Advertisement

ಇಂದು ನಗರದ ಏಕೈಕ “ಮಂಗಳೂರು ಕಂಬಳ’; ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ

03:33 PM Dec 30, 2023 | Team Udayavani |

ಮಹಾನಗರ: ಒಂದೊಮ್ಮೆ ಕದ್ರಿಯಲ್ಲಿ ದೇವರ ಕಂಬಳ ನಡೆಯುತ್ತಿದ್ದುದು ನಗರದೊಳಗಿನ ಏಕೈಕ ಕಂಬಳವಾಗಿತ್ತು. ಕಾರಣಾಂತರಗಳಿಂದ ಅದು ನಿಂತು ಹೋದ ಮೇಲೆ ನಗರದಲ್ಲಿ ಬೇರೆ ಕಂಬಳವೇ ಇಲ್ಲ ಎನ್ನುವ ಕೊರಗಿತ್ತು. ಮತ್ತೆ ನಗರದೊಳಗೆ ಹೊಸ ಭರವಸೆಯೊಂದಿಗೆ ಆರಂಭವಾದದ್ದು ಮಂಗಳೂರು ಕಂಬಳ.

Advertisement

ಕಂಬಳವೆಂದರೆ ಹಾಗೆ…ಲಾರಿಗಳಲ್ಲಿ ಬಲಿಷ್ಠ ಮಿರಿಮಿರಿ ಮಿರುಗುವ ಕೋಣಗಳ ಸಂಚಾರ, ಇಡೀ ಪರಿಸರದಲ್ಲಿ ಈ ಕರಾವಳಿ ಜನಪದ ಕ್ರೀಡೆಯ ಮೆರುಗು. ಅಂತಹ ವೈಶಿಷ್ಟ್ಯ ಪೂರ್ಣವಾದ ಕಂಬಳ ಇದೀಗ ನಗರದ ಮಧ್ಯೆ ಮತ್ತೆ ನಡೆಯುವ ಗಳಿಗೆ ಬಂದಿದೆ.

ಯಶಸ್ವಿಯಾಗಿ 6 ವರ್ಷಗಳ ಕಾಲ ನಡೆದಿರುವ ಮಂಗಳೂರು ಕಂಬಳ 7ನೇ ಬಾರಿಗೆ ಸಂಭ್ರಮದೊಂದಿಗೆ ಡಿ. 30ರಂದು ನಗರ ಹೊರವಲಯದ ಗೋಲ್ಡ್‌ ಫಿಂಚ್‌ ಸಿಟಿಯ ರಾಮ – ಲಕ್ಷ್ಮಣ ಜೋಡುಕರೆಯಲ್ಲಿ ನಡೆಯುತ್ತಿದೆ.

ಪ್ರವಾಸೋದ್ಯಮಕ್ಕೂ ಉತ್ತೇಜನ
ಈ ಬಾರಿ ಹಿಂದೆಂದಿಗಿಂತಲೂ ಅಧಿಕ ಮಂದಿ ಪ್ರವಾಸಿಗರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ತಿಂಗಳ ಹಿಂದೆ ಬೆಂಗಳೂರು ರಾಜಧಾನಿಯಲ್ಲಿ ಕಂಬಳದ ಕಂಪು ಹರಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಖುಷಿ ಪಟ್ಟಿದ್ದರು. ಕಂಬಳದ ಖುಷಿ ಸವಿದವರು ಮತ್ತೆ ಮಂಗಳೂರು ಕಂಬಳದತ್ತಲೂ ಬರಬಹುದು, ಅಲ್ಲದೆ ಸಹಸ್ರಾರು ಪ್ರವಾಸಿಗರಿಗೂ ಇದೊಂದು ಆಕರ್ಷಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಸಂಘಟಕರಿದ್ದಾರೆ.

ಈ ಬಾರಿ 150 ಕೋಣಗಳು ಅದರಲ್ಲಿ ಹೆಚ್ಚು ನೇಗಿಲು ಕಿರಿಯ ಕೋಣಗಳು ಭಾಗವಹಿಸುತ್ತಿವೆ. 6 ವಿಭಾಗಗಳಾದ ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ, ಕನೆ ಹಲಗೆ ಮತ್ತು ಅಡ್ಡಹಲಗೆ ವಿಭಾಗಗಳಿವೆ.

Advertisement

ಉದ್ಘಾಟನೆ ಬೆಳಗ್ಗೆ
ಡಿ. 30ರಂದು ಬೆಳಗ್ಗೆ 8.30ಕ್ಕೆ ಕಂಬಳದ ಉದ್ಘಾಟನೆಯನ್ನು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ನೆರವೇರಿಸಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಕೆ. ಪ್ರಕಾಶ್‌ ಶೆಟ್ಟಿ ವಹಿಸಲಿದ್ದು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿಸೂರ್ಯ, ಸಂಸದ ನಳಿನ್‌ ಕುಮಾರ್‌ ಕಟೀಲು, ಮುಖಂಡರಾದ ಸಿ.ಟಿ. ರವಿ ಮತ್ತಿತರರು ಪಾಲ್ಗೊಂಡಿದ್ದಾರೆ.

ಗದ್ದೆಗೆ ಕೋಣಗಳು ಇಳಿಯುವ ಸಮಯ
*ನೇಗಿಲು ಕಿರಿಯ: ಬೆಳಗ್ಗೆ 8.30ರಿಂದ 10
*ಹಗ್ಗ ಕಿರಿಯ: ಬೆಳಗ್ಗೆ 11.30ರಿಂದ 12
*ನೇಗಿಲು ಹಿರಿಯ: ಮಧ್ಯಾಹ್ನ 1ರಿಂದ 1.30
*ಹಗ್ಗ ಹಿರಿಯ: ಅಪ ರಾಹ್ನ 3.30ರಿಂದ 4.30
*ಅಡ್ಡ ಹಲಗೆ ಮತ್ತು ಕನೆಹಲಗೆ: ಸಂಜೆ 5.30ರಿಂದ 6

ಕನೆಹಲಗೆ ವಿಭಾಗ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ
*ಪ್ರಥಮ: 2 ಪವನ್‌
*ದ್ವಿತೀಯ: 1 ಪವನ್‌

ಬಹುಮಾನಗಳು
ಹಗ್ಗ, ನೇಗಿಲು-ಹಿರಿಯ ವಿಭಾಗ
*ಪ್ರಥಮ 2 ಪವನ್‌
*ದ್ವಿತೀಯ 1 ಪವನ್‌
*ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗ
*ಪ್ರಥಮ 1 ಪವನ್‌
*ದ್ವಿತೀಯ 0.5 ಪವನ್‌

ಟೈಮರ್‌ ಅಳವಡಿಕೆ
24 ಗಂಟೆಯೊಳಗೆ ಕಂಬಳ ಪೂರ್ಣಗೊಳಿಸುವುದಕ್ಕಾಗಿ ಜಿಲ್ಲಾ ಕಂಬಳ ಸಮಿತಿ ಪಣತೊಟ್ಟಿದ್ದು, ಟೈಮರ್‌ ಅಳವಡಿಸಲಾಗುತ್ತಿದೆ.

ನಗರದ ಜನತೆಗೆ ಅವಕಾಶ
ನಗರದೊಳಗೆ ನಡೆಯುವ ಕಂಬಳವಾದ್ದರಿಂದ ಇಲ್ಲಿನವರಿಗೂ ವೀಕ್ಷಿಸುವ ಅಪರೂಪದ ಅವಕಾಶ. ದೂರದ ಹಳ್ಳಿಗಳಲ್ಲಿ ನಡೆಯುವ ಕಂಬಳಕ್ಕೆ ಹೋಗಲು ಸಾಧ್ಯವಾಗದವರು ಈ ಕಂಬಳಕ್ಕೆ ಬಂದು ನೋಡಿ ಖುಷಿ ಪಡಬಹುದು.

ವಿಶಾಲ ಪಾರ್ಕಿಂಗ್‌
ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ವಿಸ್ತೃತವಾದ ಜಾಗ ಇರುವುದರಿಂದ ಬರುವ ಕಂಬಳಾಸಕ್ತರಿಗೆ ವಾಹನ ಪಾರ್ಕಿಂಗ್‌ ತಲೆಬಿಸಿಯಿಲ್ಲ.

ವೀಕ್ಷಣಾ ಗ್ಯಾಲರಿ
ಕಂಬಳ ವೀಕ್ಷಿಸಲು ಮಹಿಳೆಯರಿಗೆ ಮಕ್ಕಳಿಗೆ ಪ್ರತ್ಯೇಕ ಜಾಗ, ಹಿರಿಯ ನಾಗರಿಕರಿಗೂ ಅವಕಾಶ. ಸುಮಾರು 250 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಿಸಲಾಗಿದೆ.

ಮಂಗಳೂರಿನ ವಿವಿಧ ಕಾರ್ಯಕ್ರಮಗಳ ಕ್ಯಾಲೆಂಡರ್‌ನಲ್ಲಿ ಮಂಗಳೂರು ಕಂಬಳವನ್ನು ಸೇರ್ಪಡೆ ಮಾಡಿರುವುದಕ್ಕೆ ನಮಗೆ ಹೆಮ್ಮೆಯಿದೆ. ಹಿಂದೆ ಕಂಬಳ ನಿಂತುಹೋಗುವ ಸಂದರ್ಭದಲ್ಲಿ ಹೋರಾಡಿದವರಲ್ಲಿ ನಮ್ಮ ಟೀಂ ಕೂಡ ಇದೆ, ಅದೇ ನಮಗೆ ಮಂಗಳೂರು ಕಂಬಳ ಆಯೋಜಿಸುವಲ್ಲಿ ಸಹಕಾರಿ ಹಾಗೂ ಸ್ಫೂರ್ತಿ.
-ಕ್ಯಾ| ಬೃಜೇಶ್‌ ಚೌಟ,
ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next