Advertisement

ಇಂದು ಮೊಯ್ಲಿ, ಬಚ್ಚೇಗೌಡ, ದ್ವಾರಕನಾಥ್‌ ನಾಮಪತ್ರ

01:19 PM Mar 25, 2019 | Lakshmi GovindaRaju |

ಚಿಕ್ಕಬಳ್ಳಾಪುರ: ರಾಜಕೀಯ ಪಕ್ಷಗಳ ನಿದ್ದೆಗೆಡಿಸಿರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಯಸಿ ಸೋಮವಾರ ವಿವಿಧ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು ಕ್ಷಣಗಣನೆ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಪಕ್ಷಗಳ ಕಾರ್ಯಕರ್ತರ ಪ್ರವಾಹವೇ ಹರಿದು ಬರುವ ನಿರೀಕ್ಷೆ ಇದೆ.

Advertisement

ಮಂಗಳವಾರ ಕೊನೆ ದಿನ: ಕ್ಷೇತ್ರಕ್ಕೆ ಚುನಾವಣಾ ಆಧಿಸೂಚನೆ ಪ್ರಕಟಿಸಿದಾಗಿನಿಂದಲೂ ಇದುವರೆಗೂ ಜಯಪ್ರಕಾಶ ಜನತಾ ದಳ ಹಾಗೂ ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿಗಳ ಇಬ್ಬರು, ಪಕ್ಷೇತರರು ಸೇರಿ ಒಟ್ಟು ನಾಲ್ಕು ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದೆ. ಉಮೇದುವಾರಿಕೆ ಸಲ್ಲಿಸಲು ಮಂಗಳವಾರ ಕೊನೆ ದಿನ ಆಗಿರುವುದರಿಂದ ಇಂದೇ ವಿವಿಧ ಪ್ರಮುಖ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಯಾರ್ಯಾರು ಸಲ್ಲಿಸುತ್ತಾರೆ ನಾಮಪತ್ರ: ಕ್ಷೇತ್ರದ ಹಾಲಿ ಸಂಸದರಾಗಿರುವ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯೊಂದಿಗೆ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಸೋತಿದ್ದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವರಾದ ಹೊಸಕೋಟೆಯ ಬಿ.ಎನ್‌.ಬಚ್ಚೇಗೌಡ ಕೂಡ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಉಳಿದಂತೆ ಮಾರ್ಕ್ಸ್ವಾದಿ ಕಮ್ಯೂನಿಸ್ಟ್‌ ಪಕ್ಷ (ಸಿಪಿಎಂ) ಅಭ್ಯರ್ಥಿಯಾಗಿ ಎಸ್‌.ವರಲಕ್ಷ್ಮೀ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕನಾಥ್‌ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಎಲ್ಲಿಂದ ಯಾರ್ಯಾರು ಮೆರವಣಿಗೆ: ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಮೊದಲಿಗೆ ನಂದಿ ಭೋಗನಂದೀಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಯೇ 9:30ಕ್ಕೆ ಸುದ್ದಿಗೋಷ್ಠಿ ನಡೆಸಿ ಬೆಳಗ್ಗೆ 10:30ಕ್ಕೆ ಡೀಸಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಮೊಯ್ಲಿ ಜೊತೆಗೆ ಸಚಿವರಾದ ಶಿವಶಂಕರರೆಡ್ಡಿ, ಹೊಸಕೋಟೆಯ ಎಂಟಿಬಿ ನಾಗರಾಜ್‌ ಸೇರಿದಂತೆ ಕ್ಷೇತ್ರದ ಐದು ಮಂದಿ ಶಾಸಕರು ಸಾಥ್‌ ಕೊಡಲಿದ್ದಾರೆ.

Advertisement

ಬಚ್ಚೇಗೌಡ: ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ನಗರದ ಬಿಬಿ ರಸ್ತೆಯ ಶ್ರೀದೇವಿ ಪ್ಯಾಲೇಸ್‌ನಿಂದ 12 ಗಂಟೆಗೆ ಮೆರವಣಿಗೆ ನಡೆಸಲಿದ್ದು, ಮಧ್ಯಾಹ್ನ 2 ಗಂಟೆಗೆ ಡೀಸಿಗೆ ಉಮೇದುವಾರಿಕೆ ಸಲ್ಲಿಸಲಿದ್ದು, ಇವರಿಗೆ ಬಿಜೆಪಿ ಶಾಸಕರಾದ ಸಿ.ಟಿ.ರವಿ, ಎಸ್‌.ಆರ್‌.ವಿಶ್ವನಾಥ್‌, ಜಿಲ್ಲಾ ಪ್ರಭಾರಿ ಸಚ್ಚಿದಾನಂದಮೂರ್ತಿ, ಪ್ರಕಾಶ, ಸುಬ್ರಹ್ಮಣ್ಯ ನಾಯ್ಡು ಸಾಥ್‌ ಕೊಡಲಿದ್ದಾರೆ.

ಸಿಪಿಎಂ: ಪಕ್ಷದ ಅಭ್ಯರ್ಥಿ ಎಸ್‌.ವರಲಕ್ಷ್ಮೀ ನಗರದ ಬಿಬಿ ರಸ್ತೆಯ ಶನಿಮಹಾತ್ಮ ದೇವಾಲಯದಿಂದ ಮೆರವಣಿಗೆ ನಡೆಸಿ ಮಧ್ಯಾಹ್ನ 11:30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್‌ ಮತ್ತಿತರರು ಸಾಥ್‌ ಕೊಡಲಿದ್ದಾರೆ.

ಬಿಎಸ್‌ಪಿ: ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಾ.ಸಿ.ಎಸ್‌.ದ್ವಾರಕನಾಥ್‌ ಕೂಡ ಬೆಳಗ್ಗೆ 10:30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್‌, ಶಾಸಕ ಎನ್‌.ಮಹೇಶ್‌ ಮತ್ತಿತರರು ಭಾಗವಹಿಸುವ ನಿರೀಕ್ಷೆ ಇದೆ.

ಕಾರ್ಯಕರ್ತರ ಪ್ರವಾಹ ಹರಿಯುವ ಸಾಧ್ಯತೆ: ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ, ಬಿಜೆಪಿ, ಸಿಪಿಎಂ ಹಾಗೂ ಬಿಎಸ್ಪಿ ಪಕ್ಷದ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಇಟ್ಟುಕೊಂಡಿರುವುದರಿಂದ ಜಿಲ್ಲಾ ಕೇಂದ್ರಕ್ಕೆ ವಿವಿಧ ಪಕ್ಷಗಳ ಕಾರ್ಯಕರ್ತರ ಪ್ರವಾಹದ ದಂಡು ಹರಿದು ಬರುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ನಾಯಕರು 50 ಸಾವಿರ ಕಾರ್ಯಕರ್ತರನ್ನು ಕರೆ ತರುವ ಗುರಿ ಹೊಂದಿದ್ದರೆ, ಬಿಜೆಪಿ ಸುಮಾರು 30 ರಿಂದ 40 ಸಾವಿರ ಕಾರ್ಯಕರ್ತರನ್ನು ಕರೆ ತರುವ ಸಿದ್ಧತೆ ನಡೆಸಿದೆ. ಇನ್ನೂ ಸಿಪಿಎಂ ಕೂಡ 2 ರಿಂದ 3 ಸಾವಿರ ಕಾರ್ಯಕರ್ತರನ್ನು ಜಮಾವಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದು, ಬಿಎಸ್ಪಿ ಕೂಡ ಕಾರ್ಯಕರ್ತರನ್ನು ವಿಶೇಷವಾಗಿ ವಿವಿಧ ತಳ ಸಮುದಾಯಗಳ ಜನರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಮಗ್ನವಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಎಲ್ಲಾ ಪಕ್ಷಗಳುಸಮಾವೇಶಗಳನ್ನು ಆಯೋಜಿಸಿವೆ.

ನಾಮಪತ್ರ ಸಲ್ಲಿಕೆ ವೇಳೆ 5 ಮಂದಿಗೆ ಪ್ರವೇಶ: ಈಗಾಗಲೇ ಜಿಲ್ಲಾಡಳಿತ ಚುನಾವಣಾ ಅಧಿಸೂಚನೆ ಹೊರಬಿದ್ದ ದಿನದಿಂದಲೇ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ಇರುವ ಜಿಲ್ಲಾಡಳಿತ ಭವನದ ಸುತ್ತಲೂ 144 ಸೆಕ್ಷನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿ ಐವರಿಗೆ ಮಾತ್ರ ಅವಕಾಶ ಕಲ್ಪಿಸಿದೆ.

ಬಂದೋಬಸ್ತ್ಗೆ 400 ಮಂದಿ ಭದ್ರತಾ ಸಿಬ್ಬಂದಿ: ನಾಮಪತ್ರ ಸಲ್ಲಿಸಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬರುವುದರಿಂದ ಅಹಿಕತರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಭಾರೀ ಭದ್ರತೆ ಕೈಗೊಂಡಿದೆ.

ಈಗಾಗಲೇ ಜಿಲ್ಲಾಡಳಿತ ಭವನದ ಸುತ್ತಲೂ 144 ಸೆಕ್ಷನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಡೀಸಿ ಕಚೇರಿ ಮುಂದೆ ಕಾರ್ಯಕರ್ತರನ್ನು ತಡೆಯಲು ಬ್ಯಾರಿಕೇಡ್‌ ಹಾಕಲಾಗಿದೆ. ಬಂದೋಬಸ್ತ್ಗಾಗಿ 2 ಡಿವೈಎಸ್‌ಪಿ, 8 ಸಿಪಿಐ, 20 ಪಿಎಸ್‌ಐ, 200 ಮಂದಿ ಗೃಹ ರಕ್ಷಕರನ್ನು ಹಾಗೂ 200 ಮಂದಿ ನಾಗರಿಕ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಭಾನುವಾರ ಉದಯವಾಣಿಗೆ ತಿಳಿಸಿದರು.

ನೀತಿ ಸಂಹಿತೆ ಉಲ್ಲಲ್ಲಿಸಿದರೆ ಕ್ರಮ – ಎಸ್ಪಿ: ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಾರು ಕೂಡ ರಸ್ತೆಯ ಎರಡು ಬದಿಗಳನ್ನು ಬಂದ್‌ ಮಾಡಬಾರದು. ಅವರಾಗಿಯೇ ಅವರು ಮರ್ಯಾದೆಯಿಂದ ಮಾಡಿಕೊಂಡರೆ ಅವರಿಗೆ ಒಳ್ಳೆಯದು. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂ ಸಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದರು.

ಭದ್ರತೆಗೆ 400 ಕ್ಕೂ ಹೆಚ್ಚು ಗೃಹ ರಕ್ಷಕರನ್ನು ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಲಾಗಿದೆ.ಸಮಾವೇಶಗಳನ್ನು ನಡೆಸಲು ರಾಜಕೀಯ ಪಕ್ಷಗಳು ಅನುಮತಿ ಪಡೆದಿವೆ. ಸಾರ್ವಜನಿಕರಿಗೆ ತೊಂದರೆ ಆಗುವಂತೆ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next