನೆಗೂ ಡ್ರೋನ್ ಬಳಕೆ ಮಾಡಬಹುದು. ಆದರೆ ಡ್ರೋನ್ ಗಳು ಅಗ್ಗವಾಗಿಲ್ಲದೇ ಇರುವುದರಿಂದ ಇದು ಕೃಷಿಕರಿಗೆ ಸವಾಲಾಗಿದೆ.

ಸ್ಕೌಟಿಂಗ್ ಅಪ್ಲಿಕೇಶನ್ :

ರೈತರಿಗೆ ತಮ್ಮ ಕೃಷಿಯ ವೀಕ್ಷಣೆಯನ್ನು ಸರಳೀಕರಿಸಲು, ಇಒಎಸ್ ಕ್ರಾಪ್ ಮಾನಿಟರಿಂಗ್ ನನ್ನು ವಿನ್ಯಾಸಗೊಳಿಸಿದೆ. ಇದು ಡಿಜಿಟಲ್ ಪ್ಲಾಟ್‌ ಫಾರ್ಮ್ ಆಗಿದ್ದು, ಉಪಗ್ರಹದ ಕಾರ್ಯವನ್ನು  ಬಳಸಿಕೊಳ್ಳುತ್ತದೆ.   ಕ್ರಾಪ್ ಮಾನಿಟರಿಂಗ್  ಬೆಳೆ ಆರೋಗ್ಯವನ್ನು ಪತ್ತೆಹಚ್ಚಲು ಬೇಕಾದ ಎನ್‌ ಡಿ ವಿ ಐ ಹಾಗೂ  ಕ್ಲೋರೊಫಿಲ್ ಪ್ರಮಾಣವನ್ನು ನಿರ್ಧರಿಸಲು ಸಹಾಯಕವಾಗಿದೆ. ಎನ್‌ ಡಿ ವಿ ಐ ಸೂಚ್ಯಂಕ ಹೆಚ್ಚಿದ್ದರೆ  ಆರೋಗ್ಯಕರ ಸಸ್ಯವರ್ಗವಿದೆ ಎಂದರ್ಥ. ಏಕೆಂದರೆ ಸಸ್ಯಕ್ಕೆ ಹೆಚ್ಚು ಕ್ಲೋರೊಫಿಲ್ ಲಭ್ಯವಿರುವುದರಿಂದ ಅದು ಆರೋಗ್ಯಕರವಾಗಿರುತ್ತದೆ. ಬೆಳೆ ಮಾನಿಟರಿಂಗ್‌ ನ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಸ್ಕೌಟಿಂಗ್ ಅಪ್ಲಿಕೇಶನ್. ಇದು ಡಿಜಿಟಲ್ ಫೀಲ್ಡ್ ನಕ್ಷೆಗಳನ್ನು ಬಳಸುವ ಮೊಬೈಲ್ ಮತ್ತು ಡೆಸ್ಕ್‌ ಟಾಪ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಬಳಸುವಾಗ ರೈತನಿಗೆ  ಸಮಸ್ಯೆಯ ಪ್ರದೇಶಗಳನ್ನು ಪರಿಶೀಲನೆ, ಕೀಟಗಳ ಉಪಟಳದ ನಿರ್ವಹಣೆ, ಕಳೆ ನಿರ್ವಹಣಾ ಚಟುವಟಿಕೆಗಳ ಡಾಟಾವನ್ನು ತಕ್ಷಣ ಅಪ್ಲಿಕೇಶನ್‌ ನಲ್ಲಿ ದಾಖಲಿಸಬಹುದಾಗಿದೆ.  ಇದರಿಂದ ಅಗತ್ಯವಿದ್ದಾಗ ಮಾತ್ರ ಸಮಸ್ಯೆಯನ್ನು ಪರೀಕ್ಷಿಸಲು ಅನುವು ಆಗುತ್ತದೆ.  ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಸಾಕಷ್ಟು ಸಮಯವನ್ನು ಉಳಿತಾಯ ಮಾಡಬಹುದು. ಉಪಗ್ರಹ ಚಿತ್ರಣದಿಂದ ಪಡೆದ ಸಸ್ಯ ಸ್ಥಿತಿಯ ದತ್ತಾಂಶಕ್ಕೆ ಅನುಗುಣವಾಗಿ ಹವಾಮಾನ ವಿಶ್ಲೇಷಿಸುವ ಮೂಲಕ, ರೈತರು ನೀರಾವರಿಯನ್ನು ನಿಖರವಾಗಿ ಯೋಜಿಸಬಹುದು. ಈ ಅಪ್ಲಿಕೇಶನ್ ಮೂಲಕ ಕೃಷಿ ಪ್ರದೇಶದ  ಸ್ಥಿತಿಯನ್ನು ವಿಶ್ಲೇಷಿಸಲು ಹಾಗೂ ಮಾಹಿತಿಯನ್ನು ಕಲೆ ಹಾಕಲು ಸಾಧ್ಯ.

ಕೃಷಿ ಉತ್ಪಾದಕತೆ ಹೆಚ್ಚಿಸಲು ಹಾಗೂ  ಸಮರ್ಥನೀಯ, ಲಾಭದಾಯಕ ವಾಗಿಸಲು, ಜತೆಗೆ ಕಾಂಪೋಸಿಟ್ ಫಾರ್ಮಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಅಗತ್ಯ.

ಸೂಕ್ತ ಮಣ್ಣು ಮತ್ತು ತೇವಾಂಶ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದರ  ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಕೃಷಿ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳುತ್ತಿವೆ.

ದುರ್ಗಾ ಭಟ್ ಕೆದುಕೋಡಿ

Email : durgabhat99@gmail.com

Advertisement

Udayavani is now on Telegram. Click here to join our channel and stay updated with the latest news.

Next