ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನಕ್ಕೆ ಮಂಜಲ್ಪಡ್ಪು ಸುದಾನ ಶಾಲೆ ಸಜ್ಜುಗೊಂಡಿದೆ. ತುಳುನಾಡಿನ ಸಂಸ್ಕೃತಿ, ಆಚರಣೆಗಳು, ಸಂಪ್ರದಾಯ, ಭಾಷೆಯ ಶ್ರೀಮಂತಿಕೆ ಅನಾವರಣ ಮಾಡುವ ತುಳು ಪರ್ಬವನ್ನು ಸಂಘಟಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜನಪದ ಅಂಕಣ
ಸಮ್ಮೇಳನ ಸಭಾಂಗಣದ ಬಲಭಾಗದಲ್ಲಿ ತುಳು ನಾಡಿನ ಜಾನಪದ ಕ್ರೀಡೆ ಕಂಬಳ ಕೋಣಗಳ ಪ್ರದರ್ಶನ, ಕೋಳಿ ಅಂಕಗಳಲ್ಲಿ ಕಾದಾಡುವ ಹುಂಜ ಪ್ರದರ್ಶನ, ಮಕ್ಕಳಿಗೆ ತುಳು ಜಾನಪದ ಆಟಗಳನ್ನು ಆಡಲು ವ್ಯವಸ್ಥೆಯನ್ನು ಮಾಡಲಾಗಿದೆ. ತುಳು ಪರಂಪರೆಯ ವಸ್ತುಗಳ ಪ್ರದರ್ಶನ ವನ್ನು ತುಳು ಪರ್ಬದಲ್ಲಿ ಏರ್ಪಡಿಸಲಾಗಿದೆ.
ತುಳು ಪರ್ಬಕ್ಕೆ ವಿಶಾಲ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ. 42 ಅಡಿ ಉದ್ದ ಮತ್ತು 20 ಅಡಿ ಅಗಲದ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. 3,000 ಮಂದಿ ಕುಳಿತುಕೊಳ್ಳಲು ವ್ಯವಸ್ಥೆಗೊಳಿಸಲಾಗಿದೆ. ತುಳು ಚಲನಚಿತ್ರದ ಪ್ರದರ್ಶನಕ್ಕಾಗಿ ಸುದಾನ ವಸತಿಯುತ ಶಾಲೆಯ ಸಮ್ಮೇಳನ ಸಭಾಂಗಣದಲ್ಲಿ ವ್ಯವಸ್ಥೆಯಾಗಿದೆ. 60ಕ್ಕೂ ಹೆಚ್ಚು ಮಳಿಗೆಗಳಿದ್ದು, ತುಳು ತಿಂಡಿ ತಿನಿಸುಗಳ ಆಹಾರ ಮಳಿಗೆಗಳೂ ಇಲ್ಲಿ ತೆರೆದುಕೊಳ್ಳಲಿವೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ ಹಾಗೂ ರಾತ್ರಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ.
ಸೆಲ್ಫಿ ಪಾಯಿಂಟ್
ತಮ್ಮ ಫೋಟೋಗಳನ್ನು ತಾವೇ ತೆಗೆದುಕೊಳ್ಳುವ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ‘ಜೋಡು ಬೋರಿದ ಗಾಡಿ’ಯ ಮುಂದೆ ನಿಂತು ಸೆಲ್ಫಿ ತೆಗೆಯುವ ಆಸಕ್ತರಿಗೆ ಅವಕಾಶ ಇದೆ. ಇಲ್ಲಿ ‘ಎನ್ನ ಫೋಟೋ ಯಾನೆ ದೆಪ್ಪುನ’ ಎಂಬ ಫಲಕವನ್ನು ಅಳವಡಿಸಲಾಗುತ್ತದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತರಾಮ ರೈ ತಿಳಿಸಿದ್ದಾರೆ.