ಬೆಂಗಳೂರು: ಬಿಜೆಪಿಯ “ಬೆಂಗಳೂರು ರಕ್ಷಿಸಿ’ ಯಾತ್ರೆಗೆ ತಿರುಗೇಟು ನೀಡಲು ಕಾಂಗ್ರೆಸ್ “ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಹೆಸರಿನಲ್ಲಿ ಯಾತ್ರೆ ನಡೆಸಲು ತೀರ್ಮಾನಿಸಿದೆ. ಬುಧವಾರದಿಂದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿ ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ವೈಫಲ್ಯಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ನಮ್ಮ ಬೆಂಗಳುರು ನಮ್ಮ ಹೆಮ್ಮೆ ಯಾತ್ರೆಯನ್ನು ಬುಧವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ ಕೆ.ಆರ್.ಪುರಂನಿಂದ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿಯವರು ಬೆಂಗಳೂರು ಕ್ರೈಂ ಸಿಟಿಯಾಗಿ ಹಾಳಾಗಿದೆ ಎಂದು ವಿಶ್ವ ಮಟ್ಟದಲ್ಲಿ ಬೆಂಗಳೂರಿಗೆ ಅಪಮಾನ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬೆಂಗಳೂರಿಗೆ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ, ವೈಟ್ ಟಾಪಿಂಗ್, ಬಡವರಿಗೆ ಒಂದು ಲಕ್ಷ ಮನೆ ನಿರ್ಮಾಣ ಮಾಡುವ ಕೆಲಸ ಮಾಡಿದೆ. ದೇಶವೇ ಮೆಚ್ಚುವಂತಹ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಕಸ ಸಮಸ್ಯೆ ನಿವಾರಣೆ: ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೆ.ಜೆ. ಜಾರ್ಜ್, ಬಿಜೆಪಿಯವರು ಮಂಡೂರು ಮತ್ತು ಮಾವಳ್ಳಿಪುರದ ಕಸದ ಸಮಸ್ಯೆ ನಿವಾರಣೆ ಮಾಡದೇ ವಿಶ್ವದಲ್ಲಿ ಬೆಂಗಳೂರಿನ ಹೆಸರು ಕೆಡುವಂತೆ ಮಾಡಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಕಸದ ಸಮಸ್ಯೆ ನಿವಾರಿಸಿ ಏಳು ಹೊಸ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಿದ್ದೇವೆ. ಕಸದ ಮಾಫಿಯಾಕ್ಕೆ ತಡೆಯೊಡ್ಡಿ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ದೊರೆಯುವಂತೆ ಮಾಡಿದ್ದೇವೆ ಎಂದು ಹೇಳಿದರು.
ಅಭಿವೃದ್ಧಿ ಮಾಡಿ: ಪ್ರಧಾನಿ ನರೇಂದ್ರ ಮೋದಿ ಉದ್ಯಮಗಳನ್ನೆಲ್ಲ ಗುಜರಾತ್‌ಗೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದಾರೆ. ಆದರೂ ಬೆಂಗಳೂರು ಬಂಡವಾಳ ಆಕರ್ಷಣೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಬಿಜೆಪಿಯವರು ಸಬರ್‌ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ನೀಡಿದ್ದೇವೆ ಎಂದು ಹೇಳುತ್ತಾರೆ. ಅವರು ನೀಡಿದ್ದು ಕೇವಲ 1 ಕೋಟಿ ರೂ. ಮಾತ್ರ. ಅದೇ ರೀತಿ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ ಎಂದು ಪ್ರಕಾಶ್ ಜಾವಡೇಕರ್ ಹೇಳುತ್ತಾರೆ. ಕೇಳಿದರೆ ನಿಮ್ಮ ಹಣದಲ್ಲಿಯೇ ಅಭಿವೃದ್ಧಿ ಮಾಡಿ ಎನ್ನುತ್ತಾರೆ ಎಂದು ಆರೋಪಿಸಿದರು.
ಎ ಗ್ರೇಡ್: ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬೆಂಗಳೂರಿನ ಆರ್ಥಿಕ ಸ್ಥಿತಿಗತಿ ಕೇಂದ್ರ ಸರ್ಕಾರ ಸಿ ಗ್ರೇಡ್ ನೀಡಿತ್ತು. ನಮ್ಮ ಆಡಳಿತದಲ್ಲಿ ಎ ಗ್ರೇಡ್ ನೀಡಿದೆ ಎಂದು ಹೇಳಿದರು. ಕೃಷಿ ಸಚಿವ ಕೃಷ್ಣ ಬೈರೇಗೌಡ ನಮ್ಮ ಬೆಂಗಳೂರು ನಮ್ಮ ಹೆಮ್ಮೆ ವೆಬ್‌ಸೈಟ್ ಬಿಡುಗಡೆ ಮಾಡಿದರು.
ಕೆಂಪೇಗೌಡ ಪ್ರಶಸ್ತಿ ಯಾರಿಗೆ?: ಜೆಪಿಯವರು ಅಧಿಕಾರದಲ್ಲಿದ್ದಾಗ ಬಿಬಿಎಂಪಿಯಲ್ಲಿ 8 ಸಾವಿರ ಕೋಟಿ ಸಾಲ ಮಾಡಿ, ಪಾಲಿಕೆ ಆಸ್ತಿ ಅಡ ಇಟ್ಟು, ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದಕ್ಕೆ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಬೇಕು. ಯಾರಿಗೆ ಕೊಡಬೇಕು ಎನ್ನುವುದನ್ನು ಆಯ್ಕೆ ಸಮಿತಿ ನಿರ್ಧರಿಸಲಿದೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.