Advertisement
ಚಂದ್ರನ ಚಲನೆಯನ್ನು ಅನುಸರಿಸಿ, ಅಮಾವಾಸ್ಯೆ-ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಕರೆಯುತ್ತಾರೆ. ವಿಶ್ವಕರ್ಮ ಮತ್ತು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯಕ್ಕೆ ಈ ಹಬ್ಬ ವಿಶೇಷ. ಚಾಂದ್ರಮಾನ ಯುಗಾದಿ ಹಬ್ಬದೊಡನೆ ಚೈತ್ರಮಾಸವನ್ನು ಈ ಸಮುದಾಯಗಳು ಆಚರಿಸುತ್ತವೆ. ವಿಶ್ವಕರ್ಮ ಸಮುದಾಯದಲ್ಲಿ ಯುಗಾದಿಯ ದಿನ ಬೆಳಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ, ಮನೆಗಳನ್ನು ಸಿಂಗರಿಸಲಾಗುತ್ತದೆ. ಆ ಬಳಿಕ ಮನೆಯ ಹಿರಿಯರಿಗೆ ನಮಸ್ಕರಿಸುವುದು ಪದ್ಧತಿ. ಅನಂತರ ಹೊಸ ಬಟ್ಟೆ ತೊಟ್ಟು ಮನೆ ಮಂದಿ ವಿಶೇಷ ಭೋಜನ ಸವಿಯುತ್ತಾರೆ.
ಜಿಎಸ್‌ಬಿ ಸಮುದಾಯದಲ್ಲಿ ಹೊಸ ವರ್ಷದ ಆಚರಣೆಯಾಗಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು ಮನೆ ಸಿಂಗರಿಸಿ, ಬೆಳಗ್ಗೆ ಬೇವು ಬೆಲ್ಲ ಹಂಚಲಾಗುತ್ತದೆ. ದೇವರಿಗೆ ನೈವೇದ್ಯ ಮಾಡಿ, ಅದರಲ್ಲೂ ಕಡ್ಲೆಬೇಳೆ ಪಾಯಸ ಈ ದಿನದ ವಿಶೇಷ. ಗೇರು ಬೀಜದ ಮಡಗಣೆ ಮಾಡಲಾಗುತ್ತದೆ. ಹೊಸ ಬಟ್ಟೆಗಳನ್ನು ದೇವರ ಪ್ರಸಾದದೊಡನೆ ಇಟ್ಟು, ಆರತಿ ಮಾಡಲಾಗುತ್ತದೆ. ಆ ಬಳಿಕ ಹೊಸ ಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸುವುದು ಸಂಪ್ರದಾಯ. ದ.ಕ., ಉಡುಪಿಯನ್ನು ಹೊರತು ಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಾಂದ್ರ ಮಾನ ಯುಗಾದಿ ಯನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಅಲ್ಲಿನ ಮೂಲದವರು ಈಗ ಜಿಲ್ಲೆಯಲ್ಲಿ ಬಂದು ನೆಲೆಸಿರುವ ಹಲವರು ಚಾಂದ್ರಮಾನ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲು ಸಿದ್ಧತೆಯಲ್ಲಿ ತೊಗಡಿದ್ದಾರೆ.
Related Articles
ನಗರದ ಶ್ರೀ ಗುರುಮಠ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 9 ದಿನಗಳ ಕಾಲ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮಾ. 18 ರಂದು ಧ್ವಜಾರೋಹಣಗೊಂಡು ದೇವರಿಗೆ ಮಹಾಪೂಜೆ, ಪಂಚಾಂಗ ಶ್ರವಣದೊಂದಿಗೆ ರಾತ್ರಿ ಉತ್ಸವ ಪ್ರಾರಂಭವಾಗುತ್ತದೆ. ಉಳಿದ ದಿನಗಳಲ್ಲಿ ಯಜ್ಞ ಕಾರ್ಯಕ್ರಮ, ಗಣಪತಿಹೋಮ, ಶ್ರೀದೇವಿ ಪಾರಾಯಣ, ವಿಶೇಷ ಬಲಿ ಹೊರಟು ಪಲ್ಲಕ್ಕಿ, ಚಂದ್ರ ಮಂಡಲೋತ್ಸವ, ಬೀದಿ ಸವಾರಿ, ಭೂತಬಲಿ, ಶಯನೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಯುಗಾದಿ ದಿನದಂದು ನಗರದ ಅನೇಕ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
Advertisement