Advertisement

900 ವರ್ಷ ಕಳೆದರೂ ಇಂದಿಗೂ ವಚನ ಪ್ರಸ್ತುತ

11:46 AM Feb 02, 2018 | |

ಕಲಬುರಗಿ: ವಚನ ಸಾಹಿತ್ಯ ಇಡಿ ಜಾಗತಿಕ ಇತಿಹಾಸದೊಳಗೆ ತನ್ನ ಅಸ್ತಿತ್ವ ಕಾಪಾಡಿಕೊಂಡಿದ್ದನ್ನು ಕಾಣುತ್ತೇವೆ. ಸುಮಾರು 900 ವರ್ಷಗಳ ಕಾಲ ಕಳೆದರೂ ಸತ್ಯ ದರ್ಶನ ಮರೆಮಾಚದಂತೆ ತುಂಬು ಜೀವನ ನಡೆಸಿದವರು, ನುಡಿದಂತೆ ನಡೆದವರು ವಚನಕಾರರು ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ಪಿ. ನಾಗರಾಜ ಹೇಳಿದರು.

Advertisement

ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಣದಲ್ಲಿ ವೀರ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆ ಕಾಣುವುದೇ ಜೀವನದ ರಹಸ್ಯ. ಈ ಸಾಧ್ಯತೆಯನ್ನು ಸಾಕಾರಗೊಳಿಸಿದವರು ವೀರ ಶರಣ ಮಡಿವಾಳ ಮಾಚಿದೇವ. ಇವರ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಬಸವಣ್ಣನವರಿಗಿಂತ ಹಿರಿಯರು ಎಂದು ಹೇಳಬಹುದು. 

ತಾಯಿಯ ಬಗ್ಗೆ ಗೊಂದಲವಿದೆ. ಇವರ ತಂದೆ ಪರ್ವತಯ್ಯ ಎಂದು ಹೇಳಬಹುದು. ಇವರ ಗುರು ಕಲಿದೇವರಿಂದ ವೇದಶಾಸ್ತ್ರ ಅಭ್ಯಾಸ ಮಾಡುತ್ತಾರೆ. ಮಡಿವಾಳನನ್ನು ಕುರಿತು ಬಸವಣ್ಣನವರು ಅಂತರಂಗದ ಕೊಳೆಯನ್ನು ಶುದ್ಧಿ ಮಾಡಿದವನು ಎನ್ನುತ್ತಾರೆ. 

ಚೆನ್ನಬಸವಣ್ಣನು ಮಾಚಿದೇವನನ್ನು ಹಾಡಿ ಹೊಗಳಿದ್ದಾರೆ. ಮಡಿವಾಳ ಮಾಚಿದೇವನ ವಿಚಾರಗಳು ಇಂದಿಗೂ, ಎಂದಿಗೂ, ಎಂದೆಂದಿಗೂ ಪ್ರಸ್ತುತ ಮತ್ತು ಸಾರ್ವತ್ರಿಕ ಸತ್ಯವಾಗಿವೆ ಎಂದು ಹೇಳಿದರು. ಪ್ರೊ| ಎಚ್‌.ಟಿ. ಪೋತೆ ಪ್ರಾಸ್ತಾವಿಕವಾಗಿ ಮಾತನಾಡಿ, ವಚನಕಾರರನ್ನು ನೆನಪಿಸುವುದರ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ನಿಮ್ಮಲ್ಲಿರುವಂಥ ಕಲ್ಮಶ, ದುಷ್ಟಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ವಚನಕಾರರನ್ನು ಅನುಕರಿಸಬೇಕು. ಬಸವಾದಿ ಶರಣರ ಸಾಲಿನಲ್ಲಿ ವೀರ ಶರಣ ಮಡಿವಾಳ ಮಾಚಿದೇವರು ಒಬ್ಬರಾಗಿದ್ದಾರೆ. ಕೆಲ ಪತ್ರಿಕೆಗಳಲ್ಲಿ ವೀರ ಶರಣ ಎಂಬುದಾಗಿ ಪ್ರಕಟವಾಗಿರುವುದರಿಂದ ವೀರ ಶರಣ ಮಾಚಿದೇವ ಎನ್ನಲಾಗುತ್ತಿದೆ ಎಂದು ಹೇಳಿದರು.

ವಿತ್ತಾಧಿಕಾರಿ ಪ್ರೊ| ಲಕ್ಷ್ಮಣ ರಾಜನಾಳಕರ್‌ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ| ಡಿ.ಎಂ. ಮದರಿ, ವಿದ್ಯಾವಿಷಯಕ ಪರಿಷತ್‌ ಸದಸ್ಯ ನಾಗೇಶ ಕೊಳ್ಳಿ ವೇದಿಕೆ ಮೇಲಿದ್ದರು. ಪ್ರೊ| ಎಸ್‌. ಎಂ. ಹಿರೇಮಠ, ಪ್ರೊ| ವಿ.ಜಿ. ಪೂಜಾರ, ಪ್ರೊ| ಪರಿಮಳಾ ಅಂಬೇಕರ್‌, ಪ್ರೊ| ಜಯಶ್ರೀ ದಂಡೆ, ಪ್ರೊ| ರಬ್‌ ಉಸ್ತಾದ್‌, ಪ್ರೊ| ವಿಜಯ ತೆಲಂಗ, ಪ್ರೊ| ಜಗನಾಥ ಸಿಂಧೆ, ಡಾ| ಶ್ರೀಶೈಲ ನಾಗರಾಳ, ಡಾ| ಎಂ.ಬಿ. ಕಟ್ಟಿ ಹಾಜರಿದ್ದರು. ಡಾ| ಸಂತೋಷಕುಮಾರ ಕಂಬಾರ ನಿರೂಪಿಸಿದರು. ಡಾ| ವಸಂತ ನಾಶಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next