Advertisement

ಧೂಮಪಾನಿ ತನಗೊಬ್ಬನಿಗಲ್ಲ , ಸಮಾಜಕ್ಕೆ ಅಪಾಯಕಾರಿ

05:55 AM Mar 13, 2019 | |

ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಧೂಮಪಾನದಿಂದ ಪ್ರತಿ ವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಧೂಮಪಾನದಿಂದ ವ್ಯಸನಿ ಜತೆಗೆ ಅಕ್ಕ ಪಕ್ಕದವರೂ ಕಾಯಿಲೆಗೆ ತುತ್ತಾಗುವುದರಿಂದ ಇದೊಂದು ವೈಯಕ್ತಿಕ ಆಯ್ಕೆ ಎಂದು ಸುಲಭದಲ್ಲಿ ತಳ್ಳಿ ಹಾಕುವಂತಿಲ್ಲ. ಆದ್ದರಿಂದಲೇ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಿದೆ. ಜತೆಗೆ ಸಿಗರೇಟ್‌, ಬೀಡಿ ಮುಂತಾದ ಉತ್ಪನ್ನಗಳು, ಸಿನೆಮಾ ಥಿಯೇಟರ್‌ ಮುಂತಾದೆಡೆ ಧೂಮಪಾನದಿಂದ ಸಂಭವಿಸುವ ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರಿಕೆ ನೀಡಲು ಕ್ರಮ ಕೈಗೊಂಡಿದೆ. ಪ್ರಸ್ತುತ ಧೂಮಪಾನದ ಚಟ ಬಿಡಿಸುವಂತಹ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿದ್ದು, ವ್ಯಸನಿಗಳಿಗೆ ಹೊಸ ಸಾಧ್ಯತೆಯ ಬಾಗಿಲು ತೆರೆದಿದೆ.

Advertisement

ಧೂಮಪಾನದಿಂದ ಹೊಗೆ ರೂಪದ ವಿಷ ನಮ್ಮ ದೇಹ ಸೇರುತ್ತದೆ. ಇನ್ನೊಂದು ಆತಂಕಕಾರಿ ಅಂಶ ಎಂದರೆ ಧೂಮಪಾನಿ ಮಾತ್ರವಲ್ಲ ಸುತ್ತಮುತ್ತಲಿನವರೂ ಇದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಇದು ವ್ಯಸನಿಯೊಬ್ಬನ ಸಮಸ್ಯೆಯಲ್ಲ. ಬದಲಾಗಿ ಇಡೀ ಸಮಾಜಕ್ಕೇ ಅಪಾಯಕಾರಿ. ಹೀಗಾಗಿ ಪ್ರತಿವರ್ಷ ಮಾರ್ಚ್‌ ಎರಡನೇ ಬುಧವಾರವನ್ನು ನೋ ಸ್ಮೋಕಿಂಗ್‌ ಡೇ ಆಗಿ ಆಚರಿಸಲಾಗುತ್ತದೆ.

ಏನಿದು ನೋ ಸ್ಮೋಕಿಂಗ್‌ ಡೇ?
ಧೂಮಪಾನ ತ್ಯಜಿಸಬೇಕು ಎನ್ನುವ ಮನೋಭಾವ ಹೊಂದಿದ ವ್ಯಸನಿಗಳನ್ನು ಉತ್ತೇಜಿಸುವ ಉದ್ದೇಶದಿಂದ ನೋ ಸ್ಮೋಕಿಂಗ್‌ ಡೇ ಆಚರಿಸಲಾಗುತ್ತದೆ. 1984ರಲ್ಲಿ ಮೊದಲ ಬಾರಿ ಈ ದಿನವನ್ನು ಆಚರಿಸಲಾಯಿತು. ಧೂಮಪಾನದಿಂದಾಗುವ ದುಷ್ಪರಿಣಾಮ, ಅದರಿಂದ ಹೊರ ಬರುವ ರೀತಿ ಇತ್ಯಾದಿಗಳ ಕುರಿತು ಆ ದಿನ ಅರಿವು ಮೂಡಿಸಲಾಗುತ್ತದೆ. ಪ್ರತಿ ವರ್ಷ ಒಂದೊಂದು ಥೀಮ್‌ ಇಟ್ಟುಕೊಂಡು ದಿನಾಚರಣೆ ನಡೆಸಲಾಗುತ್ತದೆ.

ಇತ್ತೀಚೆಗೆ ಧೂಮಪಾನ ಎನ್ನುವುದು ಸರ್ವ ಸಾಮಾನ್ಯವಾಗಿದೆ. ಹಳ್ಳಿ, ನಗರ ಎನ್ನುವ ಪ್ರಾದೇಶಿಕ ಗಡಿ, ಹೆಣ್ಣು, ಗಂಡೆಂಬ ಭೇದವನ್ನೂ ಮೀರಿ ಈ ವ್ಯಸನ ವ್ಯಾಪಿಸಿದೆ. ಧೂಮಪಾನ ಬಾಯಿ, ಶ್ವಾಸಕೋಶದ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. ಧೂಮಪಾನ ವ್ಯಕ್ತಿಯೊಬ್ಬನ ವೈಯಕ್ತಿಕ ಆಯ್ಕೆಯಾದರೂ ಅದರಿಂದ ಅವನಷ್ಟೇ ಅಲ್ಲ ಅವನೊಂದಿಗಿರುವ ಇತರ ವ್ಯಕ್ತಿಗಳೂ ತೊಂದರೆ ಅನುಭವಿಸುತ್ತಾರೆ. ಪರೋಕ್ಷ ಧೂಮಪಾನವೂ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. 

ಭಾರತದಲ್ಲಿ ಧೂಮಪಾನಿಗಳು
ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 120 ಮಿಲಿಯನ್‌ ಧೂಮಪಾನಿಗಳಿದ್ದಾರೆ. ಅದರಲ್ಲಿ ಮಹಿಳೆಯರ ಪ್ರಮಾಣ ಸುಮಾರು 12.1 ಮಿಲಿಯನ್‌. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜಗತ್ತಿನ ಧೂಮಪಾನಿಗಳ ಪೈಕಿ ಭಾರತದಲ್ಲಿ ಶೇ. 11.2 ಮಂದಿ ಇದ್ದಾರೆ. ಭಾರತದಲ್ಲಿ ಪುರುಷ ಧೂಮಪಾನಿಗಳ ಸಂಖ್ಯೆ 1998ರಿಂದ 2015ರಲ್ಲಿ ಶೇ.36ರಷ್ಟು ಹೆಚ್ಚಳವಾಗಿದೆ.

Advertisement

15 ಬಿಲಿಯನ್‌ ಪ್ರಪಂಚದಲ್ಲಿ ಪ್ರತಿ ದಿನ ಮಾರಾಟವಾಗುವ ಸಿಗರೇಟ್‌

10 ಮಿಲಿಯನ್‌ ಪ್ರಪಂಚದಲ್ಲಿ ಪ್ರತಿ 10 ನಿಮಿಷಕ್ಕೆ ಮಾರಾಟವಾಗುವ ಸಿಗರೇಟ್‌.

1 ಮಿಲಿಯನ್‌: ಪ್ರತಿ ವರ್ಷ ಭಾರತದಲ್ಲಿ ಮೃತಪಡುತ್ತಿರುವ ಧೂಮಪಾನಿಗಳು.

100 ಮಿಲಿಯನ್‌: ಭಾರತದ ವಯಸ್ಕ ಧೂಮಪಾನಿಗಳ ಸಂಖ್ಯೆ

ಶೇ.70 ಭಾರತದಲ್ಲಿ ಮರಣ ಹೊಂದುತ್ತಿರುವ 30- 69 ವಯಸ್ಸಿನ ಧೂಮಪಾನಿಗಳು

ದುಷ್ಪರಿಣಾಮಗಳು
1.  ಪ್ರತಿ ದಿನ 5ಕ್ಕಿಂತ ಹೆಚ್ಚು ಸಿಗರೇಟ್‌ ಸೇದುವವರಲ್ಲಿ ಹೃದಯ ರಕ್ತನಾಳದ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
2. ಹೃದಯ ಬಡಿತ ಜತೆಗೆ ರಕ್ತದೊತ್ತಡ ಹೆಚ್ಚಿಸುತ್ತದೆ.
3. ರಕ್ತದ ಪರಿಚಲನೆ ನಿಧಾನವಾಗಿ ಶ್ವಾಸಕೋಶ ಮತ್ತು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 
4. ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರ ಣ.
5. ಅಸ್ತಮಾ ರೋಗಿಗಳ ಮೇಲೆ ಬೀರುವ ಪರಿಣಾಮ ಭೀಕರವಾಗಿರುತ್ತದೆ.
6. ಎಲುಬು, ಹಲ್ಲುಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ.
7. ಮಧುಮೇಹ ಉಲ್ಬಣ.
8. ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ.

ರಮೇಶ್‌ ಬಳ್ಳಮೂಲೆ 

Advertisement

Udayavani is now on Telegram. Click here to join our channel and stay updated with the latest news.

Next