Advertisement

ಪಂಚಾಯತ್‌ ರಾಜ್‌ ವ್ಯವಸ್ಥೆ ಗ್ರಾಮಾಡಳಿತಕ್ಕೆ ಪ್ರಜಾಪ್ರಾತಿನಿಧ್ಯದ ಮಾನ್ಯತೆ

12:16 AM Apr 24, 2022 | Team Udayavani |

ಸ್ವಾತಂತ್ರದ ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಭಾರತದಲ್ಲಿ ಪಂಚಾ ಯತ್‌ ರಾಜ್‌ ವ್ಯವಸ್ಥೆ ಸಶಕ್ತವಾಗಿ ಕಾರ್ಯನಿರ್ವ ಹಿಸುತ್ತಿದೆ. 1950ರ ದಶಕದಲ್ಲಿ ಗ್ರಾಮೀಣ ಭಾರತದ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.70 ರಷ್ಟಿತ್ತು. ಪ್ರಸ್ತುತ ನಗರೀಕರಣದ ಭರಾಟೆಯಿಂದ “ಗ್ರಾಮೀಣ ಭಾರತ’ ಎಂಬ ಕಲ್ಪನೆ ನಶಿಸಿ ಹೋಗಿ “ನಗರೀಕರಣಗೊಂಡ ಭಾರತ’ ಎಂಬ ಕಲ್ಪನೆ ನಮ್ಮ ಮನದಾಳದಲ್ಲಿ ಮೂಡುವುದು ಸಹಜ. ಆದರೂ ದೇಶದಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆ ಎಂಬ ಸಾಂವಿ ಧಾನಿಕ ವ್ಯವಸ್ಥೆ ಯಾರಿಗೂ ಅರಿವಿಲ್ಲದಂತೆ ಕೆಲಸ ಮಾಡುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿ.

Advertisement

ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ರವರು ಉತ್ಛರಿಸಿದ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಕುರುಹುಗಳನ್ನು ನಾವು ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಮಾತ್ರ ನೋಡಬಹುದು. ಭಾರತದಲ್ಲಿ ಪಂಚಾಯತ್‌ರಾಜ್‌ ಪರಿಕಲ್ಪನೆ ಹೊಸ ಅವಿಷ್ಕಾರ ವೇನೂ ಅಲ್ಲ. ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಹಳ್ಳಿಗಳ ಮಟ್ಟದಲ್ಲಿ ಆಡಳಿತ ವ್ಯವಸ್ಥೆ ಇತ್ತು ಎಂಬುದಿಲ್ಲಿ ಉಲ್ಲೇಖನೀಯ.

1952-53 ರಲ್ಲಿ ಭಾರತ ಸರಕಾರವು ಗ್ರಾಮೀಣ ಜನರನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸಮುದಾಯ ಅಭಿವೃದ್ಧಿ ಯೋಜನೆಮತ್ತು ರಾಷ್ಟ್ರೀಯ ವಿಸ್ತರಣ ಸೇವೆಯನ್ನು ಜಾರಿಗೊಳಿಸಿತ್ತು. ಈ ಎರಡೂ ಯೋಜನೆಯು ಸ್ವಾತಂತ್ರ್ಯ ಅನಂತರದ ಭಾರತದ ಗ್ರಾಮೀಣಾ ಭಿವೃದ್ಧಿಯ ಮೊದಲ ಯೋಜನೆಯಾಗಿತ್ತು. ಈ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಗ್ರಾಮೀಣ ಜನರಿಗೆ ತಲುಪಲು ಸಾಧ್ಯವಾಗಲಿಲ್ಲ. 1957ರಲ್ಲಿ ಬಲವಂತ್‌ರಾಯ್‌ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯಲ್ಲಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಶಿಫಾರಸು ಮಾಡಿ 3 ಹಂತದ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ರಚಿಸಲು ಆದ್ಯತೆಯನ್ನು ಕೊಟ್ಟಿತು. ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಪ್ರಥಮ ಬಾರಿಗೆ 1959ರ ಅಕ್ಟೋಬರ್‌ 2ರಂದು ಅಂದಿನ ಪ್ರಧಾನಿ ನೆಹರೂರವರು ರಾಜಸ್ಥಾನದ ನಾಗೂರು ಜಿಲ್ಲೆಯಲ್ಲಿ ಉದ್ಘಾಟಿಸಿದರು. 2020ನೇ ಜನವರಿಯ ವರದಿಯಂತೆ ಪ್ರಸ್ತುತ 670ಕ್ಕಿಂತಲೂ ಅಧಿಕ ಜಿಲ್ಲಾ ಪಂಚಾಯತ್‌ಗಳು, 6,800ಕ್ಕಿಂತಲೂ ಹೆಚ್ಚು ತಾಲೂಕು ಪಂಚಾಯತ್‌ಗಳು, 2,60,000ಕ್ಕಿಂತಲೂ ಹೆಚ್ಚು ಗ್ರಾಮ ಪಂಚಾಯತ್‌ಗಳು ದೇಶದಲ್ಲಿ ಸ್ಥಳೀಯ ಸರಕಾರಗಳಾಗಿ ಕೆಲಸ ಮಾಡುತ್ತಿವೆ. ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಸರಿ ಸುಮಾರು ದೇಶದಲ್ಲಿ 10 ಲಕ್ಷಕ್ಕೂ ಮಿಕ್ಕಿದ ಮಹಿಳಾ ಪ್ರತಿನಿಧಿಗಳ ಸಹಿತ 30 ಲಕ್ಷಕ್ಕೂ ಹೆಚ್ಚು ಜನಪ್ರತಿನಿಧಿಗಳಿರುವುದು ಜನಾಧಿಕಾರಕ್ಕೆ ಹಿಡಿದ ಕನ್ನಡಿಯಂತಿದೆ.

ಕರ್ನಾಟಕ ರಾಜ್ಯದಲ್ಲಿನ ಅಂಕಿ ಸಂಖ್ಯೆಯನ್ನು ತೆಗೆದುಕೊಂಡರೆ ರಾಜ್ಯದಲ್ಲಿ ಒಟ್ಟು 31 ಜಿ. ಪಂ., 226 ತಾ. ಪಂ. ಮತ್ತು 6,000ಕ್ಕೂ ಹೆಚ್ಚು ಗ್ರಾ. ಪಂ.ಗಳಿದ್ದು, 50 ಸಾವಿರಕ್ಕೂ ಹೆಚ್ಚು ಮಹಿಳಾ ಜನಪ್ರತಿನಿಧಿಗಳನ್ನೊಳಗೊಂಡಂತೆ ಸರಿ ಸುಮಾರು 1 ಲಕ್ಷಕ್ಕೂ ಮಿಕ್ಕಿ ಗ್ರಾಮಾಡಳಿತದ ಜನಪ್ರತಿನಿಧಿಗಳಿದ್ದಾರೆ. ಇವರು ಸ್ಥಳೀಯ ಸರಕಾರದ ಆಡಳಿತವನ್ನು ಗ್ರಾಮ ಸರಕಾರವಾಗಿ ಪಕ್ಷಭೇದ ಮರೆತು ನಡೆಸುತ್ತಿದ್ದಾರೆ.

1992ರ 73 ನೇ ಸಂವಿಧಾನ ತಿದ್ದುಪಡಿ ಕಾಯಿದೆಯು ಗ್ರಾ. ಪಂ., ತಾ. ಪಂ. ಹಾಗೂ ಜಿ. ಪಂ.ಎಂಬ 3 ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಈ ತಿದ್ದುಪಡಿ ಕಾಯಿದೆಯು 1993ರ ಎಪ್ರಿಲ್‌ 24 ರಂದು ರಾಷ್ಟ್ರಾದ್ಯಂತ ಅನುಷ್ಠಾನಕ್ಕೆ ಬಂದಿತು.

Advertisement

ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಎ. 24ರಂದು “ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನ’ ಎಂದು ಆಚರಿಸ ಲಾಗುತ್ತದೆ. ಈ ಆಚರಣೆಯನ್ನು ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯ ಆಯೋಜಿಸಿ ಕೊಂಡು ಬಂದಿದ್ದು, ಪ್ರತೀ ವರ್ಷವೂ ಉತ್ತಮ ಸಾಧನೆ ಮಾಡಿದ ರಾಜ್ಯ ಮತ್ತು ರಾಜ್ಯದ ಗ್ರಾ. ಪಂ.ಗೆ ಪ್ರಶಸ್ತಿಯನ್ನು ವಿತರಿಸಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಬಲವರ್ಧನೆಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದಂದು ಕೇಂದ್ರ ಸರಕಾರವು ಪ್ರಮುಖವಾಗಿ ನ್ಯಾನ್‌ಜಿ ದೇಶಮುಖ್‌ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ್‌, ದೀನ್‌ ದಯಾಳ್‌ ಉಪಾಧ್ಯಾಯ್‌ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರ, ಮಕ್ಕಳ ಸ್ನೇಹಿ ಗ್ರಾಮ ಸಭಾ ಪುರಸ್ಕಾರ, ಗ್ರಾ. ಪಂ. ಅಭಿವೃದ್ಧಿ ಯೋಜನಾ ಪುರಸ್ಕಾರವನ್ನು ಪ್ರಮುಖವಾಗಿ ನೀಡುತ್ತಾ ಬಂದಿದೆ. ಕರ್ನಾಟಕ ರಾಜ್ಯವು ಈ ಎಲ್ಲ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಕೊಂಡಿರುವುದು ಹೆಮ್ಮೆಯ ವಿಷಯ.

73 ನೇ ಸಂವಿಧಾನದ ತಿದ್ದುಪಡಿ ಕಾಯಿದೆಯು ಪ್ರತಿನಿಧಿ ಪ್ರಜಾಪ್ರಭುತ್ವವನ್ನು ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನಾಗಿಸಿದೆ. ಏಕೆಂದರೆ ಸಂವಿಧಾನದ 243 ಎ ವಿಧಿಯು ಗ್ರಾಮ ಸಭೆಯ ರಚನೆಗೆ ಅವಕಾಶ ಮಾಡಿಕೊಟ್ಟಿದ್ದು, ಗ್ರಾಮದ ನೋಂದಾಯಿತ ಮತದಾರರು ತಮ್ಮ ಗ್ರಾಮದ ಅಭಿವೃದ್ಧಿ ವಿಚಾರದಿಂದ ಹಿಡಿದು ನ್ಯೂನತೆಗಳನ್ನು ಸರಿಪಡಿಸಲು ಚರ್ಚೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದೆ.

ರಾಜ್ಯದ ಯಶೋಗಾಥೆ:
ಕರ್ನಾಟಕದಲ್ಲಿ 1983 ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರವು ಅಶೋಕ್‌ ಮೆಹತಾ ಸಮಿತಿಯ ಶಿಫಾರಸನ್ನು ಆಧರಿಸಿ 2 ಹಂತದ ಸ್ಥಳೀಯ ಸರಕಾರವನ್ನು ಸ್ಥಾಪಿಸಿತು. ಗ್ರಾಮ ಮಟ್ಟದಲ್ಲಿ ಮಂಡಲ ಪಂಚಾಯತ್‌ಗಳು ಅತ್ಯಂತ ಅದ್ಭುತವಾಗಿ ತನ್ನ ಕಾರ್ಯವನ್ನು ನಿರ್ವಹಿಸಿದವು. ಅಲ್ಲದೇ ದೇಶದ ಇತರ ರಾಜ್ಯಗಳಿಗೂ ಈ ಪ್ರಯೋಗ ಮಾದರಿಯಾಯಿತು. ಆ ಬಳಿಕ ರಾಜ್ಯದಲ್ಲಿ ತ್ರಿಸ್ತರದ ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಗೆ ಬಂದಿತು.

ಸ್ಥಳೀಯ ಸರಕಾರದ ಹೊಣೆಗಾರಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಅದನ್ನು ನಿಭಾಯಿಸುವಲ್ಲಿ ಆಡಳಿತ ಮಂಡಳಿಯಿಂದ ಹಿಡಿದು ಸಿಬಂದಿ ವರ್ಗವು ಬಹಳ ಪರಿಶ್ರಮವನ್ನು ಪಡುತ್ತಿದೆ. ಜನಸಹಭಾಗಿತ್ವಕ್ಕಾಗಿ ಜನವಸತಿ ಸಭೆ, ವಾರ್ಡ್‌ ಸಭೆ, ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಉತ್ತರದಾಯಿತ್ವದ ವಿಚಾರದ ಬಗ್ಗೆ ಹೇಳುವುದಾದರೆ ಪ್ರತೀ ವರ್ಷ ಗ್ರಾ. ಪಂ. ಲೆಕ್ಕಪತ್ರವನ್ನು ಗ್ರಾಮದ ಜನರ ಮುಂದೆ ಪರಿಶೀಲನೆಗೆ ಒಳಪಡಿಸಿ, ಜಮಾಬಂದಿಯ ಮೂಲಕ ಪಾರದರ್ಶಕತೆಯನ್ನು ಮೆರೆಯುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಸಕಾಲ ಸೇವೆಯನ್ನು ಅಳವಡಿಸಿಕೊಂಡಿದೆ. ಸ್ವತ್ಛತೆ, ನೈರ್ಮಲ್ಯದ ಸುಧಾರಣೆಗಾಗಿ ಪ್ರತೀ ಗ್ರಾ. ಪಂ.ನಲ್ಲೂ ಎನ್‌.ಆರ್‌.ಎಲ್‌.ಎಮ್‌. ಘಟಕ ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕ ಮತ್ತು ಆರೋಗ್ಯದ ನಿಟ್ಟಿನಲ್ಲಿ ಕೋವಿಡ್‌ ವಾರಿಯರ್ಸ್‌ನ್ನು ಗ್ರಾಮ ಮಟ್ಟದಲ್ಲಿ ನೇಮಕ ಮಾಡಿ ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ಎಲ್ಲವನ್ನೂ ನಿಭಾಯಿಸಬಲ್ಲೆವು ಎಂದು ತೋರಿಸಿಕೊಟ್ಟಿದ್ದು, ಗ್ರಾಮಾಡಳಿತದ ಕಾರ್ಯಕ್ಕೆ ಕನ್ನಡಿ ಹಿಡಿದಂತಿದೆ.

ಪಂಚಾಯತ್‌ ರಾಜ್‌ ಸಂಸ್ಥೆಗಳ ಬಲ ವರ್ಧನೆಗೆ ಸಾಮಾನ್ಯ ನಾಗರಿಕರಾದ ನಮಗೂ ಜವಾಬ್ದಾರಿಗಳಿವೆ. ಸ್ಥಳೀಯ ಸರಕಾರದ ಬಲವರ್ಧನೆಗೆ ಮತ್ತು ಅದರ ಆಶೋತ್ತರಗಳಿಗೆ ನಾವು ಸಹ ಟೊಂಕ ಕಟ್ಟಿ ನಿಲ್ಲಬೇಕು ಎನ್ನುವುದು ನಮ್ಮೆಲ್ಲರ ಆಶಯ.
(ಲೇಖಕರು ಪಂಚಾಯತ್‌
ಅಭಿವೃದ್ಧಿ ಅಧಿಕಾರಿ)

-ಹರೀಶ್‌ ಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next