Advertisement

ನಾಗರಿಕ ಸಾತಂತ್ರ್ಯಕ್ಕೆ  ಮಾನವ ಹಕ್ಕುಗಳು ಮುನ್ನುಡಿಯಾಗಲಿ 

10:00 AM Dec 10, 2018 | |

ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಇಂದು ಜಗತ್ತಿನಾದ್ಯಂತ ‘ಮಾನವ ಹಕ್ಕುಗಳನ್ನು  ಬೆಂಬಲಿಸೋಣಾ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ. ಇನ್ನೋರ್ವರ ಸ್ವಾತಂತ್ರವನ್ನು ಗೌರವಿಸಿ, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಿಲು ಈ ದಿನದ ಸಂದೇಶ ಪೂರಕವಾಗಲಿ ಎಂಬುದೇ ಸದಾಶಯ.

Advertisement

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಪ್ರಜೆಯೂ ತೊಟ್ಟಿಲಿನಿಂದ ಘೋರಿಯವರೆಗೂ ಅಂದರೆ ಹುಟ್ಟಿನಿಂದ ಸಾಯುವವರೆಗೂ ಸ್ವತಂತ್ರವಾಗಿ ಜೀವಿಸಲು ಹಕ್ಕು ಬಾಧ್ಯತೆಗಳನ್ನು ಸಂವಿಧಾನದ ಕಾನೂನಿನಯಡಿಯಲ್ಲಿ ಪಡೆದಿರುತ್ತಾನೆ. ಈ ಹಕ್ಕುಗಳಲ್ಲಿ ಮೂಲಭೂತ ಹಕ್ಕುಗಳು, ರಾಜನಿರ್ದೇಶಕ ತಣ್ತೀಗಳು ಹಾಗೂ ಮಾನವ ಹಕ್ಕುಗಳು.

ಪ್ರಮುಖವಾಗಿ ಜಗತ್ತಿನಾದ್ಯಂತ ಹಲವು ಬಾರಿ ಚರ್ಚೆಗೊಳಪಡುವುದು ಎಂದರೆ ಅದು ಮಾನವ ಹಕ್ಕುಗಳು. ದೇಶದ ಯಾವುದೋ ಮೂಲೆಯೊಂದರಲ್ಲಿ ಜೀವವಿರೋಧಿ ಘಟನೆ ಸಂಭವಿಸಿದಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬೀದಿಗಿಳಿದು ಪ್ರತಿಭಟಿಸಿ, ನ್ಯಾಯಕ್ಕಾಗಿ ಅವಲತ್ತುಕೊಳ್ಳುತ್ತೇವೆ. ಮಾನವ ಹಕ್ಕುಗಳೆಂದರೆ ಬೇರೆ ಏನಿಲ್ಲ, ನಮ್ಮ ದೇಶ ದ ಸಂವಿಧಾನ ನೀಡಿರುವ ಜೀವಿಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ, ರಾಷ್ಟ್ರೀಯತೆ ಪ್ರತಿಪಾದನೆ ಹಾಗೂ ಇನ್ನಿತರ ಹಕ್ಕುಗಳು.

ಜಗತ್ತಿನಲ್ಲಿ ಎರಡನೇ ಮಹಾಯುದ್ಧದ ತರುವಾಯ ವಿಶ್ವ ಶಾಂತಿಗಾಗಿ ಉದಯಿಸಿದ ವಿಶ್ವಸಂಸ್ಥೆಯೂ ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಕಾರಣಕ್ಕಾಗಿ ಮಾನವ ಹಕ್ಕುಗಳನ್ನು 1948ರಲ್ಲಿ ಘೋಷಿಸಲಾಯಿತು. ಬಳಿಕ ಜಗತ್ತಿನಾದ್ಯಂತ ವಿಶ್ವಸಂಸ್ಥೆ ಹೊರಡಿಸಿದ ಮಾನವ ಹಕ್ಕುಗಳನ್ನು ಪಾಲನೆ ಮಾಡಲಾಗುತ್ತಿದೆ.

1948 ಡಿಸೆಂಬರ್‌ 10ರಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಮಹಾಅಧಿವೇಶನದಲ್ಲಿ ಮಾನವ ಹಕ್ಕುಗಳ ಬಗ್ಗೆ ಪ್ರಸ್ತಾವಿಸಲಾಯಿತು. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರ ಜೀವಿಸುವ ಹಕ್ಕನ್ನು ಪಡೆದಿದ್ದು, ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ಡಿಸೆಂಬರ್‌ 10ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಭಾರತ ಮತ್ತು ಮಾನವ ಹಕ್ಕುಗಳು
ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆಯೂ ಘೋಷಿಸಿದ ದಿನಗಳಲ್ಲಿ ಭಾರತದ ಸಂವಿಧಾನವೂ ರಚನಾ ಹಂತದಲ್ಲಿತ್ತು. ಇದರಿಂದ ಪ್ರೇರಿತಗೊಂಡು ಭಾರತದ ಸಂವಿಧಾನದ ಪ್ರಸ್ತಾವನೆ ಸಹಿತ, ಅನುಚ್ಛೇದದಲ್ಲಿ ಕೂಡ ಮಾನವ ಹಕ್ಕುಗಳ ಬಗ್ಗೆ ಕಾಣಬಹುದಾಗಿದೆ. ಭಾರತ ಸಂವಿಧಾನದ ಅನುಚ್ಛೇದ 32ರ ಅನುಸಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಚ್ಛೇದ 226ರ ಪ್ರಕಾರ ಜಾರಿಗೊಳಿಸುವ ಜವಾಬ್ದಾರಿಯನ್ನು ನ್ಯಾಯಾಂಗಕ್ಕೆ ನೀಡಲಾಗಿದೆ. 

ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ಕಾನೂನಿನಲ್ಲಿ ಮಾನ್ಯತೆ ನೀಡಲಾಗಿದ್ದು, 1993 ಮಾನವ ಹಕ್ಕುಗಳ ಸಂರಕ್ಷಣೆ ಕಾನೂನನ್ನು ಜಾರಿಗೊಳಿಸಲಾಗಿದೆ. ಅಲ್ಲದೇ ದೇಶದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ಸ್ಥಾಪಿಸಿ, ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಚ್‌.ಎಲ್‌. ದತ್ತು ರಾಷ್ಟ್ರೀಯ ಆಯೋಗದ ಅಧ್ಯಕರಾದರೆ, ಡಿ.ಎಚ್‌. ವಘೇಲಾ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದಾರೆ.

ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ
ನಾಗರಿಕ ಸಮಾಜದ ಹಕ್ಕು ಬಾಧ್ಯತೆಗಳ ಬಗ್ಗೆ ಸಂವಿಧಾನವೂ ಸಂರಕ್ಷಣೆ ಮಾಡುತ್ತಾ ಬಂದಿದೆ. ಆದರೂ ಕೆಲವೊಮ್ಮೆ, ಹಿಂಸೆ, ಕ್ರೂರತೆ ಹಾಗೂ ಮನುಷ್ಯ ವಿರೋಧಿ ಚಟುವಟಿಕಗಳ ಮೂಲಕ ಇಂದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ಈ ಬಗ್ಗೆ ನ್ಯಾಯಾಂಗವೂ ಶಿಸ್ತು ಕ್ರಮ ಜರಗಿಸುತ್ತಾ ಬಂದಿದೆ. ಆದರೆ ಸಂರಕ್ಷಣೆ ಎಂಬುದು ಕೇವಲ ವ್ಯವಸ್ಥೆ ಅಷ್ಟೇ ಮಾಡಬೇಕು ಎಂದೆನಿಲ್ಲ, ವೈಯಕ್ತಿಕವಾಗಿ ನಾವು ಪರರ ಸ್ವಾತಂತ್ರ್ಯವನ್ನು ಕೂಡ ಗೌರವಿಸಬೇಕಿದೆ. ಈ ಮೂಲಕ ಮಾನವ ಹಕ್ಕುಗಳಿಗೆ ವೈಯಕ್ತಿಕ ಬೆಂಬಲ ಕೂಡ ಅತ್ಯಗತ್ಯ. ಈ ಕಾರಣಕ್ಕಾಗಿಯೇ ಈ ವರ್ಷದ ದಿನಾಚರಣೆಯ ಸಂದೇಶ ಮಾನವ ಹಕ್ಕುಗಳನ್ನು ಬೆಂಬಲಿಸೋಣಾ ಎಂದಿದ್ದು, ಈ ಬಗ್ಗೆ ನಾಗರಿಕ ಸಮಾಜದ ಚಿಂತನೆ ಮಾಡುವ ಆವಶ್ಯಕತೆಯಿದೆ.

‘ಮಾನವ ಹಕ್ಕುಗಳನ್ನು ಬೆಂಬಲಿಸೋಣ’
ಡಿ. 10ರಂದು ಜಗತ್ತಿನಾದ್ಯಂತ ವಿಶ್ವ ಮಾನವ ಹಕ್ಕುಗಳನ್ನು ಆಚರಿಸಲಾಗುತ್ತದೆ. ಈ ವರ್ಷವೂ ಕೂಡ ವಿಶೇಷ ಸಂದೇಶದೊಂದಿಗೆ 70ನೇ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸುತ್ತಿರುವುದು ವಿಶೇಷ. 2018ರ ಈ ದಿನವನ್ನು ‘ ಮಾನವ ಹಕ್ಕುಗಳನ್ನು ಬೆಂಬಲಿಸೋಣಾ’ (ಸ್ಟ್ಯಾಂಡ್‌ ಆಫ್ ಫಾರ್‌ ಹ್ಯುಮನ್‌ ರೈಟ್ಸ್‌) ಎಂಬ ವಿಶೇಷ ಸಂದೇಶದೊಂದಿಗೆ, ಹಲವು ವಿಚಾರ ಸಂಕಿರಣ, ಜಾಗೃತಿ ಜಾಥಾ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. 

ಮಾನವ ಹಕ್ಕುಗಳು ಯಾವುವು?
ಜೀವಿಸುವ ಹಕ್ಕು, ವಾಕ್‌ ಸ್ವಾತಂತ್ರ್ಯ, ಆಹಾರದ ಹಕ್ಕು, ಶಿಕ್ಷಣ, ಸಾಮಾಜಿಕ ಭದ್ರತೆ, ದೌರ್ಜನ್ಯ ವಿರುದ್ಧ ಹಕ್ಕು, ಸಂಘಟನೆಯ ಹಕ್ಕು, ರಾಷ್ಟ್ರೀಯತೆ ಹಕ್ಕು, ರಕ್ಷಣೆಯ ಹಕ್ಕು, ಆರೋಗ್ಯದ ಹಕ್ಕು, ಧಾರ್ಮಿಕ ಹಕ್ಕು ಇವು ಪ್ರಮುಖವಾದವು.

‡ಶಿವ ಸ್ಥಾವರಮಠ

Advertisement

Udayavani is now on Telegram. Click here to join our channel and stay updated with the latest news.

Next