ಅದು ಆ. 15, 1936. ಬರ್ಲಿನ್ ಒಲಿಂಪಿಕ್ಸ್‌ನ ಹಾಕಿ ಪಂದ್ಯಾವಳಿಯ ಫೈನಲ್ ಪಂದ್ಯ. ಭಾರತ ಮತ್ತು ಜರ್ಮನಿ ಎದುರಾಳಿಗಳು. ಈ ಪಂದ್ಯವನ್ನು ಹಿಂದಿನ ಎರಡು ಬಾರಿಯ ಚಿನ್ನ ವಿಜೇತ ಭಾರತ 8-1ರ ಅಂತರದಿಂದ ಅಧಿಕಾರಯುತವಾಗಿ ಗೆದ್ದು ಬೀಗಿತ್ತು. ಭಾರತದ 8 ಗೋಲುಗಳಲ್ಲಿ 6 ಗೋಲುಗಳು ಬಂದಿದ್ದು ತಂಡದ ನಾಯಕನಿಂದ. ಈ ಆಟದಿಂದ ಬೆರಗಾದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಭಾರತ ತಂಡದ ನಾಯಕನಿಗೆ ಜರ್ಮನಿ ಸೈನ್ಯದಲ್ಲಿ ಹುದ್ದೆ, ಜರ್ಮನ್ ಪೌರತ್ವ ಹಾಗೂ ಕೊಲೋನೆಲ್ ಗೌರವ ಕೊಡುವುದಾಗಿ ಆಮಿಷ ಒಡ್ಡಿ ಜರ್ಮನ್‌ಗೆ ಬರುವಂತೆ ಆಹ್ವಾನಿಸಿದ್ದರು. ಆಗ ಆ ನಾಯಕ “ನಾನು ಭಾರತೀಯ. ನನ್ನ ಭಾರತದಲ್ಲಿ ನನ್ನವರೊಂದಿಗೆ ಇರುವುದೇ ನನ್ನ ಖುಷಿ. ಭಾರತವೇ ನನ್ನ ಜೀವಾತ್ಮ’ ಎಂದು ಅವರ ಪ್ರಸ್ತಾವವನ್ನು ನಾಜೂಕಾಗಿ ತಿರಸ್ಕರಿಸಿದ್ದರು.
ಅವರು ಬೇರಾರೂ ಅಲ್ಲ ಹಾಕಿ ಮಾಂತ್ರಿಕ, ಭಾರತದ ಹೆಮ್ಮೆಯ ಮೇಜರ್ ಧ್ಯಾನ್ ಚಂದ್. ಈ ಅಪ್ಪಟ ದೇಶಪ್ರೇಮಿ, ಹಾಕಿ ದಂತಕತೆಯ ಗೌರಾವಾರ್ಥವಾಗಿ 2012ರಿಂದ ಪ್ರತೀ ವರ್ಷ ಅವರ ಹುಟ್ಟಿದ ದಿನವಾದ ಆ. 29ನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಅಲ್ಲದೆ ಅಂದು ದೇಶದ ಕ್ರೀಡಾ ಸಾಧಕರಿಗೆ ದಿಲ್ಲಿಯ ರಾಷ್ಟ್ರಪತಿಭವನದಲ್ಲಿ ಖೇಲ್ ರತ್ನ, ದ್ರೋಣಾಚಾರ್ಯ, ಅರ್ಜುನ, ಏಕಲವ್ಯದಂತಹ ಪ್ರತಿಷ್ಠಿತ ಪ್ರಶಸ್ತಿಗಳ ಪ್ರದಾನ ಸಮಾರಂಭವೂ ನಡೆಯುತ್ತದೆ.
ಭಾರತ ಮಾತ್ರವಲ್ಲದೆ, ವಿಶ್ವದ ಶ್ರೇಷ್ಠ ಹಾಕಿಪಟು ಎನಿಸಿಕೊಂಡ ಧ್ಯಾನ್‌ಚಂದ್ 1905 ಆ. 29ರಂದು ಅಲಹಾಬಾದ್‌ನಲ್ಲಿ ಜನಿಸಿದರು. ತಂದೆ ಸೋಮೇಶ್ವರ್ ಸಿಂಗ್, ತಾಯಿ ಶಾರದಾ ಸಿಂಗ್. ತಮ್ಮ 16ನೇ ವಯಸ್ಸಿಗೆ ಧ್ಯಾನ್‌ಚಂದ್ ಬ್ರಿಟಿಷ್ ಇಂಡಿಯನ್ ಆರ್ಮಿ ಸೇರಿದ್ದರು. ಅಚ್ಚರಿ ಎಂದರೆ ಸೈನ್ಯ ಸೇರುವವರೆಗೂ ಅವರೊಬ್ಬ ಹಾಕಿಪಟು ಆಗಿರಲಿಲ್ಲ . ಸೈನ್ಯದಲ್ಲಿ ನಡೆಯುತ್ತಿದ್ದ ಸೌಹಾರ್ದ ಪಂದ್ಯದಲ್ಲಿ ಆಗಾಗ ಭಾಗವಹಿಸುತ್ತಿದ್ದರು. ಅನಂತರದಲ್ಲಿ ಅವರು ತರಬೇತಿಯನ್ನು ಪಡೆದು ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ 1928ರ ಒಲಿಂಪಿಕ್ಸ್‌ನಲ್ಲಿ ಬ್ರಿಟಿಷ್ ಇಂಡಿಯಾ ಹಾಕಿ ತಂಡಕ್ಕೆ ಆಯ್ಕೆಯಾದರು. ಅನಂತರದ್ದೆಲ್ಲ ಇತಿಹಾಸ.
1928, 1932, 1936 ಕ್ರಮವಾಗಿ ಒಲಂಪಿಕ್ಸ್ ನಲ್ಲಿ ಆಡಿದ ಧ್ಯಾನ್ ಚಂದ್ ಭಾರತಕ್ಕೆ ಮೂರು ಚಿನ್ನದ ಪದಕ ತಂದುಕೊಂಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಫುಟ್‌ಬಾಲ್‌ನಲ್ಲಿ ಫೀಲೆ, ಕ್ರಿಕೆಟ್‌ನಲ್ಲಿ ಬ್ರಾಡ್‌ಮಾನ್‌ನಂತೆ ಹಾಕಿ ಅಂದರೆ ಧ್ಯಾನ್ ಚಂದ್. ಈ ದಂತಕಥೆ ಹಾಕಿಯಲ್ಲಿ ನೆಟ್ಟ ಮೈಲಿಗಲ್ಲಿಗಳು ಅನೇಕ. ಇವರ ಆಟವನ್ನು ನೋಡಿ ಕ್ರಿಕೆಟ್ ದಂತಕಥೆ ಬ್ರಾಡ್‌ಮಾನ್ `ಧ್ಯಾನ್ ಚಂದ್ ಕ್ರಿಕೆಟ್‌ನಲ್ಲಿ ರನ್ ಗಳಿಸಿದಂತೆ ಗೋಲ್ ಬಾರಿಸುತ್ತಾರೆ’ ಎಂದು ಹೊಗಳಿದ್ದರು. ಒಮ್ಮೆ ಅಂಪೈರ್‌ಗಳು ಇವರ ಹಾಕಿ ಸ್ಟಿಕ್‌ನಲ್ಲಿ ಮ್ಯಾಗ್ನೆಟ್ ಇರಬಹುದೆಂಬ ಸಂಶಯದಿಂದ ಹಾಕಿ ಸ್ಟಿಕ್ ಮುರಿದು ನೋಡಿದ್ದು ಇದೇ ಎಂದರೆ ಇವರ ಆಟದ ಗುಣಮಟ್ಟ ಯಾವ ಮಟ್ಟಕ್ಕಿರಬಹುದು? ಈ ಸಾಧಕನ ಪುತ್ಥಳಿ ಭಾರತದಲ್ಲಿರುವುದು ವಿಶೇಷವಿಲ್ಲ. ಆದರೆ ಆಸ್ಟ್ರಿಯಾದ ವಿಯ್ನಮ್‌ನಲ್ಲಿ ಇವರ ಮೊದಲ ಪುತ್ಥಳಿ ಸ್ಥಾಪಿಸಲಾಯಿತು ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರು ಹರಿಸಿದ ಚಾಪು ಎಂಥದ್ದು ಎಂದು ಊಹಿಸಬಹುದು.
1949ರಲ್ಲಿ ನಿವೃತ್ತಿ ಪಡೆದ ಇವರು ತಮ್ಮ ಸುದೀರ್ಘ 23 ವರ್ಷದ ವೃತ್ತಿ ಬದುಕಿನಲ್ಲಿ 570 ಅಂತಾರಾಷ್ಟ್ರೀಯ ಗೋಲ್‌ಗಳನ್ನು ಬಾರಿಸಿದ್ದಾರೆ. ದೇಶೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆಯಾಗಿ 1,000 ಗೋಲುಗಳನ್ನು ಹೊಡೆದಿದ್ದಾರೆ. ಅಂದಹಾಗೆ ಇವರ ಆತ್ಮಕತೆಯ ಹೆಸರೇ `ಗೋಲ್’. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕೊಡುವ ದೇಶದ ಅತ್ಯುನ್ನತ್ತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಖೇಲ್ ರತ್ನ ಎಂದು ಹೆಸರಿಡುವ ಮೂಲಕ ಈ ಪದ್ಮ ಭೂಷಣನಿಗೆ ಗೌರವವನ್ನು ಸಲ್ಲಿಸಲಾಗಿದೆ. ಆದರೂ ಭಾರತದ ಹಾಕಿಯನ್ನು ವಿಶ್ವಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದ ಈ ಹಾಕಿ ಮಾಂತ್ರಿಕನಿಗೆ ದೇಶದ ಅತ್ಯುನ್ನತ್ತ ಪ್ರಶಸ್ತಿಯಾದ ಭಾರತ ರತ್ನ ನೀಡದಿರುವುದು ಬೇಸರದ ಸಂಗತಿ.
ಧ್ಯಾನ್ ಚಂದ್‌ರಂತಹ ಮೇರು ಆಟಗಾರರನ್ನು ಹೊಂದಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದ್ದ ಭಾರತದ ಪುರುಷರ ಹಾಕಿ ತಂಡ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. 1972ರ ಒಲಿಂಪಿಕ್ಸ್‌ನಲ್ಲಿ ಕಂಚಿಗೆ ತೃಪ್ತಿಪಟ್ಟ ತಂಡ ಅನಂತರ ಹಲವು ವರ್ಷ ಪದಕದ ವೇದಿಕೆಗೆ ಏರಲೇ ಇಲ್ಲ. 2021ರ ಒಲಿಂಪಿಕ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ನಿಧಾನಕ್ಕೆ ಹಳೆಯ ವೈಭವದ ಹಳಿಗೆ ಮರಳುವ ಯತ್ನ ನಡೆಸಿತು. ಇದೇ ಆಗಸ್ಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಲೇಷ್ಯಾವನ್ನು ಮಣಿಸಿ ಐದನೇ ಪ್ರಸ್ತಿ ಎತ್ತಿದ ಭಾರತ ಮುಂದಿನ ಒಲಿಂಪಿಕ್ಸ್‌ನಲ್ಲಿ ದೊಡ್ಡ ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದೆ.
ಭಾರತ ಎಂದರೆ ಕ್ರಿಕೆಟ್ ಅನ್ನುತ್ತಿದ್ದ ಕಾಲ ಈಗ ಬದಲಾಗಿದೆ. ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಲ್ಲಿಯೂ ಭಾರತದ ಪ್ರತಿಭೆಗಳು ಸಾಧನೆ ಮಾಡುತ್ತಿದ್ದಾರೆ. ಪಿ.ವಿ. ಸಿಂಧು, ನೀರಜ್ ಚೋಪ್ರಾ, ಲಕ್ಷ್ಯ ಸೇನ್, ಬಜರಂಗ ಪೂನಿಯಾ, ಮೀರಾಬಾಯಿ ಚಾನು ಮೊದಲಾದ ಯುವ ಪ್ರತಿಭೆಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ದಾಖಲೆಗಳನ್ನು ಬರೆಯುತ್ತಿದ್ದಾರೆ. ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತಷ್ಟು ಪದಕಗಳನ್ನು ಗೆಲ್ಲಲಿ, ಇನ್ನಷ್ಟು ಹೊಸ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂಬುದೇ ಕ್ರೀಡಾ ದಿನದ ಈ ಸಂದರ್ಭ ಎಲ್ಲರ ಹಾರೈಕೆಯಾಗಿದೆ.
-ಸುಶ್ಮಿತಾ ನೇರಳಕಟ್ಟೆ