ರಾಂಪುರ: ಬಿಲ್‌ಕೆರೂರ ಗ್ರಾಮದ ಬಿಲ್ವಾಶ್ರಮ ಹಿರೇಮಠದ ಮೌನ ತಪಸ್ವಿ ಲಿಂ.ರುದ್ರಮುನಿ ಶಿವಯೋಗಿಗಳ 41ನೇ ಪುಣ್ಯ ದಿನೋತ್ಸವ, ಕಾಶೀ ಪೀಠದ ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜೂ. 12 ಹಾಗೂ 13ರಂದು ಜರುಗಲಿವೆ. 12ರಂದು ಮಧ್ಯಾಹ್ನ 4 ಗಂಟೆಗೆ ಕಳಸದ ಉತ್ಸವ ಹಾಗೂ ಬೆಣ್ಣೂರು ಗ್ರಾಮದಿಂದ ಲಿಂ.ರುದ್ರಮುನಿ ಶಿವಯೋಗಿಗಳ ಬೆಳ್ಳಿಮೂರ್ತಿ ಮೆರವಣಿಗೆ ಮೂಲಕ ಶ್ರೀ ಮಠಕ್ಕೆ ಬರಲಿದೆ. ಅಂದೇ ರಾತ್ರಿ 10 ಗಂಟೆಯಿಂದ ಸುತ್ತಮುತ್ತಲಿನ ಗ್ರಾಮಗಳ ಭಜನಾ ತಂಡಗಳಿಂದ ರಾತ್ರಿಯಿಡಿ ಶಿವಭಜನೆ ನಡೆಯಲಿದೆ.
13ರಂದು ಶ್ರೀಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗ್ಗೆ 6ಕ್ಕೆ ಅಯ್ನಾಚಾರ, ಶಿವದೀಕ್ಷೆ ನಡೆಯುವುದು. 7ಗಂಟೆಗೆ ಹೋಮ-ಹವನ, ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, 8 ಗಂಟೆಗೆ ಪಂಚಾಚಾರ್ಯರ ಧ್ವಜಾರೋಹಣ ಪ್ರಭುಸ್ವಾಮಿ ಸರಗಣಾಚಾರಿ ಅವರಿಂದ ನೆರವೇರಲಿದೆ.
ಅಡ್ಡಪಲ್ಲಕ್ಕಿ ಉತ್ಸವ: ಬೆಳಗ್ಗೆ 10ಗಂಟೆಗೆ ಕಾಶೀ ಪೀಠದ ನೂತನ ಡಾ|ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಬಿಲ್‌ಕೆರೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಶ್ರೀಮಠಕ್ಕೆ ತಲುಪಲಿದೆ.
ಸಾಮೂಹಿಕ ವಿವಾಹ: ಮಧ್ಯಾಹ್ನ 12:30 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ, ಧರ್ಮಸಭೆ ಹಾಗೂ ಕರವೀರೇಶ್ವರ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕಾಶೀ ಪೀಠದ ಡಾ|ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಲಿದ್ದು, ವಿಮಲರೇಣುಕ ಶ್ರೀ, ರುದ್ರಮುನಿ ಶ್ರೀ, ಗಿರಿಸಾಗರದ ರುದ್ರಮುನಿ ಶ್ರೀ, ಗುರುಲಿಂಗ ಶಿವಾಚಾರ್ಯರು, ವಾಮದೇವ ಮಹಾಂತ ಶ್ರೀ, ಅಭಿನವ ಕಾಡಸಿದ್ಧೇಶ್ವರ ಶ್ರೀ, ಶಿವಪ್ರಕಾಶ ಶಿವಾಚಾರ್ಯರು ಮತ್ತು ಡಾ|ರುದ್ರಮುನಿ ದೇವರು ಪಾಲ್ಗೊಳ್ಳಲಿದ್ದಾರೆ.
ಶಾಸಕ ಡಾ|ವೀರಣ್ಣ ಚರಂತಿಮಠ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಪ್ರೌಢಶಾಲೆ ಉದ್ಘಾಟಿಸುವರು. ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಬಿಲ್ವಾಶ್ರಮ ಹಿರೇಮಠದ ಪ್ರಕಟಣೆ ತಿಳಿಸಿದೆ.