Advertisement
ನಗರದ ರೊಜಾರಿಯೊ ಕೆಥೆಡ್ರಲ್ ನಲ್ಲಿ ಬೆಳಗ್ಗೆ 9.30ಕ್ಕೆ ಈ ಸಮಾರಂಭವು ಶುರುವಾಗಲಿದ್ದು, ಸುಮಾರು ನಾಲ್ಕು ತಾಸುಗಳ ಈ ಮಹತ್ವದ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತದ ಸಾವಿರಾರು ಮಂದಿ ಸಾಕ್ಷಿಯಾಗಲಿದ್ದಾರೆ. ವಿಶೇಷ ಅಂದರೆ, 22 ವರ್ಷಗಳ ಬಳಿಕ ಇಂತಹ ಅಪರೂಪದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಭಾರತದ ಪೋಪ್ ಪ್ರತಿನಿಧಿ (ನುನ್ಸಿಯೊ)ಯ ಕೌನ್ಸಿಲರ್ ರೆ| ಜ್ಹವಿಯರ್ ಡಿ. ಫೆರ್ನಾಂಡಿಸ್ ಜಿ., ದೇಶದ ವಿವಿಧ ಭಾಗಗಳ 25- 30ರಷ್ಟು ಬಿಷಪರು, 500ಕ್ಕೂ ಮಿಕ್ಕಿ ಧರ್ಮ ಗುರುಗಳು ಹಾಗೂ ಮಂಗಳೂರು ಧರ್ಮ ಪ್ರಾಂತದಾದ್ಯಂತದ ಕೈಸ್ತರು ಸೇರಿದಂತೆ ಒಟ್ಟು 10,000ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
ಮಂಗಳೂರು ಧರ್ಮಪ್ರಾಂತದ ಧರ್ಮ ಗುರು ಫಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರನ್ನು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ 2018 ಜು. 3ರಂದು ಅಪರಾಹ್ನ 3.30ಕ್ಕೆ ಪೋಪ್ ಫ್ರಾನ್ಸಿಸ್ ಪ್ರಕಟನೆ ಹೊರಡಿಸಿದ್ದರು.